

ಬೆಂಗಳೂರು: ಪರ್ತ್ ಟೆಸ್ಟ್ನಲ್ಲಿ ಆತಿಥೇಯ ಆಸ್ಟ್ರೆಲಿಯಾವನ್ನು ಕಂಗೆಡಿಸಿ ಭಾರತಕ್ಕೆ ಅಮೋಘ ಗೆಲುವು ತಂದುಕೊಡುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ವೇಗಿ ಜಸ್ಪ್ರೀತ್ ಬುಮ್ರಾ ಮತ್ತೊಂದು ಸಾಧನೆ ದಾಖಲಿಸಿದ್ದಾರೆ. ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಬುಮ್ರಾ 883 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಈ ಮೂಲಕ ರ‍್ಯಾಂಕಿಂಗ್ ಇತಿಹಾಸದಲ್ಲಿ ಗರಿಷ್ಠ ಅಂಕ ಕಲೆಹಾಕಿದ ಭಾರತೀಯ ವೇಗಿ ಎನಿಸಿದ್ದಾರೆ.
ಪರ್ತ್ ಟೆಸ್ಟ್ನಲ್ಲಿ ಬುಮ್ರಾ ಹಂಗಾಮಿ ನಾಯಕತ್ವದ ಜತೆಗೆ 72 ರನ್ಗಳಿಗೆ 8 ವಿಕೆಟ್ ಕಬಳಿಸಿ ಮಿಂಚಿದ್ದರು. ಮೊದಲ ಇನಿಂಗ್ಸ್ನಲ್ಲಿ ಅವರು 30 ರನ್ಗಳಿಗೆ 5 ವಿಕೆಟ್ ಉರುಳಿಸಿ ಆಸ್ಟ್ರೆಲಿಯಾವನ್ನು 104 ರನ್ಗಳಿಗೆ ನಿಯಂತ್ರಿಸಿದ್ದರು. ಈ ಮೂಲಕ ಅವರು ದ. ಆಫ್ರಿಕಾದ ಕಗಿಸೊ ರಬಾಡ ಮತ್ತು ಆಸ್ಟ್ರೆಲಿಯಾದ ಜೋಶ್ ಹ್ಯಾಸಲ್ವುಡ್ರನ್ನು ಹಿಂದಿಕ್ಕಿ, ಕಳೆದ ಅಕ್ಟೋಬರ್ ನಂತರ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಇದಕ್ಕೆ ಮುನ್ನ ಹಾಲಿ ವರ್ಷ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯ ವೇಳೆ ಅವರು ಮೊದಲ ಬಾರಿ ಅಗ್ರಸ್ಥಾನ ಅಲಂಕರಿಸಿದ್ದರು.
ಪರ್ತ್ನಲ್ಲಿ 5 ವಿಕೆಟ್ ಗಳಿಸಿದ ಮೊಹಮದ್ ಸಿರಾಜ್ 3 ಸ್ಥಾನ ಬಡ್ತಿಯೊಂದಿಗೆ 25ನೇ ಸ್ಥಾನಕ್ಕೇರಿದ್ದಾರೆ. ಪರ್ತ್ ಟೆಸ್ಟ್ ಆಡದಿದ್ದರೂ, ಆರ್. ಅಶ್ವಿನ್ 1 ಸ್ಥಾನ ಬಡ್ತಿಯೊಂದಿಗೆ 4ನೇ ಸ್ಥಾನಕ್ಕೇರಿದ್ದಾರೆ. ಆಸೀಸ್ ನಾಯಕ ಪ್ಯಾಟ್ ಕಮ್ಮಿನ್ಸ್ 4ರಿಂದ 6ನೇ ಸ್ಥಾನಕ್ಕೆ ಕುಸಿದಿರುವುದು ಇದಕ್ಕೆ ಕಾರಣವಾಗಿದೆ. ರವೀಂದ್ರ ಜಡೇಜಾ 7ನೇ ಸ್ಥಾನದಲ್ಲಿದ್ದು, ಅಗ್ರ 10ರೊಳಗಿರುವ ಮೂರನೇ ಭಾರತೀಯ ಬೌಲರ್ ಆಗಿದ್ದಾರೆ.
ಆಲ್ರೌಂಡರ್ ರ‍್ಯಾಂಕಿಂಗ್‌ನಲ್ಲಿ ಜಡೇಜಾ, ಅಶ್ವಿನ್ ಕ್ರಮವಾಗಿ ಮೊದಲೆರಡು ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
2ನೇ ಸ್ಥಾನಕ್ಕೇರಿದ ಜೈಸ್ವಾಲ್
ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ ಪರ್ತ್ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ 161 ರನ್ ಸಿಡಿಸಿದ ಸಾಧನೆಯೊಂದಿಗೆ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೇರಿದ್ದಾರೆ. ಜೈಸ್ವಾಲ್ 2 ಸ್ಥಾನ ಬಡ್ತಿಯೊಂದಿಗೆ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ ಮತ್ತು ಇಂಗ್ಲೆಂಡ್ ಹ್ಯಾರಿ ಬ್ರೂಕ್ ಅವರನ್ನು ಹಿಂದಿಕ್ಕಿದ್ದಾರೆ. ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ನ ಜೋ ರೂಟ್ಗಿಂತ ಜೈಸ್ವಾಲ್ (825) 78 ಅಂಕ ಹಿನ್ನಡೆಯಲ್ಲಿದ್ದಾರೆ. ಪರ್ತ್ನಲ್ಲಿ ಶತಕ ಸಿಡಿಸಿದ ಮತ್ತೋರ್ವ ಭಾರತೀಯ ವಿರಾಟ್ ಕೊಹ್ಲಿ 9 ಸ್ಥಾನ ಬಡ್ತಿಯೊಂದಿಗೆ 13ನೇ ಸ್ಥಾನಕ್ಕೇರಿದ್ದಾರೆ. ರಿಷಭ್ ಪಂತ್ 6ನೇ ಸ್ಥಾನ ಕಾಯ್ದುಕೊಂಡಿದ್ದಾರೆ.