

ಲಂಡನ್: ಇಂಗ್ಲೆಂಡ್ ಕ್ರಿಕೆಟ್ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡಿದ್ದು, ಆಂಡರ್ಸನ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಈ ವರ್ಷದ ಜುಲೈ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೆಕ್ಕಾ ಆಫ್ ಕ್ರಿಕೆಟ್, ಲಾರ್ಡ್ಸ್’ನಲ್ಲಿ ಆಡಲಿದ್ದಾರೆ. ಈ ಟೆಸ್ಟ್ ಪಂದ್ಯ ಜುಲೈ 10-14ರ ಅವಧಿಯಲ್ಲಿ ನಡೆಯಲಿದೆ.
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಎಲ್ಲರಿಗೂ ನಮಸ್ಕಾರ. ಲಾರ್ಡ್ಸ್ನಲ್ಲಿ ಬೇಸಿಗೆ ಋತುವಿನ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಎಂದು ಹೇಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಏನು ಬರೆದುಕೊಂಡಿದ್ದಾರೆ: ನಿವೃತ್ತಿಯ ಬಗ್ಗೆ ಹೇಳಿಕೆ ನೀಡಿದ ಆಂಡರ್ಸನ್, 'ಈ ಬೇಸಿಗೆಯಲ್ಲಿ ಲಾರ್ಡ್ಸ್’ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ನನ್ನ ಕೊನೆಯ ಟೆಸ್ಟ್ ಆಗಿರುತ್ತದೆ. ನಾನು ಬಾಲ್ಯದಿಂದಲೂ ಪ್ರೀತಿಸುತ್ತಿದ್ದ ಕ್ರೀಡೆಯಲ್ಲಿ ನನ್ನ ದೇಶವನ್ನು ಪ್ರತಿನಿಧಿಸಿದ್ದೇನೆ. ಈ 20 ವರ್ಷಗಳು ನನಗೆ ನಂಬಲಸಾಧ್ಯವಾದವು. ಇಂಗ್ಲೆಂಡ್ ಪರ ಆಡುವುದನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ ಈ ಆಟದಿಂದ ಹಿಂದೆ ಸರಿಯಲು ಮತ್ತು ಇತರರಿಗೆ ಅವಕಾಶ ನೀಡಲು ಇದು ಸರಿಯಾದ ಸಮಯ. ನನ್ನ ಕನಸು ನನಸಾಗುವಂತೆ ಅವರ ಕನಸುಗಳನ್ನು ನನಸು ಮಾಡಬೇಕು. ಇದಕ್ಕಿಂತ ದೊಡ್ಡ ಭಾವನೆ ಇನ್ನೊಂದಿಲ್ಲ” ಎಂದಿದ್ದಾರೆ.
41 ವರ್ಷದ ಆಂಡರ್ಸನ್ 2003ರಲ್ಲಿ ಲಾರ್ಡ್ಸ್ನಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. 187 ಟೆಸ್ಟ್ ಪಂದ್ಯಗಳಲ್ಲಿ 700 ವಿಕೆಟ್ ಪಡೆದಿದ್ದಾರೆ. ಆಂಡರ್ಸನ್ 700 ಟೆಸ್ಟ್ ವಿಕೆಟ್ಗಳ ಎವರೆಸ್ಟ್ ಅನ್ನು ತಲುಪಿದ ಮೊದಲ ವೇಗದ ಬೌಲರ್. ಭಾರತ ವಿರುದ್ಧದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಆಂಡರ್ಸನ್ ಈ ವರ್ಷ 700 ವಿಕೆಟ್ ಪೂರೈಸಿದರು.