

ಮುಂಬೈ: ಸ್ಫೋಟಕ ಬ್ಯಾಟರ್ ಎವಿನ್ ಲೆವಿಸ್ (55*ರನ್, 23 ಎಸೆತ, 6 ಬೌಂಡರಿ, 3 ಸಿಕ್ಸರ್) ಅಂತಿಮ ಹಂತದಲ್ಲಿ ತೋರಿದ ಅದ್ಭುತ ನಿರ್ವಹಣೆ ಫಲವಾಗಿ ಲಖನೌ ಸೂಪರ್ ಜೈಂಟ್ಸ್ ತಂಡ ಐಪಿಎಲ್-15ರಲ್ಲಿ ಗೆಲುವಿನ ಖಾತೆ ತೆರೆಯಿತು. ಎಲ್‌ಎಸ್‌ಜಿ ಜಯಿಸಲು ಕಡೇ 2 ಓವರ್‌ಗಳಲ್ಲಿ 35 ರನ್‌ಗಳ ಅಗತ್ಯವಿದ್ದ ವೇಳೆ, ಲೆವಿಸ್ ಹಾಗೂ ಯುವ ಬ್ಯಾಟರ್ ಆಯುಷ್ ಬಡೋನಿ (19*ರನ್, 9 ಎಸೆತ, 2 ಸಿಕ್ಸರ್) ತೋರಿದ ಅಮೋಘ ಪ್ರದರ್ಶನದಿಂದಾಗಿ ಎಲ್‌ಎಸ್‌ಜಿ ತಂಡ 6 ವಿಕೆಟ್‌ಗಳಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಇದರಿಂದ ಕನ್ನಡಿಗ ಕೆಎಲ್ ರಾಹುಲ್ ಗೆಲುವಿನ ಹಳಿಗೇರಿದರೆ, ಹಾಲಿ ಚಾಂಪಿಯನ್ ತಂಡಕ್ಕೆ ಸತತ 2ನೇ ಸೋಲು ಇದಾಗಿದೆ.
ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಕನ್ನಡಿಗ ರಾಬಿನ್ ಉತ್ತಪ್ಪ (50 ರನ್, 27 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ಆಲ್ರೌಂಡರ್ ಶಿವಂ ದುಬೆ (49 ರನ್, 30 ಎಸೆತ, 5 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಫಲವಾಗಿ 7 ವಿಕೆಟ್‌ಗೆ 210 ರನ್ ಪೇರಿಸಿತು. ಬಳಿಕ ಈ ಬೃಹತ್ ಸವಾಲು ಬೆನ್ನಟ್ಟಿದ ಎಲ್‌ಎಸ್‌ಜಿ, ನಾಯಕ ಕೆಎಲ್ ರಾಹುಲ್ (40ರನ್, 26 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಕ್ವಿಂಟನ್ ಡಿ ಕಾಕ್ (61ರನ್, 45 ಎಸೆತ, 9 ಬೌಂಡರಿ) ಜೋಡಿ ಉತ್ತಮ ಆರಂಭ ಒದಗಿಸಿತು. ಇದರ ಫಲವಾಗಿ ಎಲ್‌ಎಸ್‌ಜಿ ತಂಡ 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 211 ರನ್‌ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು.
ಸಿಎಸ್‌ಕೆ: 7 ವಿಕೆಟ್‌ಗೆ 210 (ರಾಬಿನ್ ಉತ್ತಪ್ಪ 50, ಮೊಯಿನ್ ಅಲಿ 35, ಶಿವಂ ದುಬೆ 49, ಆವೇಶ್ ಖಾನ್ 38ಕ್ಕೆ 2, ಆಂಡ್ರ್ಯೋ ಟೈ 40ಕ್ಕೆ 2, ರವಿ ಬಿಷ್ಣೋಯಿ 24ಕ್ಕೆ 2), ಎಲ್‌ಎಸ್‌ಜಿ: 19.3 ಓವರ್‌ಗಳಲ್ಲಿ 4 ವಿಕೆಟ್‌ಗೆ 211 (ಕೆಎಲ್ ರಾಹುಲ್ 40, ಕ್ವಿಂಟನ್ ಡಿಕಾಕ್ 61, ಎವಿನ್ ಲೆವಿಸ್ 55*, ಬಡೋನಿ 19*, ಡ್ವೇನ್ ಪ್ರಿಟೋರಿಯಸ್ 31ಕ್ಕೆ 2).