

ಮುಂಬೈ: ಹೊಸ ತಂಡಗಳಾದ ಲಖನೌ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ ವಿಶ್ವದ ಶ್ರೀಮಂತ ಟಿ20 ಕ್ರಿಕೆಟ್ ಟೂರ್ನಿ ಐಪಿಎಲ್‌ಗೆ ಸೋಮವಾರ ಪದಾರ್ಪಣೆ ಮಾಡಲಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಹಣಾಹಣಿಯಲ್ಲಿ ಎರಡೂ ಹೊಸ ತಂಡಗಳು ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿವೆ. ಆಪ್ತಸ್ನೇಹಿತರೂ ಆಗಿರುವ ಲಖನೌ ನಾಯಕ ಕೆಎಲ್ ರಾಹುಲ್ ಮತ್ತು ಗುಜರಾತ್ ಸಾರಥಿ ಹಾರ್ದಿಕ್ ಪಾಂಡ್ಯ ನಡುವಿನ ಈ ಕದನ ಕುತೂಹಲ ಕೆರಳಿಸಿದೆ. ಆಡುವ 11ರ ಬಳಗದ ಸಂಯೋಜನೆಯೇ ಉಭಯ ತಂಡಗಳ ನಾಯಕರ ಮುಂದಿರುವ ದೊಡ್ಡ ಸವಾಲು. 2 ತಂಡಗಳ ಬ್ಯಾಟಿಂಗ್ ಬಲಾಬಲವನ್ನು ಗಮನಿಸಿದರೆ ಮೇಲ್ನೋಟಕ್ಕೆ ರಾಹುಲ್ ಪಡೆಯೇ ಬಲಿಷ್ಠವಾಗಿದೆ. ಶನಿವಾರ ನಡೆದ ಸಿಎಸ್‌ಕೆ-ಕೆಕೆಆರ್ ನಡುವಿನ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ವಾಂಖೆಡೆ ಪಿಚ್ ವೇಗಿಗಳಿಗೆ ಹೆಚ್ಚು ನೆರವಾಗಿದ್ದು, ಬ್ಯಾಟರ್‌ಗಳ ಪಾಲಿಗೆ ಸವಾಲಿನಿಂದ ಕೂಡಿತ್ತು.
ಮುಂಬೈ ಇಂಡಿಯನ್ಸ್ ತಂಡದ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ತಂಡದಲ್ಲಿ ರಾಹುಲ್ ತೆವಾಟಿಯಾ, ಆಲ್ರೌಂಡರ್ ವಿಜಯ್ ಶಂಕರ್, ಕರ್ನಾಟಕದ ಅಭಿನವ್ ಮನೋಹರ್ ಹಾಗೂ ಡೇವಿಡ್ ಮಿಲ್ಲರ್ ಒಳಗೊಂಡ ಬ್ಯಾಟಿಂಗ್ ಪಡೆ ಕಮಾಲ್ ಮಾಡಲು ರೆಡಿಯಾಗಿದೆ. ವೇಗಿ ಮೊಹಮದ್ ಶಮಿ, ಸ್ಪಿನ್ನರ್ ರಶೀದ್ ಖಾನ್‌ರಂಥ ಸ್ಟಾರ್ ಬೌಲರ್‌ಗಳು ಹೊಂದಿದೆ.
ಲಖನೌಗೆ ಸ್ಟಾರ್ ಬ್ಯಾಟರ್‌ಗಳೇ ಬಲ
ನಾಯಕ ಕೆಎಲ್ ರಾಹುಲ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಅತ್ಯುತ್ತಮ ಆರಂಭಿಕ ಜೋಡಿಯಾಗಿದೆ. ಆಲ್ರೌಂಡರ್‌ಗಳಾದ ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಕನ್ನಡಿಗ ಮನೀಷ್ ಪಾಂಡೆ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ಬಹುತೇಕ ಆಟಗಾರರು ತಂಡದಲ್ಲಿರುವ ಕಾರಣ ರಾಹುಲ್ ನಾಯಕತ್ವಕ್ಕೂ ಸುಲಭವಾಗಬಹುದು. ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ಎವಿನ್ ಲೆವಿಸ್ ಕೂಡ ಹೆಚ್ಚುವರಿ ಬ್ಯಾಟರ್ ಆಗಿದ್ದಾರೆ. ಆವೇಶ್ ಖಾನ್ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಲಿದ್ದು, ಇವರಿಗೆ ರವಿ ಬಿಷ್ಣೋಯಿ ಸಾಥ್ ನೀಡಲಿದ್ದಾರೆ. ಕರ್ನಾಟಕ ಕೆ.ಗೌತಮ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಟೀಮ್ ನ್ಯೂಸ್:
ಲಖನೌ ಸೂಪರ್‌ಜೈಂಟ್ಸ್: ನಾಯಕ ರಾಹುಲ್ ಸೇರಿದಂತೆ ಮೂವರು ಕನ್ನಡಿಗರು ಕಣಕ್ಕಿಳಿಯುವ ಸಾಧ್ಯತೆಗಳಿವೆ. ಮನೀಷ್ ಪಾಂಡೆ, ಕೆ. ಗೌತಮ್ ರಾಹುಲ್ ಜತೆಗೂಡಬಹುದು. ಮಾರ್ಕಸ್ ಸ್ಟೋಯಿನಿಸ್, ಜೇಸನ್ ಹೋಲ್ಡರ್ ಮತ್ತು ಕೈಲ್ ಮೇಯರ್ಸ್ ಆರಂಭಿಕ ಪಂದ್ಯಗಳಿಗೆ ಅಲಭ್ಯತೆಯಿಂದ ತಂಡ 4 ವಿದೇಶಿ ಆಟಗಾರರ ಕೋಟಾವನ್ನು ತುಂಬುವುದೇ ಕಷ್ಟಕರವಾಗಿದೆ.
ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿಕಾಕ್ (ವಿಕೀ), ಮನೀಷ್ ಪಾಂಡೆ, ದೀಪಕ್ ಹೂಡಾ, ಮನನ್ ವೊಹ್ರಾ, ಕೃನಾಲ್ ಪಾಂಡ್ಯ, ಕೆ.ಗೌತಮ್, ಅಂಕಿತ್ ರಜಪೂತ್/ಆಂಡ್ರೋ ಟೈ, ರವಿ ಬಿಷ್ಣೋಯಿ, ದುಶ್ಮಂತ ಚಮೀರ, ಆವೇಶ್ ಖಾನ್.
ಗುಜರಾತ್ ಟೈಟಾನ್ಸ್: ಅನುಭವಿ ಆಟಗಾರರಿಗಿಂತ ಬಹುತೇಕ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಯೋಜನೆಯೇ ತಂಡದ ಮ್ಯಾನೇಜ್‌ಮೆಂಟ್‌ಗೆ ಸವಾಲಾಗಿದೆ. ಕನ್ನಡಿಗ ಅಭಿನವ್ ಮನೋಹರ್ ಐಪಿಎಲ್‌ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.
ಸಂಭಾವ್ಯ ತಂಡ: ಶುಭಮಾನ್ ಗಿಲ್, ಮ್ಯಾಥ್ಯೂ ವೇಡ್ (ವಿಕೀ), ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ (ನಾಯಕ), ರಾಹುಲ್ ತೆವಾಟಿಯಾ, ಸಾಯಿ ಕಿಶೋರ್, ರಶೀದ್ ಖಾನ್, ಮೊಹಮದ್ ಶಮಿ, ಲಾಕಿ ಫರ್ಗ್ಯುಸನ್.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
100: ಹಾರ್ದಿಕ್ ಪಾಂಡ್ಯ 2 ಸಿಕ್ಸರ್ ಸಿಡಿಸಿದರೆ ಐಪಿಎಲ್‌ನಲ್ಲಿ 100 ಸಿಕ್ಸರ್ ಪೂರೈಸಲಿದ್ದಾರೆ.