

ಬ್ಲೂಮ್ಫಾಂಟೆನ್: ಸೂರ್ಯೋದಯದ ನಾಡು ಎಂದು ಕರೆಸಿ ಕೊಳ್ಳುವ ಜಪಾನ್, 19 ವಯೋಮಿತಿ ಏಕದಿನ ವಿಶ್ವಕಪ್ನಲ್ಲಿ ಕ್ರಿಕೆಟ್ ಶಕ್ತಿಕೇಂದ್ರ ಭಾರತದ ವಿರುದ್ಧ ದಯನೀಯ ಸೋಲಿಗೆ ಶರಣಾಗಿದೆ. ಅದರೊಂದಿಗೆ ಎ ಗುಂಪಿನಲ್ಲಿ ಸತತ 2ನೇ ಗೆಲುವು ದಾಖಲಿಸಿದ ಭಾರತ ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟಿದೆ.
ಮಂಗಾಂಗ್ ಓವಲ್ನಲ್ಲಿ ಮಂಗಳವಾರ ನಡೆದ ಟಾಸ್ ಗೆದ್ದ ಭಾರತ ತಂಡದ ನಾಯಕ ಪ್ರಿಯಂ ಗಾರ್ಗ್ ಬೌಲಿಂಗ್ ಆಯ್ದುಕೊಂಡರು. ಎರಡು ಗಂಟೆಗೂ ಕಡಿಮೆ ಅವಧಿಯಲ್ಲಿ ಜಪಾನ್ ತಂಡವನ್ನು 22.5 ಓವರ್ಗಳಲ್ಲಿ ಕೇವಲ 41 ರನ್ಗೆ ಆಲೌಟ್ ಮಾಡಿದ ಭಾರತ, ಪ್ರತಿಯಾಗಿ 29 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42 ರನ್ ಬಾರಿಸುವ ಮೂಲಕ 10 ವಿಕೆಟ್ ಗೆಲುವು ಕಂಡಿತು. ಜಪಾನ್ ಬಾರಿಸಿದ ಮೊತ್ತ 19 ವಯೋಮಿತಿ ವಿಶ್ವಕಪ್ ಇತಿಹಾಸದಲ್ಲಿ ಜಂಟಿ ಕನಿಷ್ಠ ಮೊತ್ತವೆನಿಸಿದೆ.
ಐಪಿಎಲ್ನಲ್ಲಿ ಇತ್ತೀಚೆಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿಕೊಂಡಿರುವ ಲೆಗ್ಸ್ಪಿನ್ನರ್ ರವಿ ಬಿಷ್ಣೋಯಿ 5 ರನ್ಗೆ 4 ವಿಕೆಟ್ ಉರುಳಿಸಿದರು. ಅದರಲ್ಲೂ ತಾವು ಎಸೆದ ಮೊದಲ ಎರಡು ಎಸೆತಗಳಲ್ಲಿಯೇ ಅವರು ಎರಡು ವಿಕೆಟ್ ಉರುಳಿಸಿ ಜಪಾನ್ನ ಬ್ಯಾಟಿಂಗ್ ವಿಭಾಗದ ದಿಕ್ಕು ತಪ್ಪಿಸಿದ್ದರು. ಬಲಗೈ ವೇಗಿ ಕಾರ್ತಿಕ್ ತ್ಯಾಗಿ ಮೂರು ವಿಕೆಟ್ ಉರುಳಿಸಿದೆರೆ, ಎಡಗೈ ವೇಗಿ ಆಕಾಶ್ ಸಿಂಗ್ ಕೆಳ ಕ್ರಮಾಂಕದ ಎರಡು ವಿಕೆಟ್ ಪಡೆದರು. ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಕರ್ನಾಟಕದ ವೇಗಿ ವಿದ್ಯಾಧರ್ ಪಾಟೀಲ್, ಒಂದು ವಿಕೆಟ್ ಪಡೆದು ಗಮನಸೆಳೆದರು. ಜಪಾನ್ ಗಳಿಸಿದ ಮೊತ್ತದಲ್ಲಿ ಗರಿಷ್ಠ ಕಾಣಿಕೆ ಬಂದಿದ್ದು, ಇತರ ರನ್ಗಳಿಂದ. ಭಾರತ ತಂಡ 19 ಇತರ ರನ್ಗಳನ್ನು ನೀಡಿದ್ದರಲ್ಲಿ 12 ರನ್ ವೈಡ್ ಮೂಲಕವೇ ಬಂದಿತ್ತು. ಜಪಾನ್ ಪರವಾಗಿ ಆರಂಭಿಕರಾದ ಶು ನೊಗುಚಿ ಹಾಗೂ 8ನೇ ಕ್ರಮಾಂಕದ ಆಟಗಾರ ಕೆಂಟೋ ಡೊಬೆಲ್ ತಲಾ 7 ರನ್ ಗಳಿಸಿದ್ದೇ ಜಪಾನ್ ಪರವಾಗಿ ಗರಿಷ್ಠ ಮೊತ್ತವೆನಿಸಿತ್ತು. ಐವರು ಬ್ಯಾಟ್ಸ್ಮನ್ಗಳು ಶೂನ್ಯಕ್ಕೆ ಔಟಾಗಿದ್ದರು.
ಜಪಾನ್: 22.5 ಓವರ್ಗಳಲ್ಲಿ 41 (ಶು ನೊಗುಚಿ 7, ಡೊಬೆಲ್ 7, ಬಿಷ್ಣೋಯಿ 5ಕ್ಕೆ 4, ಕಾರ್ತಿಕ್ ತ್ಯಾಗಿ 10ಕ್ಕೆ 3, ಆಕಾಶ್ ಸಿಂಗ್ 11ಕ್ಕೆ 2, ವಿದ್ಯಾಧರ್ ಪಾಟೀಲ್ 8ಕ್ಕೆ 1), ಭಾರತ: 4.5 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 42 (ಯಶಸ್ವಿ ಜೈಸ್ವಾಲ್ 29*, ಕುಮಾರ್ ಕುಶಾಗ್ರ 11).
ಸವಾಲೇ ಇಲ್ಲದೆ ಮೊತ್ತ ಬೆನ್ನಟ್ಟಿದ ಯುವ ಭಾರತ
ಭಾರತ ತಂಡದ ಚೇಸಿಂಗ್ ಕೂಡ ಒಂಚೂರು ಸವಾಲೇ ಇಲ್ಲದಂತೆ ನಡೆಯಿತು. ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಕುಮಾರ್ ಕುಶಾಗ್ರ ಹಾಗೂ ಯಶಸ್ವಿ ಜೈಸ್ವಾಲ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿದರು. ಯಶಸ್ವಿ ಜೈಸಾಲ್ 18 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 29 ರನ್ ಬಾರಿಸಿದರೆ, ಕುಶಾಗ್ರ 11 ಎಸೆತಗಳಲ್ಲಿ 13 ರನ್ ಸಿಡಿಸಿದರು. ಶಾಶ್ವತ್ ರಾವತ್ ಪಂದ್ಯದಲ್ಲಿ ಆಡಿದರೂ, ಫೀಲ್ಡಿಂಗ್, ಬೌಲಿಂಗ್ ಹಾಗೂ ಬ್ಯಾಟಿಂಗ್ ಯಾವುದರಲ್ಲೂ ತಮ್ಮ ಹೆಸರನ್ನು ದಾಖಲಿಸಿಕೊಳ್ಳಲು ವಿಫಲರಾದರು.