ತವರಿಗೆ ಮರಳಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರಿಗೆ ಐಸೋಲೇಶನ್

south mar 20
Published on

ಜೊಹಾನ್ಸ್​ಬರ್ಗ್: ಕರೊನಾ ವೈರಸ್ ಭೀತಿಯಿಂದಾಗಿ ಭಾರತ ಪ್ರವಾಸ ಮೊಟಕುಗೊಳಿಸಿ ತವರಿಗೆ ವಾಪಸಾಗಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮುಂದಿನ 14 ದಿನಗಳ ಕಾಲ ಸ್ವಯಂ ಐಸೋಲೇಷನ್​ನಲ್ಲಿರಲು (ಇತರರ ಸಂಪರ್ಕವಿಲ್ಲದೆ ಏಕಾಂಗಿಯಾಗಿರುವುದು) ಸೂಚಿಸಲಾಗಿದೆ. ಆಟಗಾರರು ತಾವಾಗಿಯೇ ದೂರವಿರಲು ಸೂಚಿಸಲಾಗಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ.ಶುಹೈಬ್ ಮಾಂಜ್ರ ತಿಳಿಸಿದ್ದಾರೆ.

‘ಮುಂದಿನ 14 ದಿನಗಳ ಕಾಲ ಆಟಗಾರರಿಗೆ ಸಾಮಾಜಿಕ ಚಟುವಟಿಕೆಗಳಿಂದ ದೂರವಿದ್ದು, ಜನರಿಂದ ದೂರವಿದ್ದಷ್ಟು ಅನುಕೂಲ. ‘ಈ ವೇಳೆ ಯಾರಿಗಾದರೂ ಕರೊನಾ ಲಕ್ಷಣ ಕಂಡು ಬಂದಲ್ಲಿ ಸೂಕ್ತವಾಗಿ ಚಿಕಿತ್ಸೆ ನೀಡಲಾಗುವುದು’ ಎಂದು ತಿಳಿಸಿದರು. ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳನ್ನಾಡಲು ಭಾರತಕ್ಕೆ ಆಗಮಿಸಿತ್ತು. ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಮೊದಲ ಪಂದ್ಯ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರೆ, ಕರೊನಾ ವೈರಸ್ ಭೀತಿಯಿಂದ ಉಳಿದ 2 ಪಂದ್ಯಗಳು ರದ್ದುಗೊಂಡಿದ್ದವು. ಭಾರತ ಪ್ರವಾಸದ ವೇಳೆ ಕೆಲ ಆಟಗಾರರು ಮಾಸ್ಕ್ ಧರಿಸಿದ್ದರೆ, ಕೆಲ ಮಂದಿ ಮಾಸ್ಕ್ ಧರಿಸಿರಲಿಲ್ಲ.

ಪ್ರವಾಸದ ವೇಳೆ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೆವು ಎಂದು ಮಾಂಜ್ರ ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡ ಕೋಲ್ಕತ ಮಾರ್ಗವಾಗಿ ಮಂಗಳವಾರ ತವರಿಗೆ ವಾಪಸಾಯಿತು. ಭಾರತದಲ್ಲಿ ಸದ್ಯ ಕರೊನಾ ಪ್ರಕರಣಗಳ ಸಂಖ್ಯೆ 150 ದಾಟಿದ್ದರೆ, ದಕ್ಷಿಣ ಆಫ್ರಿಕಾದಲ್ಲೂ ಬುಧವಾರದ ವೇಳೆಗೆ 116 ಪ್ರಕರಣಗಳು ಪತ್ತೆಯಾಗಿವೆ. ದಕ್ಷಿಣ ಆಫ್ರಿಕಾ ತಂಡ ತಂಗಿದ್ದ ವೇಳೆ ಧರ್ಮಶಾಲಾ, ಲಖನೌ ಮತ್ತು ಕೋಲ್ಕತದಲ್ಲಿ ಯಾವುದೇ ಕರೊನಾ ಪ್ರಕರಣ ಪತ್ತೆಯಾಗಿರಲಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net