

ನವ ದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ಗೆ ತಯಾರಿ ನಡೆಸುತ್ತಿರುವ ಹೊತ್ತಿನಲ್ಲೇ ಭಾರತ ತಂಡಕ್ಕೆ ಆಘಾತವಾಗಿದೆ. ತಂಡದ ಪ್ರಮುಖ ವೇಗೆ ಜಸ್ಪ್ರೀತ್ ಬುಮ್ರಾ ಬೆನ್ನು ನೋವು ಕಾರಣದಿಂದ ವಿಶ್ವಕಪ್ ತಂಡದಿಂದ ಹೊರ ಬಿದ್ದಿದ್ದಾರೆ.
ಬುಮ್ರಾ ಟಿ-20 ವಿಶ್ವಕಪ್ ಭಾರತ ತಂಡದ ಟ್ರಂಪ್ಕಾರ್ಡ್ ಬೌಲರ್ ಆಗಿದ್ದರು. ಹೀಗಾಗಿ ಭಾರತಕ್ಕೆ ಸರಣಿ ಆರಂಭಕ್ಕೂ ಮೊದಲು ಹಿನ್ನಡೆಯಾಗಿದೆ. ಇಂಜುರಿ ಸಮಸ್ಯೆಯಿಂದ ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್ ಸರಣಿಯಿಂದಲೂ ಬುಮ್ರಾ ಹಿಂದೆ ಸರಿದಿದ್ದರು. ನಂತರ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ-20 ಸರಣಿಯಲ್ಲಿ ತಂಡ ಕೂಡಿಕೊಂಡಿದ್ದರು. ಸದ್ಯ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ ತವರಿನ ಸರಣಿಯಿಂದ ಅರ್ಧದಿಂದಲೇ ಹೊರನಡೆದಿದ್ದಾರೆ.
ಏಷ್ಯಾಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಸಮಸ್ಯೆಯಾಗಿ ಪರಿಣಮಿಸಿದ್ದು ಡೆತ್ ಓವರ್ ಬೌಲಿಂಗ್. ಭಾರತದ ಬೌಲರ್ಗಳು ಡೆತ್ ಓವರ್ನಲ್ಲಿ ಎದುರಾಳಿ ತಂಡ ರನ್ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಕೂಡಾ ಡೆತ್ ಓವರ್ನಲ್ಲಿ ದುಬಾರಿಯಾಗಿದ್ದರು. ಹೀಗಾಗಿ ಬುಮ್ರಾ ಲಭ್ಯತೆ ಟಿ-20 ವಿಶ್ವಕಪ್ ದೃಷ್ಟಿಯಿಂದ ಭಾರತ ತಂಡಕ್ಕೆ ಪ್ರಮುಖವಾಗಿತ್ತು.