ಇಂದಿನಿಂದ ಐಟಿಎಫ್​ ಓಪನ್ ಟೆನಿಸ್: ಶ್ರೀವಲ್ಲಿ ಫೇವರಿಟ್​​

web tennis
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಕಳೆದ ವಾರ ಐಟಿಎಫ್​​ ಮೈಸೂರು ಓಪನ್​ನ ಫೈನಲ್​ನಲ್ಲಿ ಎಡವಿದ ನಡುವೆಯೂ ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ, ನಗರದ ಕೆಎಸ್​ಎಲ್​ಟಿಎ ಸ್ಟೇಡಿಯಂನಲ್ಲಿ ಮಂಗಳವಾರ ಆರಂಭಗೊಳ್ಳಲಿರುವ ಎಸ್​ಕೆಎಂಇ ಐಟಿಎಫ್​ ಓಪನ್​ ಮಹಿಳಾ ಟೆನಿಸ್​ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಫೇವರಿಟ್​ ಆಟಗಾರ್ತಿಯಾಗಿ ಕಣಕ್ಕಿಳಿಯಲಿದ್ದಾರೆ.

22 ವರ್ಷದ ಲಂಬೂ ಆಟಗಾರ್ತಿ ಶ್ರೀವಲ್ಲಿ ಮೈಸೂರಿನಲ್ಲಿ ಭಾನುವಾರ ನಡೆದ ಫೈನಲ್​ನಲ್ಲಿ ಅಮೆರಿಕದ ಜೆಸ್ಸಿ ಆ್ಯನ್​ ಎದುರು ಕೊನೇ ಅಂಕದವರೆಗೆ ಹೋರಾಡಿ ಸೋತಿದ್ದರು. ಆದರೆ ಈಗ ಉದ್ಯಾನನಗರಿಯಲ್ಲಿ ನಡೆಯಲಿರುವ 12.60 ಲಕ್ಷ ರೂ. ಬಹುಮಾನ ಮೊತ್ತದ ಟೂರ್ನಿಯಲ್ಲಿ ಅದನ್ನು ತಿದ್ದಿಕೊಳ್ಳುವ ಮೂಲಕ ಪ್ರಶಸ್ತಿ ಒಲಿಸಿಕೊಳ್ಳಲು ಕಾದಾಡಲಿದ್ದಾರೆ.

"ನನ್ನ ಆಟದ ಬಗ್ಗೆ ಆತ್ಮವಿಶ್ವಾಸವಿದೆ. ಇತ್ತೀಚೆಗಿನ ಟೂರ್ನಿಗಳಲ್ಲಿ ಉತ್ತಮ ನಿರ್ವಹನೆ ತೋರಿರುವುದು ಭರವಸೆ ಹೆಚ್ಚಿಸಿದೆ. ಮೈಸೂರಿನಲ್ಲಿ ನಡೆದ ಫೈನಲ್​ನಲ್ಲಿ ನಾನು ನಿರೀಕ್ಷಿಸಿದ ಫಲಿತಾಂಶ ಬಾರದಿದ್ದರೂ, ನನ್ನ ನಿರ್ವಹಣೆಯ ಬಗ್ಗೆ ಖುಷಿ ಇದೆ' ಎಂದು ಹೈದರಾಬಾದ್​ನ ಶ್ರೀವಲ್ಲಿ ಸೋಮವಾರ ತಿಳಿಸಿದರು. ಕಳೆದ ವರ್ಷ ಕರ್ನಾಟಕದಲ್ಲೇ ಶ್ರೀವಲ್ಲಿ ತನ್ನ ಚೊಚ್ಚಲ ಐಟಿಎ್​ ಪ್ರಶಸ್ತಿ ಗೆದ್ದುಕೊಂಡಿದ್ದರು.

ಅಗ್ರ ಶ್ರೇಯಾಂಕಿತೆ ಶ್ರೀವಲ್ಲಿಗೆ 2ನೇ ಶ್ರೇಯಾಂಕಿತೆ ವೈಷ್ಣವಿ ಅದ್ಕರ್​ರಿಂದ ನಿಕಟ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಡೆನ್ಮಾರ್ಕ್​ನ ಇಲೆನಾ ಜಮ್​ಶಿಡಿ ಫಿಟ್ನೆಸ್​ ಸಮಸ್ಯೆಯ ನಡುವೆಯೂ ಸವಾಲೊಡ್ಡಬಹುದು. ಮೈಸೂರಿನಲ್ಲಿ ಕಲುಷಿತ ಆಹಾರ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಿಸಿದ್ದ ಇಲೆನಾ, ಕ್ವಾರ್ಟರ್​ಫೈನಲ್​ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದ್ದರು.

ಅಗ್ರ 32 ಆಟಗಾರ್ತಿಯರು ಆಡುವ ಸಿಂಗಲ್ಸ್​ ವಿಭಾಗದ ಪ್ರಧಾನ ಸುತ್ತಿನಲ್ಲಿ ಕೆಲ ಆತಿಥೇಯ ಆಟಗಾರ್ತಿಯರ ಜತೆಗೆ ನ್ಯೂ ಕ್ಯಾಲೆಡೋನಿಯಾದ ಕ್ಯಾರೊಲಾನ್​ ಡೆಲೌನಾಯ್​ ಮತ್ತು ರಷ್ಯಾದ ಆರಿನಾ ಅರಿುಲಿನಾ ಕೂಡ ಉತ್ತಮ ಪೈಪೋಟಿ ತೋರುವ ನಿರೀಕ್ಷೆ ಇದೆ.

ಪ್ರಧಾನ ಸುತ್ತಿಗೇರಿದ ಶ್ರೀನಿಧಿ

ಬೆಂಗಳೂರಿನ ಶ್ರೀನಿಧಿ ಬಾಲಾಜಿ ಸಹಿತ ಭಾರತದ ಆರು ಆಟಗಾರ್ತಿಯರು ಅರ್ಹತಾ ಸುತ್ತಿನಿಂದ ಪ್ರಧಾನ ಸುತ್ತಿಗೇರುವಲ್ಲಿ ಯಶಸ್ವಿಯಾದರು. ಶ್ರೀನಿಧಿ ಅರ್ಹತಾ ಸುತ್ತಿನ ಕೊನೇ ಪಂದ್ಯದಲ್ಲಿ ಕಶಿಶ್​ ಭಾಟಿಯಾ ಎದುರು 5-7, 6-4, 10-4ರಿಂದ ಗೆದ್ದರು. ಈ ಮೂಲಕ ಸೀನಿಯರ್​ ಮಟ್ಟದಲ್ಲಿ ಮೊದಲ ಬಾರಿಗೆ ಪ್ರಧಾನ ಸುತ್ತಿಗೇರಿದರು. ಕರ್ನಾಟಕದ ಇತರ ಮೂವರು ಆಟಗಾರ್ತಿಯರಾದ ಅಗ್ರ ಶ್ರೇಯಾಂಕಿತೆ ವಂಶಿತಾ ಪಥನಿಯಾ, ಅಮೋದಿನಿ ನಾಯ್ಕ್​ ಮತ್ತು ಸೋನಿಕಾ ಜದೀಶ್​ ಅರ್ಹತಾ ಸುತ್ತಿನಲ್ಲೇ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net