ವೈಯಕ್ತಿಕ ಕಾರಣದಿಂದ ಅಂತಿಮ ಟೆಸ್ಟ್‌ನಿಂದ ಹೊರಗುಳಿದ ಜಸ್‌ಪ್ರೀತ್ ಬುಮ್ರಾ

bumrah for web
Published on

ಅಹಮದಾಬಾದ್: ಭಾರತ ತಂಡದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ, ವೈಯಕ್ತಿಕ ಕಾರಣದಿಂದ ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಈ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಣೆ ಹೊರಡಿಸಿದ್ದು, ಬುಮ್ರಾ ಬದಲಿಗೆ ಬದಲಿ ಆಟಗಾರನನ್ನು ಹೆಸರಿಸಿಲ್ಲ. ‘ವೈಯಕ್ತಿಕ ಕಾರಣದಿಂದ ತಂಡದಿಂದ ಬಿಡುಗಡೆ ಮಾಡುವಂತೆ ಬುಮ್ರಾ ಮನವಿ ಮಾಡಿಕೊಂಡಿದ್ದರು. ಇದರಿಂದ ಅವರ ಮನವಿಯನ್ನು ಪುರಸ್ಕರಿಸಲಾಗಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿದೆ. ಬುಮ್ರಾ ಅವರಿಗೆ ಇಂಗ್ಲೆಂಡ್ ವಿರುದ್ಧದ ನಿಗದಿತ ಓವರ್‌ಗಳ ಸರಣಿಯಿಂದ ಈಗಾಗಲೇ ವಿಶ್ರಾಂತಿ ನೀಡಲಾಗಿದೆ. 5 ಟಿ20, 3 ಏಕದಿನ ಪಂದ್ಯಗಳ ಸರಣಿ ಮಾರ್ಚ್ 12 ರಿಂದ ಆರಂಭಗೊಳ್ಳಲಿದೆ. 27 ವರ್ಷದ ಭಾರತದ ವೇಗಿ ಕಳೆದ ಆಗಸ್ಟ್ ತಿಂಗಳಿನಿಂದಲೂ ಬಯೋಬಬಲ್ ವ್ಯಾಪ್ತಿಯಲ್ಲೇ ಉಳಿದಿದ್ದಾರೆ.

ಐಪಿಎಲ್ ಮುಕ್ತಾಯಗೊಂಡ ಬಳಿಕ ಟೀಮ್ ಇಂಡಿಯಾ ಜತೆಗೂಡಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ಆಸ್ಟ್ರೇಲಿಯಾ ವಿರುದ್ಧ ಆಡಿದ 3 ಟೆಸ್ಟ್ ಪಂದ್ಯಗಳಿಂದ 11 ವಿಕೆಟ್ ಕಬಳಿಸಿದ್ದರು. ಗಾಯದ ಸಮಸ್ಯೆಯಿಂದಾಗಿ ಬ್ರಿಸ್ಬೇನ್‌ನಲ್ಲಿ ನಡೆದ ಕಡೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ್ದ ಬುಮ್ರಾ ಅವರಿಗೆ ಎರಡನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿತ್ತು. ಬುಮ್ರಾ ತವರು ಅಹಮದಾಬಾದ್‌ನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ವಿಕೆಟ್ ಕಬಳಿಸಿರಲಿಲ್ಲ. ಮತ್ತೊಂದೆಡೆ, ಇಂಗ್ಲೆಂಡ್ ತಂಡದ ಆಲ್ರೌಂಡರ್ ಕ್ರಿಸ್ ವೋಕ್ಸ್, ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಯ (ಇಸಿಬಿ) ಆವರ್ತನ ಪದ್ಧತಿ ಅನುಸಾರ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನವೇ ತವರಿಗೆ ಮರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net