

ನವದೆಹಲಿ: ಭಾರತ ಕಂಡ ಅತ್ಯಂತ ಯಶಸ್ವಿ ಜಿಮ್ನಾಸ್ಟ್ ಎನಿಸಿದ ದೀಪಾ ಕರ್ಮಾಕರ್ ಕ್ರೀಡಾ ವೃತ್ತೀಜಿವನಕ್ಕೆ ಸೋಮವಾರ ವಿದಾಯ ಘೋಷಿಸಿದ್ದಾರೆ. 2016ರ ರಿಯೋ ಒಲಿಂಪಿಕ್ಸ್ನಲ್ಲಿ 4ನೇ ಸ್ಥಾನ ಪಡೆದು ಸ್ವಲ್ಪದರಲ್ಲಿಯೇ ಪದಕ ವಂಚಿತರಾಗಿದ್ದರೂ ಕೋಟ್ಯಂತರ ಭಾರತೀಯ ಹೃದಯ ಗೆದ್ದಿದ್ದ ದೀಪಾ, ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತ್ರಿಪುರದ ಅಗರ್ತಲದವರಾದ 31 ವರ್ಷದ ದೀಪಾ ಕರ್ಮಾಕರ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಮಹಿಳಾ ಜಿಮ್ನಾಸ್ಟ್ ಎಂಬ ಹೊಂದಿದ್ದಾರೆ. ರಿಯೋದಲ್ಲಿ ಅವರು ವಾಲ್ಟ್ ಸ್ಪರ್ಧೆಯಲ್ಲಿ ಕೇವಲ 0.15 ಅಂಕಗಳಿಂದ ಒಲಿಂಪಿಕ್ಸ್ ಪದಕ ಗೆಲುವಿನ ಐತಿಹಾಸಿಕ ಸಾಧನೆಯಿಂದ ವಂಚಿತರಾಗಿದ್ದರು.
"ಭಾರಿ ಯೋಚನೆ ಮತ್ತು ಚಿಂತನೆಯ ಬಳಿಕ ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ಸ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿರುವೆ. ಇದು ಸುಲಭ ನಿರ್ಧಾರವಲ್ಲ. ಆದರೆ ಇದುವೇ ಸರಿಯಾದ ಸಮಯ ಎಂದು ಭಾವಿಸಿರುವೆ. ಕಳೆದ ಹಲವಾರು ವರ್ಷಗಳಿಂದ ಜಿಮ್ನಾಸ್ಟಿಕ್ಸ್ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು. ನನ್ನ ಏಳು-ಬೀಳಿನ ನಡುವೆ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಕೃತಜ್ಞಳಾಗಿರುವೆ' ಎಂದು ದೀಪಾ ಕರ್ಮಾಕರ್ ತಿಳಿಸಿದ್ದಾರೆ.
"ನಾನು ಐದು ವರ್ಷದವಳಿದ್ದಾಗ ನನ್ನ ಚಪ್ಪಟೆ ಪಾದಗಳನ್ನು ನೋಡಿ, ನಾನೆಂದೂ ಜಿಮ್ನಾಸ್ಟ್ ಆಗಲಾರೆ ಎಂದು ಹೇಳಲಾಗಿತ್ತು. ಇದೀಗ ನನ್ನ ಸಾಧನೆಗಳನ್ನು ನೋಡಿದಾಗ, ಅತ್ಯಂತ ಗರ್ವವಾಗುತ್ತಿದೆ. ಭಾರತವನ್ನು ಪ್ರತಿನಿಧಿಸಿರುವುದು ಮತ್ತು ಪದಕ ಗೆದ್ದಿರುವುದರ ಜತೆಗೆ ರಿಯೋ ಒಲಿಂಪಿಕ್ಸ್ನಲ್ಲಿ ಪ್ರೊಡುನೊವಾ ವಾಲ್ಟ್ ನಿರ್ವಹಣೆ ತೋರಿರುವುದು ನನ್ನ ವೃತ್ತೀಜಿವನದ ಅತ್ಯಂತ ಸ್ಮರಣೀಯ ಕ್ಷಣಗಳಾಗಿವೆ. ನನಗೆ ಆ ದೀಪಾಳನ್ನು ನೋಡಿದಾಗ ಅಪಾರ ಖುಷಿಯಾಗುತ್ತದೆ. ಯಾಕೆಂದರೆ ಅವರು ಕನಸು ಕಾಣುವ ಧೈರ್ಯ ಮಾಡಿದ್ದಳು' ಎಂದು ದೀಪಾ ವಿದಾಯ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಳೆದ 25 ವರ್ಷಗಳಿಂದ ನನಗೆ ತರಬೇತಿ ನೀಡಿದ ಮತ್ತು ನನ್ನ ಅತಿದೊಡ್ಡ ಶಕ್ತಿಯಾಗಿದ್ದ ಕೋಚ್ಗಳಾದ ಬಿಶ್ವೇಶ್ವರ್ ನಂದಿ ಸರ್ ಮತ್ತು ಸೋಮಾ ಮೇಡಂಗೆ ಧನ್ಯವಾದ ಹೇಳುವೆ. ನನಗೆ ದೊರೆತ ಬೆಂಬಲಗಳಿಗೆ ತ್ರಿಪುರ ಸರ್ಕಾರ, ಜಿಮ್ನಾಸ್ಟಿಕ್ಸ್ ಫೆಡರೇಷನ್, ಭಾರತೀಯ ಕ್ರೀಡಾ ಪ್ರಾಧಿಕಾರ, ಗೋಸ್ಪೋರ್ಟ್ಸ್ ಫೌಂಡೇಷನ್ಗೆ ಕೃತಜ್ಞತೆ ತಿಳಿಸುವೆ. ಕೊನೆಯದಾಗಿ ನನ್ನ ಒಳ್ಳೆಯ ಮತ್ತು ಕೆಟ್ಟ ದಿನಗಳಲ್ಲಿ ಜತೆಗಿದ್ದ ಕುಟುಂಬಕ್ಕೂ ಋಣಿಯಾಗಿರುವೆ ಎಂದು ದೀಪಾ ತಿಳಿಸಿದ್ದಾರೆ.
ಜಿಮ್ನಾಸ್ಟಿಕ್ಸ್ ಸಂಬಂಧ ಕಡಿಯಲ್ಲ
ಜಿಮ್ನಾಸ್ಟಿಕ್ಸ್ನಿಂದ ನಾನು ನಿವೃತ್ತಿ ಹೊಂದುತ್ತಿದ್ದರೂ, ಅದರೊಂದಿಗಿನ ನನ್ನ ಸಂಬಂಧ ಕಡಿಯುವುದಿಲ್ಲ. ಮೆಂಟರ್, ಕೋಚ್ ರೀತಿಯಾಗಿ ನಾನು ಈ ಕ್ರೀಡೆಗೆ ಮರಳಿ ಕೊಡುಗೆ ನೀಡಲು ಬಯಸಿರುವೆ. ಈ ಮೂಲಕ ನನ್ನಂಥ ಇತರ ಹುಡುಗಿಯರಿಗೂ ಬೆಂಬಲ ನೀಡಲು ಪ್ರಯತ್ನಿಸುವೆ ಎಂದು ದೀಪಾ ತಿಳಿಸಿದ್ದಾರೆ.
ಕಾಮನ್ವೆಲ್ತ್ನಲ್ಲಿ ಪದಕ ಸಾಧನೆ
ಗ್ಲಾಸ್ಗೋದಲ್ಲಿ ನಡೆದ 2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ದೀಪಾ, ಈ ಸಾಧನೆ ಮಾಡಿದ ಮೊದಲ ಭಾರತೀಯರೆನಿಸಿದ್ದರು. ಈ ಮೂಲಕ ಮೊದಲ ಬಾರಿ ಕ್ರೀಡಾಪ್ರೇಮಿಗಳ ಗಮನಸೆಳೆದಿದ್ದರು. 2018ರಲ್ಲಿ ಟರ್ಕಿಯ ಮೆರ್ಸಿನ್ನಲ್ಲಿ ನಡೆದ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ವಿಶ್ವಕಪ್ನಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಜಿಮ್ನಾಸ್ಟ್ ಎನಿಸಿದ್ದರು. 2014ರ ಏಷ್ಯನ್ ಚಾಂಪಿಯನ್ಷಿಪ್ನಲ್ಲೂ ಚಿನ್ನ ಜಯಿಸಿದ್ದರು.
ಪ್ರೊಡುನೊವಾ ಸಾಧಕಿ
ಜಿಮ್ನಾಸ್ಟಿಕ್ಸ್ನ ವಿಶೇಷ ಜಿಗಿದ ಪ್ರಕಾರವಾದ ಪ್ರೊಡುನೊವಾದಲ್ಲಿ ಯಶಸ್ವಿ ಲ್ಯಾಂಡಿಂಗ್ ಕಂಡ ವಿಶ್ವದ ಐವರು ಮಹಿಳೆಯರಲ್ಲಿ ದೀಪಾ ಕೂಡ ಒಬ್ಬರಾಗಿದ್ದಾರೆ. ಇದು ವಾಲ್ಟ್ನಲ್ಲಿ ಮಹಿಳಾ ಜಿಮ್ನಾಸ್ಟ್ಗಳು ತೋರುವ ಅತ್ಯಂತ ಕಠಿಣವಾದ ನಿರ್ವಹಣೆಯಾಗಿದೆ. ಹ್ಯಾಂಡ್ಸಿಂಗ್ ಮೇಲಿನಿಂದ ಜಗಿದು ಎರಡು ಮುಂಬಾಗದ ಪಲ್ಟಿ (ಡಬಲ್ ಸಮರ್ಸಾಲ್ಟ್) ಮೂಲಕ ತೋರುವ ಈ ನಿರ್ವಹಣೆ ಗಾಯಕ್ಕೊಳಗಾಗುವ ಅಪಾಯವನ್ನೂ (ವಾಲ್ಟ್ ಆಫ್ ಡೆತ್) ಒಳಗೊಂಡಿದೆ. ದೀಪಾ 2014 ಮತ್ತು 2016ರಲ್ಲಿ 2 ಬಾರಿ ಇದನ್ನು ಯಶಸ್ವಿಯಾಗಿ ಸಾಧಿಸಿದ್ದಾರೆ.
ಹಲವು ಗೌರವ...
ದೀಪಾ 2015ರಲ್ಲಿ ಅರ್ಜುನ ಮತ್ತು 2016ರಲ್ಲಿ ಖೇಲ್ರತ್ನ ಪ್ರಶಸ್ತಿಗಳಿಗೆ ಭಾಜರಾಗಿದ್ದು, 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದಲೂ ಪುರಸತರಾಗಿದ್ದಾರೆ. ರಿಯೋದಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟ ನಡುವೆ ಅವರಿಗೆ ಆಗ ಕೋಟ್ಯಂತರ ರೂ. ಬಹುಮಾನ ಮೊತ್ತ ಹರಿದುಬಂದಿತ್ತು.
ಗಾಯ, ಡೋಪ್ ಹಿನ್ನಡೆ
ಗಾಯದ ಸಮಸ್ಯೆಯಿಂದಾಗಿ 2021ರ ಟೋಕಿಯೊ ಒಲಿಂಪಿಕ್ಸ್ ಅರ್ಹತೆಯಿಂದ ವಂಚಿತರಾಗಿದ್ದ ದೀಪಾ, ಅದೇ ವರ್ಷದ ಅಕ್ಟೋಬರ್ನಲ್ಲಿ ಉದ್ದೀಪನ ಪ್ರಕರಣದಲ್ಲಿ ಸಿಲುಕಿ 21 ತಿಂಗಳು ನಿಷೇಧಕ್ಕೂ ಒಳಗಾಗಿದ್ದರು. 2023ರ ಜುಲೈನಲ್ಲಿ ಅವರ ಮೇಲಿನ ನಿಷೇಧ ಮುಕ್ತಾಯವಾಗಿತ್ತು. ನಂತರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಅವರಿಗೆ ಸಮರ್ಥ ಸಮಯಾವಕಾಶ ಲಭಿಸಿರಲಿಲ್ಲ.