

ಲಂಡನ್: ವಿಶ್ವ ನಂ.1 ಹಾಗೂ ಇಟಲಿ ಜನ್ನಿಕ್ ಸಿನ್ನರ್ ವಿಂಬಲ್ಡನ್ ಟೆನಿಸ್ ಟೂರ್ನಿ ಕ್ವಾರ್ಟರ್‌ಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ. ಇದರೊಂದಿಗೆ ಪುರುಷರ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಅಗ್ರಶ್ರೇಯಾಂಕಿತರು ಹೊರಬಿದ್ದಂತಾಗಿದೆ. ರಷ್ಯಾದ ಡೇನಿಯಲ್ ಮೆಡ್ವೆಡೆವ್ ಹಾಗೂ ಮಹಿಳಾ ವಿಭಾಗದಲ್ಲಿ ಕ್ರೊವೇಷಿಯಾದ ಡೊನ್ನಾ ವೆಕಿಕ್ ಸೆಮಿಫೈನಲ್‌ಗೇರಿದ್ದಾರೆ.
ಸೆಂಟರ್ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಸಿಂಗಲ್ಸ್ ಕ್ವಾರ್ಟರ್‌ೈನಲ್‌ನಲ್ಲಿ ಜನ್ನಿಕ್ ಸಿನ್ನರ್ 7-6 (9-7), 4-6, 6-7 (4-7), 6-2, 6-3 ರಿಂದ ಐದು ಸೆಟ್‌ಗಳ ಸುದೀರ್ಘ ಹೋರಾಟದಲ್ಲಿ 5ನೇ ಶ್ರೇಯಾಂಕಿತ ಡೇನಿಯಲ್ ಮೆಡ್ವೆಡೆವ್ ಎದುರು ಸೋಲುಂಡರು. ಭರ್ತಿ 4 ಗಂಟೆಯ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಮೊದಲ ಸೆಟ್ ವಶಪಡಿಸಿಕೊಂಡ ಸಿನ್ನರ್‌ಗೆ, ನಂತರ ಎರಡು ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಮೆಡ್ವೆಡೆವ್ ತಿರುಗೇಟು ನೀಡಿದರು. ಗಾಯದ ಸಮಸ್ಯೆ ಎದುರಿಸಿದ ಸಿನ್ನರ್ 4ನೇ ಸೆಟ್ ವಶಪಡಿಸಿಕೊಂಡು ಪಂದ್ಯವನ್ನು ನಿರ್ಣಾಯಕ 5ನೇ ಸೆಟ್‌ಗೆ ವಿಸ್ತರಿಸಿದರು. ಐದನೇ ಸೆಟ್‌ನಲ್ಲಿ ಸಿನ್ನರ್ ಸವಾಲು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಮೆಡ್ವೆಡೆವ್ ವಿಂಬಲ್ಡನ್‌ನಲ್ಲಿ 2ನೇ ಬಾರಿ ಉಪಾಂತ್ಯಕ್ಕೇರಿದರು.
ಮೊದಲ ಬಾರಿ ಸೆಮೀಸ್‌ಗೆ ವೆಕಿಕ್: ಶ್ರೇಯಾಂಕರಹಿತ ಕ್ರೊವೇಷಿಯಾ ಆಟಗಾರ್ತಿ ಡೊನ್ನಾ ವೆಕಿಕ್ ಕ್ವಾರ್ಟರ್‌ೈನಲ್‌ನಲ್ಲಿ 5-7, 6-4, 6-1 ರಿಂದ ಅರ್ಹತಾ ಸುತ್ತಿನ ನ್ಯೂಜಿಲೆಂಡ್ ಆಟಗಾರ್ತಿ ಲುಲು ಸುನ್ ಎದುರು ಗೆಲುವು ದಾಖಲಿಸಿದರು. ಇದರೊಂದಿಗೆ ವೃತ್ತಿ ಜೀವನದ ಮೊದಲ ಗ್ರಾಂಡ್ ಸ್ಲಾಂ ಸೆಮೀಸ್‌ಗೇರಿದ ಸಾಧನೆ ಮಾಡಿದರು. 2 ಗಂಟೆ 8 ನಿಮಿಷಗಳ ಕಾದಾಟದಲ್ಲಿ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ವೆಕಿಕ್, ನಂತರ 2 ಸೆಟ್‌ಗಳಲ್ಲಿ ಮೇಲುಗೈ ಸಾಧಿಸಿ ಮುಕ್ತ ಟೆನಿಸ್ ಯುಗದಲ್ಲಿ ಉಪಾಂತ್ಯಕ್ಕೇರಿದ ಕ್ರೊವೇಷಿಯಾದ 3ನೇ ಮಹಿಳಾ ಆಟಗಾರ್ತಿ ಎನಿಸಿದರು.