

Glenn Maxwell : ಟೀಮ್ ಇಂಡಿಯಾದ ಯಂಗ್ ಓಪನರ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸೂಪರ್ ಫಾರ್ಮ್ ಮುಂದುವರಿಸುತ್ತಿರುವುದು ಗೊತ್ತೇ ಇದೆ. ತವರಿನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಪ್ರಾಬಲ್ಯ ಮೆರೆದಿದ್ದ ಜೈಸ್ವಾಲ್ ಇದೀಗ ಆಸ್ಟ್ರೇಲಿಯಾ ವಿರುದ್ಧವೂ ಅದೇ ಹುಮ್ಮಸ್ಸು ಮುಂದುವರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸಿಸ್ ವಿರುದ್ಧ ಮೊದಲ ಶತಕ ಗಳಿಸಿದರು. ಜೈಸ್ವಾಲ್ ಅವರು ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಸಲ್ವುಡ್ ಅವರಂತಹ ವಿಶ್ವ ದರ್ಜೆಯ ಬೌಲರ್‌ಗಳನ್ನು ಎದುರಿಸುವ ಮೂಲಕ ದಿಗ್ಗಜರನ್ನೂ ಮೆಚ್ಚಿಸಿದರು. ಈ ಪಂದ್ಯದಲ್ಲಿ 297 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 15 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 161 ರನ್ ಗಳಿಸಿದರು.
ಜೈಸ್ವಾಲ್ ಅವರ ಪ್ರದರ್ಶನವನ್ನು ನೋಡಿದ ಆಸ್ಟ್ರೇಲಿಯಾದ ಸ್ಟಾರ್ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಜೈಸ್ವಾಲ್ ಮೇಲೆ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಜೈಸ್ವಾಲ್ ಅವರು 40ಕ್ಕೂ ಹೆಚ್ಚು ಟೆಸ್ಟ್ ಶತಕ ಗಳಿಸಲಿದ್ದಾರೆ ಎಂದು ಮ್ಯಾಕ್ಸಿ ಭವಿಷ್ಯ ನುಡಿದಿದ್ದಾರೆ.
ಜೈಸ್ವಾಲ್ ಒಬ್ಬ ಅದ್ಭುತ ಆಟಗಾರ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ನಲವತ್ತಕ್ಕೂ ಹೆಚ್ಚು ಶತಕಗಳನ್ನು ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರು ವಿಭಿನ್ನ ದಾಖಲೆಗಳನ್ನು ಬರೆಯುತ್ತಾರೆಂದು ನಾನು ಭಾವಿಸುತ್ತೇನೆ. ಜೈಸ್ವಾಲ್ ಸಹ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಡುವ ಪ್ರತಿಭೆಯನ್ನು ಹೊಂದಿದ್ದಾರೆ ಎಂದು ಮ್ಯಾಕ್ಸಿ ಹೊಗಳಿದ್ದಾರೆ.
ಈ ಸರಣಿಯ ಮುಂಬರುವ ಪಂದ್ಯಗಳಲ್ಲಿ ನಮ್ಮ ಬೌಲರ್‌ಗಳು ಜೈಸ್ವಾಲ್ ಅವರನ್ನು ತಡೆಯದಿದ್ದರೆ, ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಜೈಸ್ವಾಲ್ ಅವರ ಬ್ಯಾಟಿಂಗ್ ತಂತ್ರ ಉತ್ತಮವಾಗಿದೆ. ಎಲ್ಲ ರೀತಿಯ ಹೊಡೆತಗಳನ್ನು ಆಡುತ್ತಾರೆ. ಅವರು ಸ್ಪಿನ್ಗೂ ಕೂಡ ಚೆನ್ನಾಗಿ ಆಡಬಲ್ಲರು. ಅವರು ಫುಲ್ ಪ್ಯಾಕೇಜ್ ಪ್ಲೇಯರ್ ಎಂದು ಗ್ರೇಡ್ ಕ್ರಿಕೆಟರ್ ಪಾಡ್‌ಕ್ಯಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಪರ್ತ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯುವ ಮೂಲಕ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರಲ್ಲಿ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಕಂಡಿದೆ. 295 ರನ್‌ಗಳ ಭಾರಿ ಅಂತರದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ರಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸಿಸ್)