

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು ದಿಟ್ಟ ಪ್ರತಿರೋಧ ತೋರಿದ್ದು, ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿದ್ದು 181 ರನ್ಗಳಿಗೆ ಆಲೌಟ್ ಮಾಡಿದೆ. ಇನ್ನೂ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯಗೊಂಡಿದ್ದು, 2ನೇ ದಿನದಾಟದ ಮಧ್ಯದಲ್ಲಿ ಮೈದಾನ ತೊರೆದಿದ್ದಾರೆ. ಹಂಗಾಮಿ ನಾಯಕನಾಗಿ ವಿರಾಟ್ ಕೊಹ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಎರಡನೇ ದಿನದಾಟದ ಭೋಜನಾ ವಿರಾಮಕ್ಕೂ ಮುನ್ನ ಗಾಯದಿಂದಾಗಿ ಹೊರನಡೆದ ಬುಮ್ರಾ (Jasprit Bumrah) ಆ ಬಳಿಕ ತಂಡ ಫಿಸಿಯೋರೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ. ಬುಮ್ರಾ ಸ್ಕ್ಯಾನಿಂಗ್ಗೆ ಒಳಪಟ್ಟಿದ್ದು, ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರಾ ಅಥವಾ ಹೊರಬೀಳಲಿದ್ದಾರಾ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಹಂಗಾಮಿ ನಾಯಕರಾಗಿ ವಿರಾಟ್ ಕೊಹ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಷಗಳ ಬಳಿಕ ಮತ್ತೊಮ್ಮೆ ಕ್ಯಾಪ್ಟನ್ ಸ್ಥಾನವನ್ನು ಅಲಂಕರಿಸಿದ್ದಾರೆ.
ಇನ್ನೂ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದು, ಭಾರತಕ್ಕೆ ದೊಡ್ಡ ಹಿನ್ನಡೆ ಎಂದರೆ ತಪ್ಪಾಗಲಾರದು. ಹಾಲಿ ಸರಣಿಯಲ್ಲಿ 32 ವಿಕೆಟ್ಗಳನ್ನು ಪಡೆದಿರುವ ಬುಮ್ರಾ ಅನುಪಸ್ಥಿತಿ ಆಸ್ಟ್ರೇಲಿಯಾಗೆ ಪ್ಲಸ್ ಆಗಲಿದ್ದು, ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ.
ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್-ಗವಾಸ್ಕರ್ (Border-Gavaskar) ಟೆಸ್ಟ್ ಸರಣಿಯೂ ನವೆಂಬರ್ 22, 2024ರಂದು ಆರಂಭವಾಗಿದ್ದು, ಜನವರಿ 7, 2025ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.