VIDEO | ಲೀಡ್ಸ್ ಟೆಸ್ಟ್‌ನಲ್ಲಿ ಭಾರತ ಪರ ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ಪ್ರೇಕ್ಷಕ!

fan web
Published on

ಲೀಡ್ಸ್: ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಟೀಮ್ ಇಂಡಿಯಾದ ಜೆರ್ಸಿ ಧರಿಸಿ ಮೈದಾನಕ್ಕೆ ನುಗ್ಗಿ ಫೀಲ್ಡಿಂಗ್ ಮಾಡಲು ಮುಂದಾಗಿದ್ದ ‘ಜಾರ್ವೋ’ ಹೆಸರಿನ ಇಂಗ್ಲೆಂಡ್ ಪ್ರೇಕ್ಷಕ, ಲೀಡ್ಸ್ ಟೆಸ್ಟ್ ಪಂದ್ಯದ ವೇಳೆ ಭಾರತ ತಂಡದ ಪರ ಬ್ಯಾಟಿಂಗ್ ಮಾಡಲು ಮುಂದಾಗಿ ಮತ್ತೆ ಸುದ್ದಿಯಾಗಿದ್ದಾನೆ!

ಭಾರತ-ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಚಹಾ ವಿರಾಮದ ಬಳಿಕ ರೋಹಿತ್ ಶರ್ಮ ಔಟಾಗಿ ನಿರ್ಗಮಿಸಿದಾಗ ಈ ಪ್ರೇಕ್ಷಕ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಬ್ಯಾಟ್ಸ್‌ಮನ್ ರೀತಿಯಲ್ಲಿ ಮೈದಾನಕ್ಕೆ ನುಗ್ಗಿದ. ಈ ಮೂಲಕ ಭಾರತ ತಂಡದ 4ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಎನ್ನುವ ರೀತಿಯಲ್ಲಿ ವರ್ತಿಸಿದ. ಆಗ ಮೈದಾನದ ಭದ್ರತಾ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಎಳೆದೊಯ್ದರು.

‘ಜಾರ್ವೋ 69’ ಎಂದು ಆತನ ಬೆನ್ನ ಹಿಂದೆ ಬರೆದಿತ್ತು. ಆತ ಇಂಗ್ಲೆಂಡ್‌ನ ಜನಪ್ರಿಯ ‘ಪ್ರಾಂಕ್‌ಸ್ಟಾರ್’ ಎಂದೂ ಹೇಳಲಾಗಿದೆ. ಈ ಬಾರಿಯೂ ಆತ ಭಾರತೀಯ ಜೆರ್ಸಿ ಧರಿಸಿದ್ದ. ಜತೆಗೆ ಸರ್ಜಿಕಲ್ ಮಾಸ್ಕ್ ಕೂಡ ಧರಿಸಿದ್ದ. ಇದೊಂದು ತಮಾಷೆಯ ಘಟನೆಯಾಗಿದ್ದರೂ, ಭದ್ರತಾ ಮತ್ತು ಬಯೋಬಬಲ್ ಉಲ್ಲಂಘನೆಯ ಆತಂಕವನ್ನು ಸೃಷ್ಟಿಸಿದೆ.

ಲಾರ್ಡ್ಸ್‌ನಲ್ಲಿ ಆತನ ಫೀಲ್ಡಿಂಗ್‌ಗೆ ಮುಂದಾಗಿದ್ದಲ್ಲದೆ, ಭದ್ರತಾ ಸಿಬ್ಬಂದಿ ಹೊರದಬ್ಬಲು ಮುಂದಾದಾಗ, ಬಿಸಿಸಿಐ ಲಾಂಛನದ ಕಡೆಗೆ ತೋರಿಸಿ ತಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ್ದ. ಆ ವೇಳೆ ಮೊಹಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಜೋರಾಗಿ ನಕ್ಕಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net