

ಜೈಪುರ: ಆತಿಥೇಯ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪುಣೇರಿ ಪಲ್ಟಾನ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಎಸ್ಎಂಎಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಜೈಪುರ ದ್ವೀತಿಯಾರ್ಧದಲ್ಲಿ ಪುಟಿದೇಳುವುದರೊಂದಿಗೆ ಪುಣೇರಿ ಪಲ್ಟಾನ್ ಎದುರು 36-34 ಅಂಕಗಳಿಂದ ರೋಚಕ ಗೆಲುವು ದಾಖಲಿಸಿತು.ಸೋಲಿನ ನಡುವೆಯೂ ಕನ್ನಡಿಗ ಬಿಸಿ ರಮೇಶ್ ಮಾರ್ಗದರ್ಶನದ ಪುಣೇರಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ. ಮೊದಲಾರ್ಧದಲ್ಲಿ ಪಲ್ಟಾನ್ 20-11ರಿಂದ ಮೇಲುಗೈ ಸಾಧಿಸಿತು.
ಸತತ ಜಯಗಳೊಂದಿಗೆ ಮುನ್ನುಗ್ಗುತ್ತಿದ್ದ ಪುಣೇರಿ ಟೂರ್ನಿಯಲ್ಲಿ 2ನೇ ಸೋಲಿಗೆ ಗುರಿಯಾಯಿತು. ಆದರೂ 52 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಜೈಪುರ ತಂಡದ ಪರ ಮತ್ತೊಮ್ಮೆ ಏಕಾಂಗಿ ಹೋರಾಟ ನಡೆಸಿದ ಅರ್ಜುನ್ ದೇಶ್ವಾಲ್ 16 ಅಂಕ ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಅಸ್ಲಾಮ್ 8 ಅಂಕ ಗಳಿಸಿದ್ದು ಪುಣೇರಿ ಪರ ಗರಿಷ್ಠ ಎನಿಸಿತು.
ಹಿನ್ನಡೆ ತಗ್ಗಿಸುವ ವಿಶ್ವಾಸದಲ್ಲಿದ್ವೀತಿಯಾರ್ಧ ಆರಂಭಿಸಿದ ಜೈಪುರ ತಂಡ 28 ಮತ್ತು 35 ನಿಮಿಷಗಳಲ್ಲಿಎರಡು ಬಾರಿ ಪುಣೇರಿ ಪಲ್ಟನ್ ತಂಡವನ್ನು ಆಲೌಟ್ ಮಾಡಿತು. ಹೀಗಾಗಿ ಪುಣೇರಿ ಆಟಗಾರರು ಒತ್ತಡಕ್ಕೆ ಸಿಲುಕಿದರು. ಪಂದ್ಯ ಮುಕ್ತಾಯಕ್ಕೆ ಹತ್ತು ನಿಮಿಷಗಳು ಬಾಕಿ ಇರುವಾಗ ಪುಣೇರಿ ವಿರುದ್ಧ ನಾಲ್ಕು ಅಂಕ ಮುನ್ನಡೆ ಕಾಯ್ದುಕೊಂಡ ಜೈಪುರ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು.