

ನವದೆಹಲಿ: ಮುಂದಿನ ಐಪಿಎಲ್ ಆವೃತ್ತಿಗೆ ಹೊಸ ತಂಡ ಸೇರ್ಪಡೆಯಾಗಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಹೊಸ ತಂಡ ಯಾವುದಿರಬಹುದು ಮತ್ತು ಮಾಲೀಕರು ಯಾರಾಗಬಹುದು ಎಂಬ ಕುತೂಹಲ ಹರಡಿದೆ. ಅಹಮದಾಬಾದ್‌ನಿಂದ ಹೊಸ ತಂಡ ಸೇರ್ಪಡೆಯಾಗಲಿದೆ ಎಂದು ಹೇಳಲಾಗುತ್ತಿದ್ದರೂ, ಇತರ ನಗರಗಳ ತಂಡದ ಹಕ್ಕು ಪಡೆದುಕೊಳ್ಳಲು ಕೂಡ ಭಾರಿ ಪೈಪೋಟಿ ಏರ್ಪಡುವ ನಿರೀಕ್ಷೆ ಹರಡಿದೆ. ಮಲಯಾಳಂ ನಟ ಮೋಹನ್‌ಲಾಲ್ ಕೂಡ ಐಪಿಎಲ್ ತಂಡದ ಖರೀದಿಗೆ ಆಸಕ್ತಿ ಹೊಂದಿದ್ದಾರೆ ಎಂಬುದು ಇದೀಗ ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.
ಮೋಹನ್‌ಲಾಲ್ ಅವರು ಮಂಗಳವಾರ ದುಬೈನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಫೈನಲ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಬಿಸಿಸಿಐ ಅತಿಥಿಗಳ ಸಾಲಿನಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್ ತಂಡದ ಖರೀದಿಗೆ ಆಸಕ್ತಿ ಹೊಂದಿರುವ ಅವರು ಈ ಬಗ್ಗೆ ಬಿಸಿಸಿಐ ಅಧಿಕಾರಿಗಳೊಂದಿಗೆ ಚರ್ಚಿಸುವ ಸಲುವಾಗಿಯೇ ದುಬೈಗೆ ತೆರಳಿದ್ದರು ಎನ್ನಲಾಗುತ್ತಿದೆ.
‘ದೃಶ್ಯ-2’ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಅವರು ಒಂದು ವಾರದ ಬಿಡುವಿನ ಮೇರೆಗೆ ದುಬೈಗೆ ತೆರಳಿದ್ದರು. ಇದೇ ಸಮಯದಲ್ಲಿ ಅವರು ಐಪಿಎಲ್‌ನ ಹೊಸ ತಂಡದ ಖರೀದಿಯ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಮೋಹನ್‌ಲಾಲ್ ಅವರು ಆನ್‌ಲೈನ್ ಶಿಕ್ಷಣ ಕಂಪನಿ ಬೈಜುಸ್ ಕಂಪನಿಯ ಮಾಲೀಕರ ಜತೆಗೆ ಐಪಿಎಲ್ ಫೈನಲ್ ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು. ಅವರಿಬ್ಬರು ಜತೆಯಾಗಿ ಹೊಸ ತಂಡಕ್ಕೆ ಬಿಡ್ ಸಲ್ಲಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.
ಐಪಿಎಲ್‌ಗೆ ಹೊಸ ತಂಡ ಸೇರ್ಪಡೆಯಾಗುವುದಾದರೆ ಅದನ್ನು ಕೊಂಡುಕೊಳ್ಳಲು ದೇಶದ ಹಲವು ಉದ್ಯಮಿಗಳು ಈಗಾಗಲೆ ಆಸಕ್ತಿ ತೋರಿದ್ದಾರೆ. ಅದಾನಿ ಗ್ರೂಪ್, ಟಾಟಾ ಗ್ರೂಪ್, ಈ ಹಿಂದೆ ಪುಣೆ ಸೂಪರ್‌ಜೈಂಟ್ಸ್ ತಂಡದ ಒಡೆತನ ಹೊಂದಿದ್ದ ಆರ್‌ಪಿಜಿ-ಸಂಜೀವ್ ಗೊಯೇಂಕಾ ಗ್ರೂಪ್, ಬ್ಯಾಂಕರ್ ಉದಯ್ ಕೋಟಕ್, ಮಾಧ್ಯಮ ವಾಣಿಜ್ಯೋದ್ಯಮಿ ರೋನ್ನೆ ಸ್ಕೂವಾಲಾ ಹೊಸ ತಂಡಗಳ ಖರೀದಿಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.