VIDEO: ಕೊನೇ 4 ಎಸೆತಗಳಲ್ಲಿ 4 ವಿಕೆಟ್! ಆಂಗ್ಲರೆದುರು ಹೋಲ್ಡರ್ ವಿಶೇಷ ಸಾಧನೆ

holder web
Published on

ಬ್ರಿಜ್‌ಟೌನ್: ಆಲ್ರೌಂಡರ್ ಜೇಸನ್ ಹೋಲ್ಡರ್ (27ಕ್ಕೆ 5) ಅವರ ಮಾರಕ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ 17 ರನ್‌ಗಳಿಂದ ಶರಣಾಯಿತು. ಈ ಮೂಲಕ ವಿಂಡೀಸ್ ತಂಡ 3-2ರಿಂದ ಸರಣಿ ವಶಪಡಿಸಿಕೊಂಡಿತು. ಸೋಲಿನ ನಡುವೆಯೂ ಇಂಗ್ಲೆಂಡ್ ಐಸಿಸಿ ಟಿ20 ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ವಿಂಡೀಸ್ 10ನೇ ಸ್ಥಾನದಲ್ಲೇ ಉಳಿದಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ವಿಂಡೀಸ್ 4 ವಿಕೆಟ್‌ಗೆ 179 ರನ್ ಪೇರಿಸಿತು. ಪ್ರತಿಯಾಗಿ ಇಂಗ್ಲೆಂಡ್ 19.5 ಓವರ್‌ಗಳಲ್ಲಿ 162 ರನ್‌ಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

4 ಎಸೆತಕ್ಕೆ 4 ವಿಕೆಟ್ ಕಬಳಿಸಿದ ಹೋಲ್ಡರ್!

ಪಂದ್ಯದ ಕೊನೇ ಓವರ್‌ನಲ್ಲಿ ಇಂಗ್ಲೆಂಡ್ ಗೆಲುವಿಗೆ 20 ರನ್ ಬೇಕಿತ್ತು. ಆಗ ದಾಳಿಗಿಳಿದ ಜೇಸನ್ ಹೋಲ್ಡರ್ ಎಸೆದ ಮೊದಲ ಎಸೆತ ನೋ ಬಾಲ್ ಆಗಿತ್ತು. ಅದರಲ್ಲಿ ಸ್ಯಾಮ್ ಬಿಲ್ಲಿಂಗ್ಸ್ ಸಿಂಗಲ್ಸ್ ಕಸಿದರು. ಓವರ್‌ನ ವಿಧಿಬದ್ಧ ಮೊದಲ ಎಸೆತದಲ್ಲಿ ಕ್ರಿಸ್ ಜೋರ್ಡನ್ ರನ್ ಗಳಿಸಲಿಲ್ಲ. ನಂತರದ 4 ಎಸೆತಗಳಲ್ಲಿ ಹೋಲ್ಡರ್‌ಗೆ ಜೋರ್ಡನ್ (7), ಬಿಲ್ಲಿಂಗ್ಸ್ (41), ಆದಿಲ್ ರಶೀದ್ (0) ಮತ್ತು ಸಕಿಬ್ ಮೊಹಮದ್ (0) ವಿಕೆಟ್ ಒಪ್ಪಿಸಿದರು. ಅಲ್ಲಿಗೆ ಆಂಗ್ಲರ ಇನಿಂಗ್ಸ್ ಮುಕ್ತಾಯಗೊಂಡಿತು. ಇದರಿಂದ 5ನೇ ಎಸೆತದಲ್ಲೂ ವಿಕೆಟ್ ಕಬಳಿಸಲು ಅವಕಾಶ ಇಲ್ಲದಾಯಿತು. ಹೋಲ್ಡರ್ ಟಿ20 ಕ್ರಿಕೆಟ್‌ನಲ್ಲಿ ಸತತ 4 ಎಸೆತಗಳಲ್ಲಿ ವಿಕೆಟ್ ಕಬಳಿಸಿದ 4ನೇ ಬೌಲರ್ ಎನಿಸಿದರು. ಅ್ಘಾನಿಸ್ತಾನದ ರಶೀದ್ ಖಾನ್, ಶ್ರೀಲಂಕಾದ ಲಸಿತ್ ಮಾಲಿಂಗ ಮತ್ತು ಐರ್ಲೆಂಡ್‌ನ ಕರ್ಟಿಸ್ ಕ್ಯಾಂಪರ್ ಮೊದಲ ಮೂವರು. ಜೇಸನ್ ಹೋಲ್ಡರ್ ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ವಿಂಡೀಸ್ ಬೌಲರ್ ಎನಿಸಿದರು.

ವೆಸ್ಟ್ ಇಂಡೀಸ್: 4 ವಿಕೆಟ್‌ಗೆ 179 (ಬ್ರೆಂಡನ್ ಕಿಂಗ್ 34, ಮೇಯರ್ಸ್‌ 31, ಪೂರನ್ 21, ಪೊಲ್ಲಾರ್ಡ್ 41*, ಪೊವೆಲ್ 35*, ರಶೀದ್ 17ಕ್ಕೆ 2, ಲಿವಿಂಗ್‌ಸ್ಟೋನ್ 17ಕ್ಕೆ 2), ಇಂಗ್ಲೆಂಡ್: 19.5 ಓವರ್‌ಗಳಲ್ಲಿ 162 (ಜೇಸನ್ ರಾಯ್ 8, ವಿನ್ಸ್ 55, ಮೊಯಿನ್ ಅಲಿ 14, ಬಿಲ್ಲಿಂಗ್ಸ್ 41, ಹೋಲ್ಡರ್ 27ಕ್ಕೆ 5, ಹುಸೇನ್ 30ಕ್ಕೆ 4). ಪಂದ್ಯಶ್ರೇಷ್ಠ-ಸರಣಿಶ್ರೇಷ್ಠ: ಜೇಸನ್ ಹೋಲ್ಡರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net