ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸಿ ರಿಷಭ್ ಪಂತ್‌ಗೆ ಧನ್ಯವಾದ ತಿಳಿಸಿದ ಇಶಾನ್ ಕಿಶನ್

kishannn
Published on

ಪೋಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಂತ್ಯಕ್ಕೆ ಭಾರತ ಮೇಲುಗೈ ಸಾಧಿಸಿದ್ದು, ಪಂದ್ಯದ ಅಂತಿಮ ದಿನ ಗೆಲುವಿಗೆ ವಿಂಡೀಸ್‌ನ 8 ವಿಕೆಟ್ ಕಬಳಿಸಬೇಕಿದೆ. ಗೆಲುವಿಗೆ 365ರನ್ ಪಡೆದಿರುವ ವಿಂಡೀಸ್ ದ್ವೀತೀಯ ಇನಿಂಗ್ಸ್‌ನಲ್ಲಿ 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 76 ರನ್‌ಗಳಿಸಿದ್ದು, ಗೆಲುವಿಗೆ ಇನ್ನೂ 289 ರನ್ ಪೇರಿಸಬೇಕಿದೆ.

ವಿಂಡೀಸ್ ವಿರುದ್ಧ ಮೊದಲ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಭಾರತದ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕೇವಲ 33 ಎಸೆತಗಳಲ್ಲಿ ಚೊಚ್ಚಲ ಟೆಸ್ಟ್ ಅರ್ಧಶತಕ ಬಾರಿಸಿದರು. ಇದರಲ್ಲಿ 2 ಸಿಕ್ಸರ್ ಸಹ ಸೇರಿವೆ. ವಿಶೇಷವೆಂದರೆ ಎನ್‌ಸಿಎ ಯಲ್ಲಿರುವಾಗ ರಿಷಭ್ ಪಂತ್ ನೀಡಿದ ಬ್ಯಾಟ್‌ನಿಂದಲೇ ಈ ಸಾಧನೆ ಮಾಡಿದರೆ. ವೈಯಕ್ತಿಕ 44 ರನ್‌ಗಳಿಸಿದಾಗ ಕಿಶನ್ ಒಂದೇ ಕೈಯಲ್ಲಿ ಸಿಕ್ಸರ್ ಬಾರಿಸಿ ತನ್ನ ಅರ್ಧಶತಕ ಪೂರೈಸಿದರು. ಇದು ರಿಷಭ್ ಪಂತ್ ಅವರ ಟ್ರೇಡ್‌ಮಾರ್ಕ್ ಹೊಡೆತ ಎನಿಸಿದೆ.

ಪಂದ್ಯದ ನಾಲ್ಕನೇ ದಿನದ ಆಟ ಬಳಿಕ ಮಾತನಾಡಿರುವ ಇಶಾನ್ ಕಿಶನ್, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ರಿಷಭ್ ಪಂತ್ ಜತೆಯಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ಇದೇ ಸಮಯದಲ್ಲಿ ಪಂತ್ ಕೆಲವು ಉಪಯುಕ್ತ ವಿಕೆಟ್ ಕೀಪಿಂಗ್ ಸಲಹೆ ಜತೆಗೆ ಬ್ಯಾಟಿಂಗ್ ಟಿಪ್ಸ್ ಸಹ ನೀಡಿದರು ಎಂದು ಕಿಶನ್ ಬಹಿರಂಗಪಡಿದ್ದಾರೆ. ಟೀಮ್ ಇಂಡಿಯಾದ ಬಿಳಿ ಜೆರ್ಸಿಯಲ್ಲಿ ಆಡುವುದು ನನ್ನ ಕನಸಾಗಿತ್ತು. ಇದಕ್ಕೆ ಬೆಂಬಲ ನೀಡಿದ ನನ್ನ ಹೆತ್ತವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಇಶಾನ್ ಕಿಶನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net