ನಾನು ಖಂಡಿತವಾಗಿಯೂ... ಆರ್​ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಎಬಿ ಡಿವಿಲಿಯರ್ಸ್! AB de Villiers

AB de Villiers
Published on

AB de Villiers : ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ ಎಬಿ ಡಿವಿಲಿಯರ್ಸ್ ಬಗ್ಗೆ ಕ್ರೀಡಾಭಿಮಾನಿಗಳಿಗೆ ವಿಶೇಷವಾಗಿ ಹೇಳಬೇಕಿಲ್ಲ. ವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಎಬಿಡಿ ಕೂಡ ಒಬ್ಬರು. ಮಿ.360 ಎಂದೇ ಖ್ಯಾತಿಯಾಗಿರುವ ಎಬಿಡಿಗೆ ಅಸಂಖ್ಯಾತ ಅಭಿಮಾನಿಗಳಿದ್ದರೆ. ಅದರಲ್ಲಿ ಹೆಚ್ಚಿನ ಸಂಖ್ಯೆ ಅಭಿಮಾನಿಗಳು ನಮ್ಮ ಕನ್ನಡಿಗರು ಎಂದರೆ ತಪ್ಪಾಗಲಾರದು. ಎಬಿಡಿಗೂ ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧವಿದೆ. ಅದಕ್ಕೆ ಕಾರಣ ಐಪಿಎಲ್​.

ಏಳು ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಎಬಿಡಿ ನಿವೃತ್ತರಾದರು. ಇದಾದ ಬಳಿಕ ಫ್ರಾಂಚೈಸಿ ಕ್ರಿಕೆಟ್‌ನೊಂದಿಗೆ ಅಭಿಮಾನಿಗಳನ್ನು ರಂಜಿಸಿದರು. ಇದೀಗ ಫ್ರಾಂಚೈಸಿ ಲೀಗ್​ಗಳಿಂದಲೂ ದೂರ ಉಳಿದಿದ್ದಾರೆ. ಎಬಿಡಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದರು. ಡೆಲ್ಲಿ ಡೇರ್‌ಡೆವಿಲ್ಸ್ (ಈಗ ದೆಹಲಿ ಕ್ಯಾಪಿಟಲ್ಸ್) ನೊಂದಿಗೆ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ ಡಿವಿಲಿಯರ್ಸ್ 2011 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸೇರಿದರು. ನಿವೃತ್ತಿಯಾಗುವವರೆಗೂ ಅದೇ ತಂಡದಲ್ಲಿ ಉಳಿದಿದ್ದ ಎಬಿಡಿ, ಆರ್‌ಸಿಬಿ ಜೊತೆ ವಿಶೇಷ ಸಂಪರ್ಕವನ್ನು ಬೆಳೆಸಿಕೊಂಡಿದ್ದಾರೆ.

ಆರ್‌ಸಿಬಿ ಐಪಿಎಲ್-2025 ಫೈನಲ್ ಗೆದ್ದ ನಂತರ, ಡಿವಿಲಿಯರ್ಸ್ ಅವರು, ವೆಸ್ಟ್ ಇಂಡೀಸ್‌ನ ದಂತಕತೆ ಕ್ರಿಸ್ ಗೇಲ್ ಅವರೊಂದಿಗೆ ವಿರಾಟ್ ಕೊಹ್ಲಿ ಜೊತೆ ಸಂಭ್ರಮಿಸಿದರು. ಪಂಜಾಬ್ ಕಿಂಗ್ಸ್ ವಿರುದ್ಧದ ಫೈನಲ್​ ಪಂದ್ಯದಲ್ಲಿ ಆರ್‌ಸಿಬಿಯನ್ನು ಬೆಂಬಲಿಸಲು ಆಫ್ರಿಕಾದಿಂದ ಡಿವಿಲಿಯರ್ಸ್ ಆಗಮಿಸಿದ್ದರು. 18ನೇ ಆವೃತ್ತಿಯಲ್ಲಿ ಕಪ್​ ಗೆಲ್ಲುವ ಮೂಲಕ ಹದಿನೇಳು ವರ್ಷಗಳ ಕನಸು ಈಡೇರಿದ್ದಕ್ಕೆ ಎಬಿಡಿ ಭಾವುಕರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಆ ಕ್ಷಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಕೂಡ ಆಗಿತ್ತು.

ಅಂದಹಾಗೆ, ಆರ್‌ಸಿಬಿ ಅಭಿಮಾನಿಗಳು ಇನ್ನೂ ಡಿವಿಲಿಯರ್ಸ್ ಅವರನ್ನು ತಮ್ಮ ತಂಡದ ಭಾಗವೆಂದು ಪರಿಗಣಿಸುತ್ತಾರೆ. ಡಿವಿಲಿಯರ್ಸ್​ ಅವರು ಮತ್ತೊಮ್ಮೆ ನಮ್ಮ ತಂಡಕ್ಕೆ ಹಿಂತಿರುಗಿದರೆ ಅದಕ್ಕಿಂತ ಒಳ್ಳೆಯ ಸಂಗತಿ ಮತ್ತೊಂದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಸೆಯನ್ನು ಆಗಾಗ ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಆ ಸಮಯ ಬಂದಿರುವಂತೆ ತೋರುತ್ತದೆ. ಹೌದು, ಈ ವಿಚಾರವಾಗಿ ಸ್ವತಃ ಡಿವಿಲಿಯರ್ಸ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಕೋಚ್ ಅಥವಾ ಮಾರ್ಗದರ್ಶಕರಾಗಿ ಎಂಟ್ರಿ

ಎಬಿಡಿ ಅವರು ಆಟಗಾರನಾಗಿ ಮರುಪ್ರವೇಶಿಸುವ ಬದಲು ಕೋಚ್ ಅಥವಾ ಮಾರ್ಗದರ್ಶಕ ಪಾತ್ರದಲ್ಲಿ ಆರ್‌ಸಿಬಿಗೆ ಸೇರಬಹುದು ಎಂಬ ಸುಳಿವು ನೀಡಿದ್ದಾರೆ. ಭವಿಷ್ಯದಲ್ಲಿ ನಾನು ಮತ್ತೆ ಐಪಿಎಲ್‌ನ ಭಾಗವಾಗುವ ಸಾಧ್ಯತೆಯಿದೆ. ನನ್ನ ಹೃದಯ ಯಾವಾಗಲೂ ಆರ್‌ಸಿಬಿ ಜೊತೆಗಿರುತ್ತದೆ. ಆರ್‌ಸಿಬಿ ಫ್ರಾಂಚೈಸಿ ನನಗೆ ಕೋಚ್ ಅಥವಾ ಮಾರ್ಗದರ್ಶಕ ಜವಾಬ್ದಾರಿಯನ್ನು ನೀಡಲು ಬಯಸಿದರೆ ನಾನು ಅದಕ್ಕೆ ಸಿದ್ಧನಿದ್ದೇನೆ. ಭವಿಷ್ಯದಲ್ಲಿ ನಾನು ಐಪಿಎಲ್‌ನಲ್ಲಿ ಮರಳಿದರೆ, ನಾನು ಖಂಡಿತವಾಗಿಯೂ ಆರ್‌ಸಿಬಿಯಲ್ಲೇ ಇರುತ್ತೇನೆ ಎಂದು ಡಿವಿಲಿಯರ್ಸ್ ಸುದ್ದಿ ಸಂಸ್ಥೆ ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಅಂದಹಾಗೆ ಡಿವಿಲಿಯರ್ಸ್ ಅವರು 2004 ರಿಂದ 2018 ರವರೆಗೆ ದಕ್ಷಿಣ ಆಫ್ರಿಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ತಮ್ಮ ವೃತ್ತಿಜೀವನದಲ್ಲಿ 114 ಟೆಸ್ಟ್, 228 ಏಕದಿನ ಮತ್ತು 78 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಆಯಾ ಸ್ವರೂಪಗಳಲ್ಲಿ 8765, 9577 ಮತ್ತು 1672 ರನ್ ಗಳಿಸಿದ್ದಾರೆ. ಅದೇ ರೀತಿ ಐಪಿಎಲ್‌ನಲ್ಲಿ 184 ಪಂದ್ಯಗಳನ್ನು ಆಡಿರುವ ಎಬಿಡಿ 5162 ರನ್ ಗಳಿಸಿದ್ದಾರೆ. ಇದರಲ್ಲಿ 40 ಅರ್ಧಶತಕಗಳು ಮತ್ತು ಮೂರು ಶತಕಗಳು ಸೇರಿವೆ. ಡಿವಿಲಿಯರ್ಸ್ ಕೊನೆಯ ಬಾರಿಗೆ 2021 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಪರ ಐಪಿಎಲ್ ಪಂದ್ಯವನ್ನು ಆಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net