

ಲಂಡನ್: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ನಲ್ಲಿ 5 ವಿಕೆಟ್ ಗೊಂಚಲು ಪಡೆದರು. ಈ ಮೂಲಕ ವಿದೇಶಿ ನೆಲದಲ್ಲಿ 13ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು ಮತ್ತು ದಿಗ್ಗಜ ಕಪಿಲ್ ದೇವ್ (12) ಅವರನ್ನು ಹಿಂದಿಕ್ಕಿ ವಿದೇಶದಲ್ಲಿ ಗರಿಷ್ಠ 5 ವಿಕೆಟ್ ಗೊಂಚಲು ಪಡೆದ ಭಾರತೀಯ ಬೌಲರ್ ಎನಿಸಿದರು.
ಕಪಿಲ್ ದೇವ್ ವಿದೇಶದಲ್ಲಿ 66 ಟೆಸ್ಟ್ ಆಡಿದ್ದರೆ, ಬುಮ್ರಾ 35 ಟೆಸ್ಟ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ. ಅನಿಲ್ ಕುಂಬ್ಳೆ (10), ಇಶಾಂತ್ ಶರ್ಮ (9) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಬುಮ್ರಾ ಒಟ್ಟಾರೆಯಾಗಿ 15ನೇ ಬಾರಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರು. ಈ ಮೂಲಕ ಲಾರ್ಡ್ಸ್ ಆನರ್ಸ್ ಬೋರ್ಡ್ನಲ್ಲಿ ಮೊದಲ ಬಾರಿ ಹೆಸರು ಬರೆಸಿದರು. ಬುಮ್ರಾ ಲಾರ್ಡ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದ 15ನೇ ಭಾರತೀಯ ಬೌಲರ್ ಆಗಿದ್ದಾರೆ.
ರೂಟ್ ಶತಕಗಳ ದಾಖಲೆ
ಮೊದಲ ದಿನದಂತ್ಯಕ್ಕೆ 99 ರನ್ ಗಳಿಸಿ ಅಜೇಯರಾಗಿದ್ದ ಅನುಭವಿ ಬ್ಯಾಟರ್ ಜೋ ರೂಟ್, 2ನೇ ದಿನ ಬುಮ್ರಾ ಎಸೆದ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿ ಹಲವು ದಾಖಲೆಗಳನ್ನೂ ಬರೆದರು. ಇದು ರೂಟ್ ಟೆಸ್ಟ್ ಕ್ರಿಕೆಟ್ನಲ್ಲಿ ಸಿಡಿಸಿದ 37ನೇ, ಭಾರತದ ವಿರುದ್ಧ 11ನೇ, ಲಾರ್ಡ್ಸ್ನಲ್ಲಿ 8ನೇ ಮತ್ತು ಇಂಗ್ಲೆಂಡ್ ನೆಲದಲ್ಲಿ 22ನೇ ಶತಕವೆನಿಸಿದೆ. ಈ ಮೂಲಕ ಅವರು ಟೆಸ್ಟ್ ಕ್ರಿಕೆಟ್ ಗರಿಷ್ಠ ಶತಕ ಸಾಧಕರಲ್ಲಿ ರಾಹುಲ್ ದ್ರಾವಿಡ್ ಮತ್ತು ಸ್ಟೀವನ್ ಸ್ಮಿತ್ರನ್ನು (ತಲಾ 36) ಹಿಂದಿಕ್ಕಿ ಅಗ್ರ 5ರೊಳಗೆ ಪ್ರವೇಶಿಸಿದರು. ಸಚಿನ್ ತೆಂಡುಲ್ಕರ್ (51), ಜಾಕ್ಸ್ ಕಾಲಿಸ್ (45), ರಿಕಿ ಪಾಂಟಿಂಗ್ (41), ಕುಮಾರ ಸಂಗಕ್ಕರ (38) ಮೊದಲ 4 ಸ್ಥಾನದಲ್ಲಿದ್ದಾರೆ. ಹಾಲಿ ಕ್ರಿಕೆಟಿಗರ ಪೈಕಿ ಗರಿಷ್ಠ ಟೆಸ್ಟ್ ಶತಕ ಸಾಧನೆ ರೂಟ್ ಅವರದಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಸಿಡಿಸಿದ ಸಕ್ರಿಯ ಕ್ರಿಕೆಟಿಗರಲ್ಲಿ ರೂಟ್ (55) 2ನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ (82) ಅಗ್ರಸ್ಥಾನದಲ್ಲಿದ್ದಾರೆ. ಭಾರತ ವಿರುದ್ಧ ಗರಿಷ್ಠ ಟೆಸ್ಟ್ ಶತಕ ಸಿಡಿಸಿದ ಸ್ಟೀವನ್ ಸ್ಮಿತ್ (11) ಜತೆ ದಾಖಲೆ ಹಂಚಿಕೊಂಡರು. ಲಾರ್ಡ್ಸ್ ಮೈದಾನದಲ್ಲಿ ರೂಟ್ ಸಿಡಿಸಿದ ಸತತ 3ನೇ ಶತಕವೂ ಇದಾಗಿದೆ. ಈ ಮೂಲಕ ಮೈಕೆಲ್ ವಾನ್ (2004-05), ಜಾಕ್ ಹಾಬ್ಸ್ (1912-26), ದಿಲೀಪ್ ವೆಂಗ್ಸರ್ಕಾರ್ (1979-86) ಸಾಧನೆ ಸರಿಗಟ್ಟಿದರು.