ಹರಿಣಗಳ ನಾಡಿನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ ಟೀಮ್ ಇಂಡಿಯಾ: ಡೀನ್ ಎಲ್ಗರ್‌ ಸೋಲಿನ ವಿದಾಯ

New-Project
Published on

ಕೇಪ್‌ಟೌನ್: ವೇಗದ ಬೌಲರ್‌ಗಳು ಸಂಪೂರ್ಣ ಪಾರಮ್ಯ ಮೆರೆದ ಟೆಸ್ಟ್‌ನಲ್ಲಿ ಭಾರತ ತಂಡ ಗೆಲುವಿನ ಕೇಕೆ ಹಾಕುವುದರೊಂದಿಗೆ ಹರಿಣಗಳ ನಾಡಿನಲ್ಲಿ ಎರಡನೇ ಬಾರಿಗೆ ಟೆಸ್ಟ್ ಸರಣಿ ಸಮಬಲ ಸಾಧಿಸಿದ ಐತಿಹಾಸಿಕ ಸಾಧನೆ ದಾಖಲಿಸಿದೆ. ಉಪನಾಯಕ ಜಸ್‌ಪ್ರೀತ್ ಬುಮ್ರಾ (61ಕ್ಕೆ 6) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಒಂದೂವರೆ ದಿನದಾಟದಲ್ಲೇ 7 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಹೊಸ ವರ್ಷವನ್ನು ಗೆಲುವಿನೊಂದಿಗೆ ಆರಂಭಿಸಿದ ರೋಹಿತ್ ಶರ್ಮ ಪಡೆ 1-1 ಸಮಬಲ ಸಾಧಿಸಿ, ‘ಸರಣಿ ಸೋಲು’ ಇಲ್ಲದೆ ಹರಿಣಗಳ ನಾಡಿನ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಏಕದಿನ ಸರಣಿಯಲ್ಲಿ 2-1ರಿಂದ ಜಯಿಸಿದ್ದ ಟೀಮ್ ಇಂಡಿಯಾ, ಸೂರ್ಯಕುಮಾರ್ ಸಾರಥ್ಯದಲ್ಲಿ ಟಿ20ಯಲ್ಲೂ ಸಮಬಲ ಸಾಧಿಸಿತ್ತು.

ಡೀನ್ ಎಲ್ಗರ್‌ಗೆ ಸೋಲಿನ ವಿದಾಯ: ಟೆಂಬಾ ಬವುಮಾ ಗೈರಿನಲ್ಲಿ ವಿದಾಯದ ಟೆಸ್ಟ್ ಪಂದ್ಯದಲ್ಲಿ ನಾಯಕತ್ವ ಪಡೆದ ಡೀನ್ ಎಲ್ಗರ್ ಟೆಸ್ಟ್ ಕ್ರಿಕೆಟ್‌ಗೆ ಸೋಲಿನ ವಿದಾಯ ಹೇಳಿದರು. ಆದರೆ ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ (12 ವಿಕೆಟ್) ಜತೆಗೆ ಎಲ್ಗರ್ ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರು. 36 ವರ್ಷದ ಎಲ್ಗರ್, 86 ಪಂದ್ಯಗಳಲ್ಲಿ 14 ಶತಕ, 23 ಅರ್ಧಶತಕದೊಂದಿಗೆ 5,347 ರನ್ ಕಲೆಹಾಕಿದ್ದಾರೆ. ಟೀಮ್ ಇಂಡಿಯಾ ಆಟಗಾರರ ಹಸ್ತಾಕ್ಷರವುಳ್ಳ ಜೆರ್ಸಿಯನ್ನು ನಾಯಕ ರೋಹಿತ್ ಶರ್ಮ ಅವರಿಂದ ಉಡುಗೋರೆಯಾಗಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net