

Asia Cup: ಮುಂಬರುವ ಏಷ್ಯಾ ಕಪ್ಗೆ ಮುನ್ನ ಭಾರತಕ್ಕೆ ಶುಭಸುದ್ದಿ ದೊರೆತಿದ್ದು, ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ, ಯುಎಇಯಲ್ಲಿ ನಡೆಯಲಿರುವ ಟಿ20 ಟೂರ್ನಮೆಂಟ್ನಲ್ಲಿ ಭಾಗವಹಿಸಲು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ (ಆಗಸ್ಟ್ 19) ಮುಂಬೈನಲ್ಲಿ ಆಯ್ಕೆದಾರರು ಸಭೆ ಸೇರಿ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆ ಇದ್ದು, ಏಷ್ಯಾ ಕಪ್ ಆಯ್ಕೆಗೆ ಬುಮ್ರಾ ಲಭ್ಯವಿರುವುದಾಗಿ ಮೂಲವೊಂದು ತಿಳಿಸಿದೆ.
ಕಳೆದ ವರ್ಷದ ನಡೆದ ಟಿ20 ವಿಶ್ವಕಪ್ ಬಳಿಕ ಬುಮ್ರಾ, ಭಾರತ ಪರ ವೈಟ್-ಬಾಲ್ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿಲ್ಲ, ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಟ್ರೋಪಿ ಗೆಲ್ಲಲು ಬುಮ್ರಾ ಪ್ರಮುಖ ಪಾತ್ರ ವಹಿಸಿದ್ದರು. ಏಷ್ಯಾಕಪ್ ಟಿ20 ಮಾದರಿಯಲ್ಲಿ ನಡೆಯುವುದರಿಂದ, ಪ್ರತಿ ಪಂದ್ಯದಲ್ಲೂ ನಾಲ್ಕೇ ಓವರ್ಗಳನ್ನು ಬೌಲ್ ಮಾಡಬೇಕಿರುವುದರಿಂದ ಬುಮ್ರಾರ ಗಾಯದ ಬಗ್ಗೆ ಆತಂಕ ಕಡಿಮೆ ಎನ್ನಲಾಗಿದೆ.
ಏಷ್ಯಾಕಪ್ ಸಲುವಾಗಿ ಭಾರತ, ಯುಎಇಗೆ ಬೇಗನೆ ಪ್ರಯಾಣಿಸುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿ ಪೂರ್ವಸಿದ್ಧತಾ ಶಿಬಿರದ ಕಲ್ಪನೆಯನ್ನು ಬಿಸಿಸಿಐ ಮುಂದಿಟ್ಟಿದ್ದರೂ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಆಡಳಿತ ಮಂಡಳಿಯು ಮುಂಚಿತವಾಗಿಯೇ ಎಮಿರೇಟ್ಸ್ಗೆ ತೆರಳಲು ಉತ್ಸುಕತೆ ತೋರಿದೆ. ಇಲ್ಲಿನ ಮೈದಾನಗಳ ಬದಲು ಅಲ್ಲಿಯೇ ಅಭ್ಯಾಸ ನಡೆಸುವುದರಿಂದ ಒಂದು ಹಂತದ ಪೂರ್ವ ತಯಾರಿ ನಡೆಯುತ್ತದೆ ಮತ್ತು ಮೈದಾನದ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗುತ್ತದೆ ಎಂದು ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.
ವರ್ಷ್ಯಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಬುಮ್ರಾ ತಂಡಕ್ಕೆ ಮರಳಿರುವುದು ಲಾಭದಾಯಕವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್)