

ಮುಂಬೈ: ಟೀಮ್ ಇಂಡಿಯಾದ ಆಲ್ರೌಂಡರ್ ಆಟಗಾರ ಇರ್ಫಾನ್ ಪಠಾಣ್(35) ಅವರು ಶನಿವಾರ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವ ಮೂಲಕ ಸುದೀರ್ಘ ಕ್ರಿಕೆಟ್ ಜರ್ನಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇರ್ಫಾನ್ ವಿದಾಯ ಅಚ್ಚರಿಯೇನಲ್ಲ. ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದ ಬಳಿಕ ಮತ್ತೆ ತಂಡವನ್ನು ಸೇರಿಕೊಳ್ಳಲೇ ಇಲ್ಲ. ಅದಕ್ಕೆ ಕಾರಣ ತಂಡದಲ್ಲಾದ ಹಲವು ಬದಲಾವಣೆಗಳು ಎನ್ನಬಹುದಾಗಿದೆ. ಯುವರಾಜ್ ವಿದಾಯವು ಇದಕ್ಕೆ ಹೊರತಾಗಿಲ್ಲ.
ಅಂದಹಾಗೆ ಪಠಾಣ್ 2019ರ ಫೆಬ್ರವರಿ ತಿಂಗಳಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಪರ ಆಡಿದ್ದೇ ಕೊನೆಯ ಪಂದ್ಯವಾಗಿದೆ. ಇನ್ನುಳಿದಂತೆ ಕಳೆದ ತಿಂಗಳು ನಡೆದ 2020ನೇ ಸಾಲಿನ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲೂ ಪಠಾಣ್ ಬಿಕರಿಯಾಗದೇ ಉಳಿದಿದ್ದಾರೆ. ಹೀಗಾಗಿ ವಿದಾಯಕ್ಕೆ ಇದು ಸೂಕ್ತ ಸಮಯವೆಂದು ಭಾವಿಸಿ ಪಠಾಣ್ ಕ್ರಿಕೆಟ್ ಗುಡ್ಬೈ ಹೇಳಿದ್ದಾರೆ.
ಪಠಾಣ್ 2003ರಲ್ಲಿ ಅಡಿಲೇಡ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿದರು. ತಮ್ಮ ಸ್ವಿಂಗ್ ಬಾಲ್ ಸಾಮರ್ಥ್ಯದಿಂದಲೇ ಪಠಾಣ್ ಬಹುಬೇಗನೇ ಯಶಸ್ಸು ಗಳಿಸಿದರು. ಪ್ರಾರಂಭದಲ್ಲಿ ಎಡಗೈ ಬೌಲರ್ ಆಗಿ ಬಂದ ಪಠಾಣ್ ಬಳಿಕ ಆಲ್ರೌಂಡರ್ ಆಗಿ ಬದಲಾಗಿದ್ದು, ತುಂಬಾ ವಿಶೇಷವೇ ಸರಿ. ಅಲ್ಲದೆ, ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ರೊಂದಿಗೆ ಪಠಾಣ್ ಹೋಲಿಕೆ ಮಾಡುವಷ್ಟರ ಮಟ್ಟಿಗೆ ಬೆಳೆದರು.
ಟೀಮ್ ಇಂಡಿಯಾ ಪರ 29 ಟೆಸ್ಟ್ ಪಂದ್ಯಗಳನ್ನಾಡಿರುವ ಪಠಾಣ್ 1105 ರನ್ ನೀಡಿ 100 ವಿಕೆಟ್ ಕಬಳಿಸಿದ್ದಾರೆ. 120 ಏಕದಿನ ಪಂದ್ಯಗಳಲ್ಲಿ 1544 ರನ್ಗೆ 173 ವಿಕೆಟ್ ಮತ್ತು 24 ಟಿ20 ಪಂದ್ಯಗಳಲ್ಲಿ 172 ರನ್ಗೆ 28 ವಿಕೆಟ್ ಉರುಳಿಸಿದ್ದಾರೆ.
ಟೀಮ್ ಇಂಡಿಯಾದ 2007ರ ಟಿ20 ವಿಶ್ವಕಪ್ ಗೆಲುವಿನಲ್ಲೂ ಪಠಾಣ್ ಭಾಗಿಯಾಗಿದ್ದರು. ಪಾಕ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೂ ಪಠಾಣ್ ಭಾಜನರಾಗಿದ್ದರು.
ಇರ್ಫಾನ್ಗೆ ಶುಭಕೋರಿದ ಕ್ರಿಕೆಟ್ ದಿಗ್ಗಜರು
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಇರ್ಫಾನ್ ಪಠಾಣ್ಗೆ ಹರ್ಭಜನ್ ಸಿಂಗ್, ಗೌತಮ್ ಗಂಭೀರ್, ಮಹಮ್ಮದ್ ಕೈಫ್ ಸೇರಿದಂತೆ ಅನೇಕ ಕ್ರಿಕೆಟ್ ದಿಗ್ಗಜರು ಶುಭ ಹಾರೈಸಿದ್ದಾರೆ. (ಏಜೆನ್ಸೀಸ್)