

ಪುಣೆ: ಐಪಿಎಲ್-15ರಲ್ಲಿ ಕೊನೆಯ 2 ತಂಡಗಳಾಗಿ ಕಣಕ್ಕಿಳಿಯಲು ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸಜ್ಜಾಗಿದ್ದು, ಶುಭಾರಂಭದ ನಿರೀಕ್ಷೆಯಲ್ಲಿವೆ. ಹಾಲಿ ಆವೃತ್ತಿಯಲ್ಲಿ ಎಂಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ಪಂದ್ಯ ಇದಾಗಿದೆ. 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಕನಿಷ್ಠ ಫೈನಲ್ ಪ್ರವೇಶಿಸಲು ವಿಫಲವಾಗಿರುವ ರಾಜಸ್ಥಾನ ರಾಯಲ್ಸ್ ತಂಡ ಈ ಬಾರಿ ಹೆಚ್ಚಾಗಿ ಯುವ ಪಡೆಯ ಸೇವೆಯನ್ನೇ ನೆಚ್ಚಿಕೊಂಡಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ದೃಷ್ಟಿಯಿಂದ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ವೈಯಕ್ತಿಕವಾಗಿ ಈ ಲೀಗ್ ಪ್ರಮುಖವಾಗಿದೆ. ಮತ್ತೊಂದೆಡೆ ಹಿಂದಿನ ಆವೃತ್ತಿಯಲ್ಲಿ ಹೀನಾಯ ನಿರ್ವಹಣೆಯೊಂದಿಗೆ ಟೀಕೆಗೆ ಗುರಿಯಾಗಿದ್ದ ಸನ್‌ರೈಸರ್ಸ್ ಪುಟಿದೇಳುವ ವಿಶ್ವಾಸದಲ್ಲಿದೆ.
* ಆತ್ಮವಿಶ್ವಾಸದಲ್ಲಿ ರಾಜಸ್ಥಾನ
ಇಂಗ್ಲೆಂಡ್‌ನ ಜೋಸ್ ಬಟ್ಲರ್ ಜತೆಗೆ ಕರ್ನಾಟಕದ ಯುವ ಬ್ಯಾಟರ್ ದೇವದತ್ ಪಡಿಕಲ್ ಅಥವಾ ಮುಂಬೈ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುವ ನಿರೀಕ್ಷೆ ಇದೆ. ಸ್ಫೋಟಕ ಬ್ಯಾಟರ್‌ಗಳಾದ ಶಿಮ್ರೋನ್ ಹೆಟ್ಮೆಯೆರ್, ರಾಸಿ ವಾನ್ ಡರ್ ಡುಸೆನ್, ಜೇಮ್ಸ್ ನೀಶಾಮ್, ರಿಯಾನ್ ಪರಾಗ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆರ್.ಅಶ್ವಿನ್, ಆರ್‌ಸಿಬಿ ಮಾಜಿ ಆಟಗಾರ ಯಜುವೇಂದ್ರ ಚಾಹಲ್‌ರಂಥ ಸ್ಟಾರ್ ಸ್ಪಿನ್ನರ್‌ಗಳನ್ನು ಹೊಂದಿರುವ ರಾಯಲ್ಸ್ ಎದುರಾಳಿ ತಂಡಕ್ಕೆ ಒತ್ತಡ ಹೇರುವ ಸಾಮರ್ಥ್ಯ ಹೊಂದಿದೆ. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್, ಕನ್ನಡಿಗ ಪ್ರಸಿದ್ಧ ಕೃಷ್ಣ, ನವದೀಪ್ ಸೈನಿ ವೇಗಿಗಳ ಬಳಗದಲ್ಲಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ತಂಡ ಸಮತೋಲನದಿಂದ ಕೂಡಿದೆ.
*ಸನ್‌ಗೆ ವಿಲಿಯಮ್ಸನ್ ಬಲ
2016ರ ಚಾಂಪಿಯನ್ ಸನ್‌ರೈಸರ್ಸ್‌ಗೆ ನಾಯಕ ಹಾಗೂ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ದೊಡ್ಡ ಬಲವಾಗಿದ್ದಾರೆ. ಕೇನ್ ವಿಲಿಯಮ್ಸನ್, ಗ್ಲೆನ್ ಫಿಲಿಪ್ಸ್, ನಿಕೋಲಸ್ ಪೂರನ್, ಪ್ರಿಯಂ ಗಾರ್ಗ್, ರಾಹುಲ್ ತ್ರಿಪಾಠಿ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಬಲ್ಲರು. ಅನುಭವಿ ವೇಗಿ ಭುವನೇಶ್ವರ್ ಕುಮಾರ್‌ಗೆ ಉಮ್ರಾನ್ ಮಲಿಕ್, ಎಡಗೈ ವೇಗಿ ಟಿ.ನಟರಾಜನ್ ಸಾಥ್ ನೀಡಿದರೆ, ಸ್ಪಿನ್ ವಿಭಾಗದಲ್ಲಿ ಟಿ20 ತಜ್ಞ ವಾಷಿಂಗ್ಟನ್ ಸುಂದರ್ ಜತೆಗೆ ಕನ್ನಡಿಗರಾದ ಶ್ರೇಯಸ್ ಗೋಪಾಲ್, ಜೆ.ಸುಚಿತ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಟೀಮ್ ನ್ಯೂಸ್:
ರಾಜಸ್ಥಾನ ರಾಯಲ್ಸ್: ಬಟ್ಲರ್ ಜತೆಗೆ ಪಡಿಕಲ್ ಇನಿಂಗ್ಸ್ ಆರಂಭಿಸಿದರೆ, ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಜೈಸ್ವಾಲ್ ಇನಿಂಗ್ಸ್ ಆರಂಭಿಸಿದರೆ, ಪಡಿಕಲ್ 3ನೇ ಕ್ರಮಾಂಕಕ್ಕೆ ಇಳಿಯಬಹುದು. ಅಶ್ವಿನ್-ಚಾಹಲ್ ಜೋಡಿ ಇರುವ ಕಾರಣ ಕನ್ನಡಿಗ ಕೆಸಿ ಕಾರ್ಯಪ್ಪ 11ರ ಬಳಗದಲ್ಲಿ ಕಾಣಿಸಿಕೊಳ್ಳುವುದು ಕಷ್ಟಕರ. ಬಲಿಷ್ಠ ಬ್ಯಾಟರ್‌ಗಳಿರುವುದರಿಂದ ಮತ್ತೋರ್ವ ಕನ್ನಡಿಗ ಕರುಣ್ ನಾಯರ್ ಕೂಡ ಬೆಂಚು ಕಾಯಿಸುವುದು ಪಕ್ಕಾ.
ಸಂಭಾವ್ಯ ತಂಡ: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕಲ್, ಸಂಜು ಸ್ಯಾಮ್ಸನ್ (ನಾಯಕ, ವಿಕೀ), ಶಿಮ್ರೋನ್ ಹೆಟ್ಮೆಯೆರ್, ರಿಯಾನ್ ಪರಾಗ್, ಡುಸೆನ್/ನೀಶಾಮ್/ಕೌಲ್ಟರ್ ನಿಲ್, ಆರ್.ಅಶ್ವಿನ್, ಚಾಹಲ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ/ನವದೀಪ್ ಸೈನಿ.
ಸನ್‌ರೈಸರ್ಸ್ ಹೈದರಾಬಾದ್: ರಾಹುಲ್ ತ್ರಿಪಾಠಿ ಜತೆಗೆ ಕನ್ನಡಿಗ ಆರ್. ಸಮರ್ಥ್ ಅಥವಾ ಅಭಿಷೇಕ್ ಶರ್ಮ ಇನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ. ಶ್ರೇಯಸ್ ಅಥವಾ ಜೆ. ಸುಚಿತ್ ಇಬ್ಬರಲ್ಲಿ ಒಬ್ಬರು 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ನಿಕೋಲಸ್ ಪೂರನ್ ವಿಕೆಟ್ ಕೀಪಿಂಗ್ ನಿರ್ವಹಿಸಲಿದ್ದಾರೆ.
ಸಂಭಾವ್ಯ ತಂಡ: ರಾಹುಲ್ ತ್ರಿಪಾಠಿ, ಆರ್.ಸಮರ್ಥ್/ಅಭಿಷೇಕ್ ಶರ್ಮ, ಕೇನ್ ವಿಲಿಯಮ್ಸನ್ (ನಾಯಕ), ನಿಕೋಲಸ್ ಪೂರನ್ (ವಿ.ಕೀ), ಏಡನ್ ಮಾರ್ಕ್ರಮ್/ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ವಾಷಿಂಗ್ಟನ್ ಸುಂದರ್, ಜೆ. ಸುಚಿತ್/ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್/ಟಿ.ನಟರಾಜನ್, ಮಾರ್ಕೋ ಜಾನ್ಸೆನ್/ರೊಮಾರಿಯೊ ಶೆರ್ಡ್.
ಮುಖಾಮುಖಿ: 15
ಸನ್‌ರೈಸರ್ಸ್: 8
ರಾಜಸ್ಥಾನ: 7
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್