

ಕೆಸ್ಟ್ಚರ್ಚ್: ಟೆಸ್ಟ್ ಸರಣಿಗೆ ಮುನ್ನ ಫಾಮ್ರ್ಗೆ ಮರಳಿದ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (155*ರನ್, 162 ಎಸೆತ, 15 ಬೌಂಡರಿ, 5 ಸಿಕ್ಸರ್) ಮತ್ತು ವಿದರ್ಭ ಬ್ಯಾಟರ್ ಯಶ್ ರಾಥೋಡ್ (100*ರನ್, 122 ಎಸೆತ, 9 ಬೌಂಡರಿ) ಬಿರುಸಿನ ಶತಕದ ನೆರವಿನಿಂದ ಭಾರತ ಎ ತಂಡ ಆತಿಥೇಯ ನ್ಯೂಜಿಲೆಂಡ್ ಎ ವಿರುದ್ಧದ 2ನೇ ಚತುರ್ದಿನ ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಸರಣಿಯ 3ನೇ ಹಾಗೂ ಕೊನೇ ಪಂದ್ಯ ನ.7ರಿಂದ ಲಿಂಕಾನ್ನಲ್ಲಿ ನಡೆಯಲಿದೆ.
ರಾತ್ರಿ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದ ಕಾರಣ 4ನೇ ಹಾಗೂ ಅಂತಿಮ ದಿನದಾಟ ತಡವಾಗಿ ಆರಂಭಗೊಂಡಿತು. ಭೋಜನ ವಿರಾಮದ ಬಳಿಕ ಬ್ಯಾಟಿಂಗ್ಗೆ ಇಳಿದ ಭಾರತ ವಿಕೆಟ್ ನಷ್ಟವಿಲ್ಲದೆ 32 ರನ್ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿತು. ದಿನದ ಮೊದಲ 2 ಓವರ್ಗಳಲ್ಲೇ ಸಾಯಿ ಸುದರ್ಶನ್ (11), ಕನ್ನಡಿಗ ದೇವದತ್ ಪಡಿಕ್ಕಲ್ (0) ಔಟಾದರು. ಆಗ ಜತೆಗೂಡಿದ ಜೈಸ್ವಾಲ್&ಯಶ್ ರಾಥೋಡ್ ಜೋಡಿ ಮುರಿಯದ 3ನೇ ವಿಕೆಟ್ಗೆ 245 ಎಸೆತಗಳಲ್ಲಿ 247 ರನ್ ಸೇರಿಸಿ ಕಿವೀಸ್ ಬೌಲರ್ಗಳನ್ನು ಕಾಡಿದರು. ಇದರಿಂದ, ಮೊದಲ ಇನಿಂಗ್ಸ್ನಲ್ಲಿ 78 ರನ್ ಹಿನ್ನಡೆ ಕಂಡಿದ್ದ ಭಾರತಕ್ಕೆ ಡ್ರಾ ಸಾಧಿಸಲು ನೆರವಾದರು. ಸರಣಿಯ ಮೊದಲ ಪಂದ್ಯದಲ್ಲಿ ಮಂದಬೆಳಕಿನ ಅಡಚಣೆಯಿಂದಾಗಿ ಭಾರತ ಗೆಲುವಿನಿಂದ ವಂಚಿತವಾಗಿತ್ತು.
ಭಾರತ ಎ: 346 ಮತ್ತು 52.4 ಓವರ್ಗಳಲ್ಲಿ 2 ವಿಕೆಟ್ಗೆ 282 (ಜೈಸ್ವಾಲ್ 155*, ಸುದರ್ಶನ್ 11, ಪಡಿಕ್ಕಲ್ 0, ಯಶ್ ರಾಥೋಡ್ 100*, ರಾಂಡೆಲ್ 62ಕ್ಕೆ 1, ಮೆಕ್ಕೇ 35ಕ್ಕೆ 1), ನ್ಯೂಜಿಲೆಂಡ್ ಎ: 424.