

ನವದೆಹಲಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಎರಡು ದಶಕಗಳ ವೃತ್ತಿಜೀವನದಲ್ಲಿ ಹಲವಾರು ಪ್ರಚಂಡ ಬೌಲರ್‌ಗಳ ದಾಳಿಯನ್ನು ಎದುರಿಸಿದ್ದಾರೆ. ಈ ನಡುವೆ ಮಹಿಳಾ ಕ್ರಿಕೆಟ್ ಬೌಲರ್ ಒಬ್ಬರ ಎಸೆತವನ್ನೂ ಅವರು ಎದುರಿಸಿದ್ದರು! ಆ ಬೌಲರ್ ಯಾರೆಂದು ಗೊತ್ತೇ?
ಪ್ರಸಕ್ತ ವೀಕ್ಷಕವಿವರಣೆಕಾರರಾಗಿ ಜನಪ್ರಿಯತೆ ಪಡೆದುಕೊಂಡಿರುವ ಇಂಗ್ಲೆಂಡ್ ಮಹಿಳಾ ತಂಡದ ಮಾಜಿ ವೇಗಿ ಇಶಾ ಗುಹಾ, ಸಚಿನ್ ತೆಂಡುಲ್ಕರ್‌ಗೆ ಬೌಲಿಂಗ್ ಮಾಡುತ್ತಿರುವ ಚಿತ್ರವನ್ನು ಗುರುವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದು, 2005ರಲ್ಲಿ ನೆಟ್ಸ್‌ನಲ್ಲಿ ದಿಗ್ಗಜ ಬ್ಯಾಟ್ಸ್‌ಮನ್‌ಗೆ ಬೌಲಿಂಗ್ ಮಾಡಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ.
‘ಲಾಕ್‌ಡೌನ್‌ನಲ್ಲಿ ಪತ್ತೆಯಾದವುಗಳಲ್ಲಿ ಇದೂ ಒಂದು! ಅವರಿಗೆ ಇದು ನೆನಪಿಲ್ಲದೆ ಇರಬಹುದು. ಆದರೆ, 2005ರಲ್ಲಿ ಎಲ್ಬೋ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಲಿಟ್ಲ್ ಮಾಸ್ಟರ್ ಕೆಲ ನೆಟ್ ಬೌಲರ್‌ಗಳನ್ನು ಕೇಳಿದ್ದರು. ನಾನೂ ಕೂಡ ಅದೃಷ್ಟಶಾಲಿಗಳಲ್ಲಿ ಒಬ್ಬಳಾಗಿದ್ದೆ. ನಾವು ಸುಮಾರು ಒಂದು ಗಂಟೆ ಕಾಲ ಬೌಲಿಂಗ್ ಮಾಡಿದ್ದೆವು. ಸಚಿನ್ ಆಗ ಎಡಗೈನಲ್ಲೂ ಬ್ಯಾಟಿಂಗ್ ಮಾಡಿದ್ದರು ಮತ್ತು ಅದರಲ್ಲೂ ಅಷ್ಟೇ ಉತ್ತಮವಾಗಿದ್ದರು. ಈ ಚಿತ್ರವನ್ನು ತೆಗೆದವರು ಯಾರೇ ಆಗಿದ್ದರೂ ಅವರಿಗೆ ನನ್ನ ಧನ್ಯವಾದಗಳು’ ಎಂದು ಭಾರತ ಮೂಲದ ಆಟಗಾರ್ತಿ ಇಶಾ ಗುಹಾ ಟ್ವೀಟಿಸಿದ್ದಾರೆ.
35 ವರ್ಷದ ಇಶಾ ಗುಹಾ ಇಂಗ್ಲೆಂಡ್ ಪರ 8 ಟೆಸ್ಟ್, 83 ಏಕದಿನ ಮತ್ತು 22 ಟಿ20 ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 29, 101, 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2005 ಮತ್ತು 2009ರ ಏಕದಿನ ವಿಶ್ವಕಪ್‌ನಲ್ಲೂ ಆಡಿದ್ದರು. ಈ ಪೈಕಿ 2009ರಲ್ಲಿ ವಿಶ್ವಕಪ್ ಗೆಲುವನ್ನೂ ಕಂಡಿದ್ದರು. ಕೋಲ್ಕತ ಮೂಲದ ಬಂಗಾಳಿ ಕುಟುಂಬದಲ್ಲಿ ಜನಿಸಿದ ಗುಹಾ, ಅಣ್ಣನ ಜತೆಗೆ 8ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲಾರಂಭಿಸಿದ್ದರು. ನಿವೃತ್ತಿಯ ನಂತರ ವೀಕ್ಷಕವಿವರಣೆಕಾರರಾಗಿರುವ ಅವರು ಐಪಿಎಲ್‌ನಲ್ಲೂ ಕಾರ್ಯನಿರ್ವಹಿಸಿದ್ದಾರೆ.