

ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಶೀಘ್ರವೇ ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. 75 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಕ್ರಿಕೆಟ್ ಸ್ಟೇಡಿಯಂ ಇದಾಗಿದ್ದು, ಈ ಕುರಿತು ರೂಪುರೇಷೆಗಳು ಸಿದ್ಧಗೊಳ್ಳಲಿವೆ. ಸುಮಾರು 100 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಸ್ಟೇಡಿಯಂ, ಸಂಪೂರ್ಣ ಹೈಟೆಕ್ನಿಂದ ಕೂಡಿದ್ದು, ವಿಶ್ವ ದರ್ಜೆ ಗ್ರೀನ್ ಸ್ಟೇಡಿಯಂನಲ್ಲಿ ಆಧುನಿಕ ಗ್ರ್ಯಾಂಡ್ ಪೆವಿಲಿಯನ್, ಕಾಪೋರ್ರೇಟ್ ಬಾಕ್ಸ್ಗಳು ಸೇರಿದಂತೆ ಉನ್ನತ ದರ್ಜೆ ವ್ಯವಸ್ಥೆಗಳಿರುತ್ತವೆ. ಸ್ಟೇಡಿಯಂಗೆ 100 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮಹೇಂದ್ರ ಶರ್ಮ, ಕ್ರಿಕೆಟ್ ಸ್ಟೇಡಿಯಂನಲ್ಲೇ ಒಳಾಂಗಣ ಹಾಗೂ ಕ್ರೀಡಾ ತರಬೇತಿ ಸೌಲಭ್ಯ ವ್ಯವಸ್ಥೆಗಳಿರುತ್ತದೆ. ಸ್ಟೇಡಿಯಂ ನಿರ್ಮಾಣಕ್ಕೆ ದೆಹಲಿ-ಜೈಪುರ ಹೈವೇಯಲ್ಲಿ ಜಾಗ ಗುರುತಿಸಲಾಗಿದೆ ಎಂದರು. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಮುಂದಿನ 4 ತಿಂಗಳಲ್ಲಿ ನೂತನ ಸ್ಟೇಡಿಯಂ ಕಾಮಗಾರಿ ಆರಂಭಗೊಳ್ಳಲಿದೆ. ಐಸಿಸಿ ಮಾರ್ಗಸೂಚಿಯಂತೆ ಫ್ಲಡ್ ಲೈಟ್ಸ್ ವ್ಯವಸ್ಥೆ, ಆಧುನಿಕ ವ್ಯವಸ್ಥೆಯ ಪ್ರೆಸ್ ಬಾಕ್ಸ್, ಪೆವಿಲಿಯನ್, ಡ್ರೆಸ್ಸಿಂಗ್ ರೂಮ್ಗಳು ನಿರ್ಮಾಣಗೊಳ್ಳಲಿವೆ ಎಂದರು. ಸ್ಟೇಡಿಯಂನಲ್ಲೇ 4 ಸಾವಿರ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ವಿಶ್ವದ 3ನೇ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಇದಾಗಲಿದ್ದು, ಅಹಮದಾಬಾದ್ನ ಮೊಟೆರಾ ಸ್ಟೇಡಿಯಂ 1.10 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದರೆ, ಆಸ್ಟ್ರೆಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ 1.02 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದುವ ಮೂಲಕ ಎರಡು ಸ್ಥಾನದಲ್ಲಿವೆ. ಜತೆಗೆ ಎರಡು ಪ್ರತ್ಯೇಕ ಅಭ್ಯಾಸದ ಮೈದಾನಗಳನ್ನು ನಿರ್ಮಿಸಲಾಗುತ್ತಿದ್ದು,30 ಪ್ರಾಕ್ಟಿಸ್ ನೆಟ್ಸ್, 2 ರೆಸ್ಟೋರೆಂಟ್ಗಳು, 250 ಮಂದಿ ಕುರುವಂಥ ಮಿಡಿಯಾ ಬಾಕ್ಸ್ ಇರಲಿದೆ. ಎರಡು ಹಂತದಲ್ಲಿ ಸ್ಟೇಡಿಯಂ ಕಾರ್ಯ ಪೂರ್ಣಗೊಳ್ಳಲಿದೆ. ಬಿಸಿಸಿಐಯಿಂದ 100 ಕೋಟಿ ರೂಪಾಯಿ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲಾಗುತ್ತಿದೆ ಎಂದರು. ಎಲ್ಎಲ್ಬಿ ಹಾಗೂ ದೆಹಲಿ ಮೂಲದ ಡಿಸೈನ್ ಕಂಪನಿ ಜಿಆರ್ಎಎಸ್ ಸ್ಟೇಡಿಯಂ ನಿರ್ಮಾಣದ ಜವಾಬ್ದಾರಿ ಹೊಂದಿದೆ.