ಬೆಂಗಳೂರು ಓಪನ್ ಗೆದ್ದ ಜೇಮ್ಸ್​ ಡಕ್​ವರ್ತ್

bangalore open
Published on

ಬೆಂಗಳೂರು: ಮೂರನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಚಾಲೆಂಜರ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ಕೇವಲ 68 ನಿಮಿಷದ ಮುಖಾಮುಖಿಯಾಗಿದ್ದರೂ, ಫೈನಲ್​ನಲ್ಲಿದ್ದ ಇಬ್ಬರೂ ಆಟಗಾರರು ಪೈಪೋಟಿಗೆ ಬಿದ್ದವರಂತೆ ಚಾಂಪಿಯನ್ ಪಟ್ಟಕ್ಕೆ ಹೋರಾಟ ನಡೆಸಿದರು. ಕೊನೆಗೆ ಆಸ್ಟ್ರೇಲಿಯಾದ 28 ವರ್ಷದ ಆಟಗಾರ ಜೇಮ್್ಸ ಡಕ್​ವರ್ತ್ ಚೊಚ್ಚಲ ಬಾರಿಗೆ ಬೆಂಗಳೂರು ಓಪನ್ ಟೂರ್ನಿಯ ಚಾಂಪಿಯನ್ ಎನಿಸಿಕೊಂಡರು. ಬೆಂಗಳೂರಿನ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ವಿದೇಶಿ ಆಟಗಾರ ಇವರಾಗಿದ್ದಾರೆ.

ಕೆಎಸ್​ಎಲ್​ಟಿಎ ಪ್ರಧಾನ ಕೋರ್ಟ್​ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಹೋರಾಟದಲ್ಲಿ 4ನೇ ಶ್ರೇಯಾಂಕದ ಜೇಮ್್ಸ ಡಕ್​ವರ್ತ್ 6-4, 6-4ರಿಂದ ಶ್ರೇಯಾಂಕರಹಿತ ಆಟಗಾರ ಬೆಂಜಮಿನ್ ಬೊಂಜಿಯನ್ನು ಸೋಲಿಸಿದರು. ಕಳೆದ ವರ್ಷ ಚಾಲೆಂಜರ್ ಕಣದಲ್ಲಿ ಸ್ಪರ್ಧಿಸಿದ್ದ 6 ಫೈನಲ್​ಗಳ ಪೈಕಿ 4ರಲ್ಲಿ ಗೆಲುವು ಕಂಡಿದ್ದ ಡಕ್​ವರ್ತ್ ತಮ್ಮ ಭರ್ಜರಿ ಫಾಮರ್್​ಅನ್ನು ಬೆಂಗಳೂರಿನಲ್ಲೂ ಮುಂದುವರಿಸಿದರು.

ಉಭಯ ಆಟಗಾರರು ಸರ್ವ್ ಉಳಿಸಿಕೊಳ್ಳಲು ಪರದಾಟ ನಡೆಸಿದ ಮೊದಲ ಸೆಟ್​ನಲ್ಲಿ ಡಕ್​ವರ್ತ್, 10ನೇ ಗೇಮ್ಲ್ಲಿ 3ನೇ ಬಾರಿಗೆ ಬೊಂಜಿಯ ಸರ್ವ್​ಅನ್ನು ಬ್ರೇಕ್ ಮಾಡುವ ಮೂಲಕ ಮುನ್ನಡೆ ಕಂಡುಕೊಂಡರು. ಬೆಂಜಮಿನ್ ಬೊಂಜಿ ಎರಡು ಬಾರಿ ಡಕ್​ವರ್ತ್​ರ ಸರ್ವ್ ಬ್ರೇಕ್ ಮಾಡಿದರೂ, ಪ್ರಮುಖ ಸಮಯದಲ್ಲಿ ಹಿನ್ನಡೆ ಕಂಡರು. ಕಾಲಿನ ಗಾಯದಿಂದಾಗಿ 2017, 2018ರ ವರ್ಷದಲ್ಲಿ ಬಹುತೇಕ ಸಮಯವನ್ನು ವಿಶ್ರಾಂತಿಯಲ್ಲಿಯೇ ಕಳೆದಿದ್ದ ಡಕ್​ವರ್ತ್ 2ನೇ ಸೆಟ್​ನ 5ನೇ ಗೇಮ್ಲ್ಲಿ ಬೊಂಜಿ ಸರ್ವ್​ಅನ್ನು ಬ್ರೇಕ್ ಮಾಡಿ 3-2ರ ಮುನ್ನಡೆಗೇರಿದ್ದರು. ನಂತರದ ಗೇಮ್ಲ್ಲಿ ಸರ್ವ್ ಬ್ರೇಕ್ ಮಾಡುವ ಮೂಲಕ ಬೊಂಜಿಸಮಬಲ ಸಾಧಿಸಲು ಯಶ ಕಂಡರೆ, 7ನೇ ಗೇಮ್ ಕೊನೆಯ ಅಂಕದಲ್ಲಿ ಡಬಲ್​ಫಾಲ್ಟ್ ಎಸಗಿ ಸರ್ವ್ ಬ್ರೇಕ್​ಗೆ ಒಳಗಾದರು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡುತ್ತಿದ್ದ ಡಕ್​ವರ್ತ್ ಗೆಲುವಿನ ಸನಿಹದಲ್ಲಿದ್ದ ವೇಳೆ ರಕ್ಷಣಾತ್ಮಕ ಆಟದ ಮೊರೆಹೋಗುವ ಮೂಲಕ ಚಾಂಪಿಯನ್ ಎನಿಸಿಕೊಂಡರು.

ಸಂತೋಷ್ ನಾಯ್ಕ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net