

ಬೆಂಗಳೂರು: ಕೇವಲ ಮೂವರು ಭಾರತೀಯ ಆಟಗಾರರನ್ನು ರಿಟೇನ್ ಮಾಡಿಕೊಂಡು ಐಪಿಎಲ್ ಮೆಗಾ ಹರಾಜಿಗೆ ತೆರಳಿದ ಆರ್ಸಿಬಿ ತಂಡ ಈ ಬಾರಿ ಬಹುತೇಕ ಹೊಸ ತಂಡವನ್ನೇ ಕಟ್ಟಿಕೊಂಡಿದೆ. ಕಳೆದ 2 ಆವೃತ್ತಿಗಳ ನಾಯಕ ಫಾಫ್ ಡು ಪ್ಲೆಸಿಸ್ರನ್ನು ರಿಲೀಸ್ ಮಾಡಿದ್ದ ಆರ್ಸಿಬಿ ತಂಡ ಹರಾಜಿನಲ್ಲಿ ಅವರನ್ನು ಆರ್ಟಿಎಂ ಮಾಡಿಕೊಳ್ಳಲಿಲ್ಲ. ಜತೆಗೆ ನಾಯಕತ್ವ ವಹಿಸಿಕೊಳ್ಳುವಂಥ ಬೇರೆ ಅನುಭವಿ ಆಟಗಾರರನ್ನೂ ಖರೀದಿಸಲಿಲ್ಲ. ಇದರಿಂದಾಗಿ ವಿರಾಟ್ ಕೊಹ್ಲಿಗೆ ಮತ್ತೊಮ್ಮೆ ನಾಯಕತ್ವ ನೀಡುವ ಸಾಧ್ಯತೆ ಹೆಚ್ಚಾಗಿದೆ.
ರಿಷಭ್ ಪಂತ್, ಕೆಎಲ್ ರಾಹುಲ್ ಅಥವಾ ಶ್ರೇಯಸ್ ಅಯ್ಯರ್ರಂಥ ನಾಯಕತ್ವ ವಹಿಸಿಕೊಳ್ಳಬಲ್ಲಂಥ ಆಟಗಾರರನ್ನು ಆರ್ಸಿಬಿ ತಂಡ ಹರಾಜಿನಲ್ಲಿ ಖರೀದಿಸಲಿದೆ ಎಂದು ವರದಿಯಾಗಿದ್ದರೂ, ಹರಾಜು ಟೇಬಲ್ನಲ್ಲಿ ಅದು ಹುಸಿಯಾಗಿದೆ. ಇದರಿಂದಾಗಿ ಈ ಬಾರಿ, 21 ಕೋಟಿ ರೂ.ಗೆ ರಿಟೇನ್ ಮಾಡಿಕೊಳ್ಳಲಾಗಿರುವ ಕೊಹ್ಲಿ ಅವರಿಗೇ ಮತ್ತೆ ನಾಯಕತ್ವ ವಹಿಸಲಿದೆ ಎನ್ನಲಾಗಿದೆ.
ಕೊಹ್ಲಿ ಈ ಮುನ್ನ 2013ರಿಂದ 2021ರವರೆಗೆ ಆರ್ಸಿಬಿ ತಂಡದ ನಾಯಕರಾಗಿದ್ದರು. ಆದರೆ ಬ್ಯಾಟಿಂಗ್ನತ್ತ ಹೆಚ್ಚಿನ ಗಮನಹರಿಸುವ ಸಲುವಾಗಿ 2022ರ ಆವೃತ್ತಿಗೆ ಮುನ್ನ ನಾಯಕತ್ವ ತ್ಯಜಿಸಿದ್ದರು. ಕಳೆದ ಟಿ20 ವಿಶ್ವಕಪ್ ಬಳಿಕ ಅವರು ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವುದರಿಂದ ಸದ್ಯ ಹೆಚ್ಚಿನ ಹೊರೆ ಹೊಂದಿಲ್ಲ. ಹೀಗಾಗಿ ತನ್ನ ಪ್ರಮುಖ ಕೊರತೆಯಾಗಿರುವ ಐಪಿಎಲ್ ಟ್ರೋಫಿಯನ್ನು ಈ ಬಾರಿ ನನಸಾಗಿಸಿಕೊಳ್ಳಲು ಅವರು ಮತ್ತೆ ನಾಯಕತ್ವವನ್ನು ಒಪ್ಪಿಕೊಳ್ಳುವ ನಿರೀಕ್ಷೆ ಇದೆ.