

ಕೋಲ್ಕತ: ಬಿಸಿಸಿಐ ಮತ್ತು ಐಸಿಸಿ ಮಾಜಿ ಅಧ್ಯಕ್ಷ ದಿವಂಗತ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅವಿಷೇಕ್ ದಾಲ್ಮಿಯಾ, ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ನೂತನ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾಗಿದ್ದಾರೆ.
38 ವರ್ಷದ ಅವರು ಸಿಎಬಿಯ ಕಿರಿಯ ಅಧ್ಯಕ್ಷ ಎನಿಸಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಣ್ಣ ಸ್ನೇಹಾಶಿಶ್ ಗಂಗೂಲಿ, ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಗಂಗೂಲಿ ಬಿಸಿಸಿಐ ಚುಕ್ಕಾಣಿ ಹಿಡಿದ ಬಳಿಕ ಸಿಎಬಿ ಅಧ್ಯಕ್ಷ ಸ್ಥಾನ ಖಾಲಿ ಉಳಿದಿತ್ತು. ಬಿಸಿಸಿಐ ಹೊಸ ಸಂವಿಧಾನದ ಪ್ರಕಾರ ಅವಿಷೇಕ್, 2021ರ ನವೆಂಬರ್ 6ರಿಂದ ಕೂಲಿಂಗ್-ಆಫ್ಗೆ ತೆರಳಬೇಕಾಗಿದ್ದು, ಮುಂದಿನ 22 ತಿಂಗಳ ಕಾಲ ಮಾತ್ರ ಸಿಎಬಿ ಅಧ್ಯಕ್ಷರಾಗಿ ಮುಂದುವರಿಯಬಹುದಾಗಿದೆ. ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗರಾಗಿರುವ 54 ವರ್ಷದ ಸ್ನೇಹಾಶಿಶ್ ಗಂಗೂಲಿ, 15 ವರ್ಷಗಳ ವೃತ್ತಿಜೀವನದಲ್ಲಿ ಬಂಗಾಳ ಪರ 59 ಪಂದ್ಯ ಆಡಿದ್ದಾರೆ. -ಪಿಟಿಐ
ಗಂಗೂಲಿ ಉಪನ್ಯಾಸ
ಜಗಮೋಹನ್ ದಾಲ್ಮಿಯಾ ಸ್ಮರಣಾರ್ಥ ವಾರ್ಷಿಕ ಉಪನ್ಯಾಸವನ್ನು ಈ ವರ್ಷ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಲಿದ್ದಾರೆ. ಮಾರ್ಚ್ ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಕ್ಕೆ ಮುನ್ನಾದಿನ ಈಡನ್ ಗಾರ್ಡನ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಸಿಎಬಿ ನೂತನ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ತಿಳಿಸಿದ್ದಾರೆ. ಭಾರತ-ದ.ಆಫ್ರಿಕಾ 3ನೇ ಏಕದಿನ ಮಾರ್ಚ್ 18ರಂದು ಕೋಲ್ಕತದಲ್ಲಿ ನಿಗದಿಯಾಗಿದೆ.