ನಾವು ಟೆಸ್ಟ್​ ಸರಣಿ ಸೋತಿರಬಹುದು ಆದರೆ... ನಾಯಕ ಜಸ್​ಪ್ರೀತ್​ ಬುಮ್ರಾ ಹೇಳಿದ ಮಾತುಗಳಿವು! Jasprit Bumrah

Jasprit Bumrah
Published on

Jasprit Bumrah : ಟೀಮ್​ ಇಂಡಿಯಾ ತನ್ನ ಆಸ್ಟ್ರೇಲಿಯಾ ಪ್ರವಾಸವನ್ನು ಹೀನಾಯ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಆಸೀಸ್ ವಿರುದ್ಧ ಸಿಡ್ನಿಯಲ್ಲಿ ನಡೆದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್​ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಟೀಮ್​ ಇಂಡಿಯಾ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು 3-1 ಅಂತರದಿಂದ ಕಳೆದುಕೊಂಡಿತು.

ಮೊದಲ ಟೆಸ್ಟ್​ ಬಳಿಕ ಕೊನೆಯ ಟೆಸ್ಟ್​ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಂಡ ಸ್ಟಾರ್ ವೇಗಿ ಜಸ್​ಪ್ರೀತ್ ಬುಮ್ರಾ ಗಾಯದ ಕಾರಣದಿಂದಾಗಿ ಮೂರನೇ ದಿನದ ಆಟದಿಂದ ಹೊರಗುಳಿದರು. ಇದು ಭಾರತೀಯ ಬೌಲಿಂಗ್ ಘಟಕದ ಮೇಲೆ ನೇರ ಪರಿಣಾಮ ಬೀರಿತು. ಭಾರತ ನೀಡಿದ 167 ರನ್​ಗಳ ಅಲ್ಪ ಗುರಿಯನ್ನು ಆಸೀಸ್ ಕೇವಲ 27 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬೆನ್ನಟ್ಟಿತು. ಈ ಸೋಲಿನ ಬಗ್ಗೆ ಟೀಮ್​ ಇಂಡಿಯಾದ ಹಂಗಾಮಿ ನಾಯಕ ಜಸ್​ಪ್ರೀತ್​ ಬುಮ್ರಾ ಪ್ರತಿಕ್ರಿಯಿಸಿದ್ದಾರೆ. ಸರಣಿ ಸೋತರೂ ನಮ್ಮ ತಂಡ ಅದ್ಭುತ ಹೋರಾಟದ ಮನೋಭಾವವನ್ನು ತೋರಿದೆ ಎಂದು ಬುಮ್ರಾ ಹೇಳಿದರು.

ನಿರ್ಣಾಯಕ ಪಂದ್ಯದಲ್ಲಿ ಸೋತಿರುವುದು ಅತ್ಯಂತ ನಿರಾಸೆ ತಂದಿದೆ. ಅಲ್ಲದೆ ಎರಡನೇ ಇನ್ನಿಂಗ್ಸ್‌ನಲ್ಲಿ ಗಾಯದ ಸಮಸ್ಯೆಯಿಂದ ಬೌಲಿಂಗ್ ಮಾಡದೇ ಇರುವುದು ಕೊಂಚ ನಿರಾಸೆ ಮೂಡಿಸಿದೆ. ಆದರೆ, ಕೆಲವೊಮ್ಮೆ ನಾವು ನಮ್ಮ ದೇಹಕ್ಕೆ ಆದ್ಯತೆ ನೀಡಬೇಕು. ನಮ್ಮ ದೇಹದೊಂದಿಗೆ ಹೋರಾಡಲು ಸಾಧ್ಯವಿಲ್ಲ. ಈ ಸರಣಿಯಲ್ಲಿ ಬೌಲಿಂಗ್‌ಗೆ ಉತ್ತಮವಾದ ವಾತಾವರಣವಿದ್ದರೂ ವಿಕೆಟ್ ಪಡೆಯಲು ಹಿನ್ನಡೆ ಅನುಭವಿಸಿದ್ದಕ್ಕೆ ಕೊಂಚ ಬೇಸರವಿದೆ ಎಂದು ಬುಮ್ರಾ ಹೇಳಿದರು.

ಉಳಿದ ಬೌಲರ್‌ಗಳು ತಮ್ಮ ಜವಾಬ್ದಾರಿಯನ್ನು ಹೊತ್ತುಕೊಂಡು ಅದ್ಭುತ ಪ್ರದರ್ಶನ ನೀಡಿದರು. ಇಂದು ಬೆಳಗ್ಗೆ ನಾನು ಕೂಡ ನಮ್ಮ ಬೌಲರ್‌ಗಳೊಂದಿಗೆ ಮಾತನಾಡಿ ಅವರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸಿದೆ. ಕೊನೆಯ ಇನ್ನಿಂಗ್ಸ್‌ನಲ್ಲೂ ಅವರು ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನಾನು ಅವರಿಗೆ ಹೇಳಿದೆ. ನಾವು ಆಸ್ಟ್ರೇಲಿಯಾಕ್ಕೆ ಕಠಿಣ ಪೈಪೋಟಿ ನೀಡಿದ್ದೇವೆ. ಇಡೀ ಸರಣಿಯು ಚೆನ್ನಾಗಿತ್ತು. ಈ ಸರಣಿ ಏಕಪಕ್ಷೀಯವಾಗಿರಲಿಲ್ಲ. ಕೊನೆಯವರೆಗೂ ಅದ್ಭುತವಾಗಿ ಹೋರಾಡಿದೆವು ಎಂದರು.

ಆಟದಲ್ಲಿ ಉಳಿಯಲು ಎದುರಾಳಿಯ ಮೇಲೆ ಒತ್ತಡ ಹೇರುವುದು ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಆಡುವುದು ಬಹಳ ಮುಖ್ಯ. ಈ ಸರಣಿಯಿಂದ ನಾವು ಸಾಕಷ್ಟು ಕಲಿತಿದ್ದೇವೆ. ಭವಿಷ್ಯದಲ್ಲಿ ನಮ್ಮ ಆಟಗಾರರು ಖಂಡಿತವಾಗಿಯೂ ಸೂಕ್ತ ಉತ್ತರದೊಂದಿಗೆ ಬರುತ್ತಾರೆ. ನಮ್ಮ ತಂಡದ ಹಲವು ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿರುವುದು ಇದೇ ಮೊದಲು. ಅವರಿಗೂ ಆಟದ ಅನುಭವ ಸಿಕ್ಕಿದೆ. ಈ ಸರಣಿಯ ಮೂಲಕ ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ ಎಂದು ಜಗತ್ತಿಗೆ ತೋರಿಸಿದ್ದೇವೆ. ನಾವು ಗೆಲ್ಲದಿದ್ದಕ್ಕೆ ಹುಡುಗರು ನಿರಾಸೆಗೊಂಡಿದ್ದಾರೆ. ಆದರೆ ಈ ಸೋಲಿನಿಂದ ಅವರು ಸಾಕಷ್ಟು ಕಲಿಯುತ್ತಾರೆ. ಆಸ್ಟ್ರೇಲಿಯಾಕ್ಕೆ ಅಭಿನಂದನೆಗಳು ಗೆಲುವಿಗಾಗಿ ಅವರು ಅದ್ಭುತವಾಗಿ ಹೋರಾಡಿದರು ಎಂದು ಬುಮ್ರಾ ಪಂದ್ಯದ ನಂತರ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net