

ಚೆನ್ನೈ: ನಿನ್ನೆ (ಮೇ.12) ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಭಾರೀ ಹಣಾಹಣಿಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಚೆನ್ನೈ ಪಡೆ ಐದು ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತು. ಹೆಚ್ಚುವರಿ ರನ್ಗಳಿಂದ ಗೆಲ್ಲದೇ ಹೋದರು, ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಭದ್ರಪಡಿಸಿಕೊಳ್ಳುವಲ್ಲಿ ಸಿಎಸ್ಕೆ ಯಶಸ್ವಿಯಾಗಿದೆ. ಸದ್ಯ ಇದು ಪ್ಲೇಆಫ್ ಪ್ರವೇಶಿಸುವ ಭರವಸೆಯನ್ನು ಮತ್ತಷ್ಟು ಬಲವಾಗಿಸಿದ್ದು, ಚೆನ್ನೈ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ.
ಒಂದೆಡೆ ಚೆನ್ನೈ ಪಡೆ ಒಂದು ಪಂದ್ಯ ಸೋತರು ಮತ್ತೊಂದನ್ನು ಗೆಲ್ಲುವ ಮೂಲಕ ಪ್ಲೇಆಫ್ಗಾಗಿ ಕಸರತ್ತು ನಡೆಸುತ್ತಿದ್ದರೆ, ಮತ್ತೊಂದೆಡೆ ಸಿಎಸ್ಕೆಯ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ನಿವೃತ್ತಿ ಮಾತುಗಳು ವ್ಯಾಪಕವಾಗಿ ಆವರಿಸಿಕೊಂಡಿದೆ. ರಾಜಸ್ಥಾನದ ಪಂದ್ಯವೇ ಧೋನಿ ಅವರ ಕಡೆಯ ಐಪಿಎಲ್ ಮ್ಯಾಚ್. ಇದೇ ಸತ್ಯ, ಯಾಕಂದ್ರೆ, ಕೆಲವು ಪಂದ್ಯಗಳಿಗೆ ಆಗಮಿಸದ ಎಂ.ಎಸ್. ಧೋನಿ ಪತ್ನಿ ಸಾಕ್ಷಿ. ನಿನ್ನೆಯ ಪಂದ್ಯ ವೀಕ್ಷಿಸಲು ಚೆನ್ನೈಗೆ ಆಗಮಿಸಿದ್ದರು. ಇದು ಅಭಿಮಾನಿಗಳಲ್ಲಿ ಭಾರೀ ಗೊಂದಲ ಮೂಡಿಸಿದ್ದು, 2024 ಧೋನಿಯ ಲಾಸ್ಟ್ ಐಪಿಎಲ್ ಎಂಬುದೇ ಖಚಿತ ಎನ್ನಲಾಗುತ್ತಿದೆ.
ಸದ್ಯ ಇದೇ ಧೋನಿಯ ಲಾಸ್ಟ್ ಐಪಿಎಲ್. ಚೆಪಾಕ್ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ತಾವು ಸಹಿ ಮಾಡಿದ ಬಾಲ್ ಕೊಟ್ಟಿದ್ದಾರೆ ಎಂದರೆ, ಇದು ನಿವೃತ್ತಿಯ ಪಂದ್ಯವೇ ನಿಜ. ಥಾಂಕ್ಯೂ ಮಾಹಿ, ಮುಂದಿನ ದಿನಗಳಲ್ಲಿ ನಿಮ್ಮಂತ ಕ್ಯಾಪ್ಟನ್ ನೋಡುವುದು ಅಪರೂಪ. ವಿ ಮಿಸ್ ಯೂ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಇದೇ ವಿಷಯ ಸ್ಟೇಡಿಯಂನಲ್ಲಿ ಕುಳಿತ್ತಿದ್ದ ಕ್ರಿಕೆಟ್ ಫ್ಯಾನ್ಸ್ಗಳಲ್ಲಿಯೂ ಕಾಡಿದ್ದು, ಪೋಸ್ಟರ್ ಹಿಡಿದು ಧನ್ಯವಾದ ಅರ್ಪಿಸಿದರು. ಇದನ್ನೇ ಧೋನಿ ಅವರ ಆಪ್ತಮಿತ್ರ ಸುರೇಶ್ ರೈನಾಗೆ ಪ್ರಶ್ನೆಯಾಗಿ ಮುಂದಿಟ್ಟ ಕಮೆಂಟೇಟರ್ಗೆ ಸಿಕ್ಕ ಉತ್ತರ ಮಾತ್ರ ಬಹಳ ಶಾಕಿಂಗ್ ಆಗಿತ್ತು.
ಚೆನ್ನೈನಲ್ಲಿ ಇದೇ ಧೋನಿಯ ಕಡೆಯ ಪಂದ್ಯವೇ? ಎಂಬ ಪ್ರಶ್ನೆಗೆ, 'ಖಂಡಿತ ಇಲ್ಲ' ಎಂದು ಎರಡೇ ಪದಗಳಲ್ಲಿ ರೈನಾ ಉತ್ತರಿಸಿದರು. ಸದ್ಯ ಟೀಂ ಇಂಡಿಯಾದ ಮಾಜಿ ಆಟಗಾರ, ಧೋನಿ ಆಪ್ತ ಸ್ನೇಹಿತನ ಈ ಉತ್ತರಕ್ಕೆ ಮಾಹಿ ಫ್ಯಾನ್ಸ್ ಫಿದಾ ಆಗಿದ್ದು, ಮುಂದಿನ ವರ್ಷ ಸಹ ಅವರು ಆಡುವುದನ್ನು ನೋಡಬೇಕು ಎಂಬುದೇ ನಮ್ಮ ಮಹಾದಾಸೆ ಎಂದು ಆಶಿಸಿದ್ದಾರೆ,(ಏಜೆನ್ಸೀಸ್).