ಕರ್ನಾಟಕಕ್ಕೆ ಜಮ್ಮು ಕಾಶ್ಮೀರ ಎದುರಾಳಿ

ranaji cricket
Published on

ಜಮ್ಮು: ವಿವಿಧ ಕಾರಣಗಳಿಂದಾಗಿ ಸದಾ ಸುದ್ದಿಯಲ್ಲಿರುವ ಮೂಲಕ ಅತಿ ಸೂಕ್ಷ್ಮ ಪ್ರದೇಶ ಎಂದು ಕರೆಸಿಕೊಳ್ಳುವ ಕಣಿವೆ ರಾಜ್ಯದಲ್ಲೀಗ ಕ್ರಿಕೆಟ್ ಕಲರವ. 86 ವರ್ಷ ಇತಿಹಾಸದ ರಣಜಿ ಟ್ರೋಫಿ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಚಳಿಗಾಲದ ರಾಜಧಾನಿ ಎಂಟರಘಟ್ಟದ ಪಂದ್ಯಕ್ಕೆ ವೇದಿಕೆಯಾಗಿದೆ. 8 ಬಾರಿ ಚಾಂಪಿಯನ್ ಕರ್ನಾಟಕ ಹಾಗೂ ಆತಿಥೇಯ ಜಮ್ಮು ಕಾಶ್ಮೀರ ತಂಡಗಳು ಎದುರಾಗಿರುತ್ತಿರುವ ಈ ಪಂದ್ಯ ದೇಶೀಯ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯಲು ಸಜ್ಜಾಗಿದೆ.

ಗಾಂಧಿ ಸ್ಮಾರಕ ವಿಜ್ಞಾನ ಕಾಲೇಜು ಮೈದಾನದಲ್ಲಿ ಗುರುವಾರದಿಂದ ನಡೆಯಲಿದೆ. ಲಾಜಿಸ್ಟಿಕ್ ಸೇರಿದಂತೆ ಕೆಲ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿಗೆ ಪಂದ್ಯ ಸ್ಥಳಾಂತರಿಸುವಂತೆ ಕೆಎಸ್​ಸಿಎ ಮಾಡಿಕೊಂಡ ಮನವಿಗೂ ಬಗ್ಗದ ಜಮ್ಮು ಕಾಶ್ಮೀರ ಕ್ರಿಕೆಟ್ ಮಂಡಳಿ ಪ್ರತಿಷ್ಠಿತ ಪಂದ್ಯಕ್ಕೆ ಆತಿಥ್ಯ ವಹಿಸಿದೆ. ಇತರ ಕ್ವಾರ್ಟರ್​ಫೈನಲ್ ಪಂದ್ಯಗಳಿಗಿಂತಲೂ ಈ ಪಂದ್ಯ ಹೆಚ್ಚು ಗಮನಸೆಳೆದಿದೆ.

ಸತತ 4ನೇ ಬಾರಿ ಎಂಟರಘಟ್ಟಕ್ಕೇರಿರುವ ಕರ್ನಾಟಕ ತಂಡ ಲೀಗ್ ಹಂತದಲ್ಲಿ ಸಾಧಾರಣ ನಿರ್ವಹಣೆಯೊಂದಿಗೆ ಅಂತಿಮ 8ರ ಹಂತ ತಲುಪಿದೆ. ಸ್ಟಾರ್ ಆಟಗಾರರ ಅನುಪಸ್ಥಿತಿ ನಡುವೆಯೂ ತಮಿಳುನಾಡು, ಮುಂಬೈ, ರೈಲ್ವೇಸ್ ಹಾಗೂ ಬರೋಡ ಎದುರು ಜಯ ಸಾಧಿಸಿ ಎಂಟರಘಟ್ಟಕ್ಕೇರುವ ಕರ್ನಾಟಕ ತಂಡ ಮೇಲ್ನೋಟಕ್ಕೆ ಫೇವರಿಟ್ ಎನಿಸಿದೆ. ಆದರೆ, ಕ್ರಿಕೆಟ್​ನಲ್ಲಿ ಯಾವುದೂ ಅಸಾಧ್ಯವಿಲ್ಲ. ಇದರಿಂದ ಕರುಣ್ ನಾಯರ್ ಪಡೆಗೆ ಎಚ್ಚರಿಕೆ ನಿರ್ವಹಣೆಯ ಅಗತ್ಯವಿದೆ. ಕೊನೇ ಎರಡು ಲೀಗ್ ಪಂದ್ಯಗಳಲ್ಲಿ ಕಳಪೆ ಫೀಲ್ಡಿಂಗ್​ನಿಂದ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಈ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕಿದೆ.

ಟೀಮ್ ನ್ಯೂಸ್

ಕರ್ನಾಟಕ

ಲೀಗ್​ನುದ್ದಕ್ಕೂ ಅಜೇಯ ಸಾಧನೆ ಮಾಡಿದ್ದರೂ ಇದುವರೆಗೂ ಬ್ಯಾಟಿಂಗ್ ವಿಭಾಗದಿಂದ ನಿರೀಕ್ಷಿತ ನಿರ್ವಹಣೆ ಕಂಡುಬಂದಿಲ್ಲ. ಸಮರ್ಥ್ ಹೊರತುಪಡಿಸಿ ಯಾವೊಬ್ಬ ಬ್ಯಾಟ್ಸ್​ಮನ್​ಗಳು ಶತಕ ದಾಖಲಿಸಿಲ್ಲ. ಕರ್ನಾಟಕ ಪರ ದಾಖಲಾಗಿರುವ ಏಕೈಕ ಶತಕ ಕೂಡ ಇದಾಗಿದೆ. ದೇವದತ್ ಪಡಿಕಲ್ ನಿರ್ವಹಣೆ ಪಂದ್ಯದಿಂದ ಪಂದ್ಯಕ್ಕೆ ಕ್ಷೀಣಿಸುತ್ತಿದೆ. ಇದೀಗ ಮನೀಪ್ ಪಾಂಡೆ ಆಗಮನದಿಂದಾಗಿ ಬ್ಯಾಟಿಂಗ್ ವಿಭಾಗಕ್ಕೆ ಬಲ ಬಂದಂತಾಗಿದೆ. ಲೀಗ್​ನ ಕಡೇ ಪಂದ್ಯದಲ್ಲಿ ಬರೋಡ ಎದುರು ರಾಹುಲ್ ದ್ರಾವಿಡ್ ಸಲಹೆ ಬಳಿಕ ನಾಯಕ ಕರುಣ್ ನಾಯರ್ ಬ್ಯಾಟಿಂಗ್​ನಲ್ಲಿ ಮಾಡಿಕೊಂಡ ಬದಲಾವಣೆಯಿಂದ ಲಯಕ್ಕೆ ಬಂದಿರುವುದು ಕೊಂಚ ಸಮಾಧಾನಕರ ಅಂಶ. ಸಮರ್ಥ್ ಹಾಗೂ ಪಡಿಕಲ್ ಆರಂಭಿಕರಾಗಿ ಕಣಕ್ಕಿಳಿಯುವುದು ನಿಶ್ಚಿತ. ಮನೀಷ್ ಆಗಮನದಿಂದಾಗಿ ಪವನ್ ದೇಶಪಾಂಡೆ ಅಥವಾ ಶ್ರೇಯಸ್ ಗೋಪಾಲ್ ಇಬ್ಬರಲ್ಲಿ ಒಬ್ಬರು ಹೊರಗುಳಿಯುವ ಸಾಧ್ಯತೆಗಳಿವೆ. ಸತತ ವೈಫಲ್ಯ ಕಾಣುತ್ತಿರುವ ಶ್ರೇಯಸ್ ಗೋಪಾಲ್ ಸ್ಥಾನ ಉಳಿಸಿಕೊಳ್ಳುವುದು ಅನುಮಾನವಾಗಿದೆ. ಬೌಲಿಂಗ್ ವಿಭಾಗದಲ್ಲಿ ಅನುಭವಿ ರೋನಿತ್ ಮೋರೆ ಅಥವಾ ಪ್ರತೀಕ್ ಜೈನ್ ಇಬ್ಬರಲ್ಲಿ ಒಬ್ಬರು ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜಮ್ಮು ಕಾಶ್ಮೀರ

ಎಲೈಟ್ ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಎಂಟರಘಟ್ಟಕ್ಕೇರಿರುವ ಜಮ್ಮು ಕಾಶ್ಮೀರ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಬಾರಿಗೆ ಬಲಿಷ್ಠ ತಂಡ ಎದುರಾಗಿದೆ. ಲೀಗ್ ಹಂತದಲ್ಲಿ ಆಡಿದ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಜಮ್ಮು ಕಾಶ್ಮೀರ, ಕಡೇ ಪಂದ್ಯದಲ್ಲಿ ಹರಿಯಾಣ ತಂಡಕ್ಕೆ ಶರಣಾಗಿತ್ತು. ಅಬ್ದುಲ್ ಸಮದ್ (547ರನ್), ಆಲ್ರೌಂಡರ್ ಪರ್ವೆಜ್ ರಸೂಲ್ (511) ಜೋಡಿ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದೆ. ಉಮರ್ ನಜೀರ್ (28 ವಿಕೆಟ್), ಮೊಹಮದ್ ಮುದಾಸಿರ್ (26ವಿಕೆಟ್) ಜೋಡಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ. ರಾಷ್ಟ್ರೀಯ ತಂಡ ಪ್ರತಿನಿಧಿಸಿದ ಏಕೈಕ ಜಮ್ಮು ಕಾಶ್ಮೀರ ಆಟಗಾರ ಎನಿಸಿರುವ ಪರ್ವೆಜ್ ರಸೂಲ್ ಆಲ್ರೌಂಡ್ ನಿರ್ವಹಣೆಯೇ ತಂಡದ ಶಕ್ತಿಯಾಗಿದೆ. ತವರು ನೆಲದಲ್ಲಿ ಇದುವರೆಗೂ ಜಯದ ಖಾತೆ ತೆರೆಯಲು ವಿಫಲವಾಗಿರುವ ಆತಿಥೇಯ ತಂಡ ಸಹಜವಾಗಿ ಒತ್ತಡದಲ್ಲಿಯೇ ಇದೆ.

ಜೆಕೆ ಯಶಸ್ಸಿನಲ್ಲಿ ಕೋಚ್ ದೊಡ್ಡ ಪಾತ್ರ!

ಹಾಲಿ ಋತುವಿನಲ್ಲಿ ಜಮ್ಮು ಕಾಶ್ಮೀರ ತಂಡದ ಯಶಸ್ಸಿನಲ್ಲಿ ಕೋಚ್ ಮಿಲಾಪ್ ಮೇವಾಡ ಹಾಗೂ ಮೆಂಟರ್ ಇರ್ಫಾನ್ ಪಠಾಣ್ ಪಾತ್ರ ಹಿರಿದು. ಜಮ್ಮು ಮತ್ತು ಕಾಶ್ಮೀರ ಎನ್ನುವ ಹೆಸರಿನಲ್ಲಿ ನಾವು ‘ಮತ್ತು’ ಎನ್ನುವ ಶಬ್ದ ತೆಗೆದು ಹಾಕಲು ಪ್ರಯತ್ನಿಸಿದೆ. ಹಿಂದಿನಿಂದಲೂ ತಂಡದಲ್ಲಿ ಎರಡು ಬಣ ಇದ್ದವು. ಜಮ್ಮು ಆಟಗಾರರು ಹಾಗೂ ಕಾಶ್ಮೀರದ ಆಟಗಾರರು. ಈ ಬಾರಿ ತಂಡವನ್ನು ಕೇವಲ ಜೆಕೆ ಎನ್ನುವ ಹೆಸರಿನಲ್ಲಿ ಮಾತ್ರವೇ ಪರಿಚಯ ಮಾಡಿದ್ದೆವು ಎಂದು ಮಿಲಾಪ್ ತಿಳಿಸುತ್ತಾರೆ. ಅದಲ್ಲದೆ, ಋತುವಿನ ಆರಂಭದಲ್ಲಿ ಇರ್ಫಾನ್ ಪಠಾಣ್ ಹಾಗೂ ಮಿಲಾಪ್ ಮೇವಾಡ ಒಂದು ಪ್ರಶ್ನೆಗಳ ಸರಣಿಯನ್ನು ಆಟಗಾರರಿಗೆ ನೀಡಿದ್ದರು. ಇದರಲ್ಲಿ ಜಮ್ಮು ಕಾಶ್ಮೀರ ಎಷ್ಟು ವರ್ಷಗಳಿಂದ ರಣಜಿ ಟ್ರೋಫಿ ಆಡುತ್ತಿದೆ ಎಂದು ಕೇಳಲಾಗಿತ್ತು. ಪ್ರತಿ ಆಟಗಾರರು ಒಂದೊಂದು ರೀತಿಯ ಉತ್ತರವನ್ನು ನೀಡಿದ್ದರು. ಅದರ ನಂತರ ಮತ್ತೊಂದು ಪ್ರಶ್ನೆಯನ್ನು ಕೇಳಲಾಗಿತ್ತು. ಜಮ್ಮು ಕಾಶ್ಮೀರ ಈವರೆಗೂ ಎಷ್ಟು ದೇಶೀಯ ಟ್ರೋಫಿಗಳನ್ನು ಗೆದ್ದಿದೆ ಎಂದು ಪ್ರಶ್ನಿಸಲಾಗಿತ್ತು. ‘ಯಾರೊಬ್ಬರೂ ಇದಕ್ಕೆ ತಪು್ಪ ಉತ್ತರ ನೀಡಲಿಲ್ಲ’ ಎಂದು ಮಿಲಾಪ್ ತಿಳಿಸಿದರು. ಆಗ ಅವರಿಗೆ ನಾನು ಹೇಳಿದೆ. ‘ಜಮ್ಮು ಕಾಶ್ಮೀರ ಕಳೆದ 50 ವರ್ಷಗಳಿಂದ ರಣಜಿ ಟ್ರೋಫಿಯಲ್ಲಿ ಆಡುತ್ತಿದೆ. ಆದರೆ, ಈವರೆಗೂ ಏನನ್ನೂ ಗೆದ್ದಿಲ್ಲ. ಕೇವಲ ಇನ್ನೊಂದು ರಣಜಿ ಋತು ಆಡಬೇಕು ಎನ್ನುವ ಕಾರಣಕ್ಕಾಗಿ ಯಾರೂ ಆಡುವುದು ಬೇಡ. ಎಲ್ಲರ ಮುಂದೆ ಟ್ರೋಫಿ ಗೆಲ್ಲುವ ಗುರಿ ಇರಲಿ’ ಎಂದು ಪ್ರೇರಣದಾಯಕ ಮಾತುಗಳನ್ನು ಆಡಿದ್ದೆ ಎಂದು ತಿಳಿಸುತ್ತಾರೆ.

ಉತ್ತಮ ಆರಂಭ ಕಾಣುವುದೇ ನಮ್ಮ ಗುರಿ. ಉತ್ತಮ ನಿರ್ವಹಣೆ ನೀಡಿಯೇ ಎದುರಾಳಿ ತಂಡ ಎಂಟರಘಟ್ಟದವರೆಗೆ ಬಂದಿದೆ. ಎಲ್ಲ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದರಷ್ಟೇ ಗೆಲುವು ಸಾಧ್ಯ. ಮನೀಷ್ ಪಾಂಡೆ ತಂಡ ಕೂಡಿಕೊಂಡಿರುವುದು ಬಲ ಹೆಚ್ಚಿಸಿದೆ | ಕರುಣ್ ನಾಯರ್ ಕರ್ನಾಟಕ ತಂಡದ ನಾಯಕ.

ಇತರ ಕ್ವಾರ್ಟರ್​ಫೈನಲ್ ಪಂದ್ಯಗಳು

ಗುಜರಾತ್-ಗೋವಾ (ವಲ್ಸದ್)

ಬಂಗಾಳ -ಒಡಿಶಾ (ಕಟಕ್)

ಸೌರಾಷ್ಟ್ರ-ಆಂಧ್ರ (ಒಂಗೊಲೆ)

ನೇರ ಪ್ರಸಾರ:

ಸ್ಟಾರ್ ಸ್ಪೋರ್ಟ್ಸ್-3, ಹಾಟ್​ಸ್ಟಾರ್

ಪಂದ್ಯ ಆರಂಭ: 9.30

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net