

ವೂರ್ರ್ಬಗ್ (ನೆದರ್ಲೆಂಡ್): ಕ್ರಿಕೆಟ್ ಶಿಶು ಇಟಲಿ ತಂಡ ಮುಂದಿನ ವರ್ಷ ಭಾರತ-ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಸಂಪಾದಿಸುವ ಸನಿಹ ತಲುಪಿದೆ. ಯುರೋಪ್ ಖಂಡದ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ 12 ರನ್ಗಳಿಂದ ಆಘಾತಕಾರಿ ಸೋಲುಣಿಸುವ ಮೂಲಕ ಇಟಲಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಆಸ್ಟ್ರೆಲಿಯಾದ ಮಾಜಿ ಟೆಸ್ಟ್ ಆರಂಭಿಕ ಜೋ ಬರ್ನ್ಸ್ ಸಾರಥ್ಯದ ಇಟಲಿ ತಂಡ ಇನ್ನೊಂದು ಪಂದ್ಯ ಗೆದ್ದರೆ, ಮೊಟ್ಟಮೊದಲ ಬಾರಿಗೆ ಐಸಿಸಿಯ ಪ್ರಮುಖ ಟೂರ್ನಿಯೊಂದರಲ್ಲಿ ಆಡುವ ಅವಕಾಶ ಪಡೆಯಲಿದೆ. 5 ತಂಡಗಳ ಟೂರ್ನಿಯಲ್ಲಿ ರೌಂಡ್ ರಾಬಿನ್ ಲೀಗ್ ಬಳಿಕ ಅಗ್ರ 2 ತಂಡಗಳು ಟಿ20 ವಿಶ್ವಕಪ್ಗೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ. ಇಟಲಿ (5 ಅಂಕ) ಇದುವರೆಗೆ ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿದ್ದರೆ, ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಶುಕ್ರವಾರ ಟೂರ್ನಿಯ ಕೊನೇ 2 ಪಂದ್ಯಗಳಲ್ಲಿ ಇಟಲಿ ತಂಡ ನೆದರ್ಲೆಂಡ್ (4 ಅಂಕ) ವಿರುದ್ಧ ಮತ್ತು ಸ್ಕಾಟ್ಲೆಂಡ್ (3 ಅಂಕ) ತಂಡ ಜೆರ್ಸಿ (3 ಅಂಕ) ವಿರುದ್ಧ ಆಡಲಿದೆ. ಇದರಲ್ಲಿ ಇಟಲಿ ಸೋತರೆ, ನೆದರ್ಲೆಂಡ್ ಅಗ್ರಸ್ಥಾನಕ್ಕೇರಿ ಟಿ20 ವಿಶ್ವಕಪ್ ಅರ್ಹತೆ ಖಚಿತಪಡಿಸಿಕೊಳ್ಳಲಿದೆ.
ಆಗ ಸ್ಕಾಟ್ಲೆಂಡ್-ಜೆರ್ಸಿ ನಡುವಿನ ಪಂದ್ಯದಲ್ಲಿ ಗೆದ್ದ ತಂಡವನ್ನು ರನ್ರೇಟ್ನಲ್ಲಿ ಹಿಂದಿಕ್ಕಿದರೆ ಇಟಲಿ 2ನೇ ಸ್ಥಾನದೊಂದಿಗೆ ಟಿ20 ವಿಶ್ವಕಪ್ ಅರ್ಹತೆ ಪಡೆಯಬಹುದಾಗಿದೆ. ಸದ್ಯ ಇಟಲಿ (1.722), ಜೆರ್ಸಿ (0.43) ಮತ್ತು ಸ್ಕಾಟ್ಲೆಂಡ್ಗಿಂತ (0.150) ಉತ್ತಮ ರನ್ರೇಟ್ಅನ್ನೇ ಹೊಂದಿದೆ. ಇಟಲಿ ಕೊನೇ ಪಂದ್ಯದಲ್ಲೂ ಗೆದ್ದರೆ ಬೇರಾವುದೇ ಲೆಕ್ಕಾಚಾರವಿಲ್ಲದೆ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲಿದೆ ಮತ್ತು ಟಿ20 ವಿಶ್ವಕಪ್ ಟಿಕೆಟ್ ಒಲಿಸಿಕೊಳ್ಳಲಿದೆ.