

ಮುಂಬೈ: ಟೂರ್ನಿಯ ಆರಂಭಿಕ ಪಂದ್ಯದಲ್ಲೇ ಮುಗ್ಗರಿಸಿರುವ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ಹಾಗೂ ಟೂರ್ನಿಗೆ ಹೊಸ ಸೇರ್ಪಡೆಯಾಗಿರುವ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಗುರುವಾರ ಎದುರಾಗಲಿವೆ. ವೀಸಾ ಸಮಸ್ಯೆಯಿಂದಾಗಿ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಆಲ್ರೌಂಡರ್ ಮೊಯಿನ್ ಅಲಿ ಸಿಎಸ್‌ಕೆ ಕೂಡಿಕೊಂಡಿದ್ದು, ತಂಡದ ಬಲ ಹೆಚ್ಚಿಸಿದೆ. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಕದನದಲ್ಲಿ ಉಭಯ ತಂಡಗಳು ಗೆಲುವಿನ ಖಾತೆ ತೆರೆಯಲು ಹೋರಾಡಲಿವೆ. ಇಬ್ಬನಿ ಸಮಸ್ಯೆ ಕಾಡುವುದರಿಂದ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರವಹಿಸಲಿದೆ. ಲೀಗ್‌ನ ಪದಾರ್ಪಣೆ ಪಂದ್ಯದಲ್ಲೇ ಮುಗ್ಗರಿಸಿದ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದೆ.
*ಪುಟಿದೇಳುವ ವಿಶ್ವಾಸದಲ್ಲಿ ಎಲ್‌ಎಸ್‌ಜಿ
ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದ ಮೊದಲ ಪಂದ್ಯದಲ್ಲಿ ಲಖನೌ ತಂಡ ಗುಜರಾತ್ ಟೈಟಾನ್ಸ್ ಎದುರು ವೀರೋಚಿತ ಸೋಲು ಕಂಡಿತ್ತು. ನಾಯಕ ರಾಹುಲ್ ಗೋಲ್ಡನ್ ಡಕ್ ಆಗಿದ್ದು ತಂಡಕ್ಕೆ ಭಾರಿ ಹಿನ್ನಡೆಯಾಗಿತ್ತು. ಅಲ್ಲದೆ, ಕ್ವಿಂಟನ್ ಡಿಕಾಕ್ ಕೂಡ ನಿರಾಸೆ ಅನುಭವಿಸಿದ್ದರು. ಮನೀಷ್ ಪಾಂಡೆ, ಎವಿನ್ ಲೆವಿಸ್‌ರಂಥ ಪ್ರಮುಖರು ಕೈಕೊಟ್ಟರೂ ಯುವ ಬ್ಯಾಟರ್ ಆಯುಷ್ ಬಡೋನಿ, ದೀಪಕ್ ಹೂಡಾ ಹಾಗೂ ಕೃನಾಲ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಿದ್ದರು. ಬೌಲಿಂಗ್ ವಿಭಾಗದಲ್ಲಿ ವೇಗಿ ದುಶ್ಮಾಂತ ಚಮೀರ ಗಮನಸೆಳೆದರೂ ಆವೇಶ್ ಖಾನ್ ದುಬಾರಿಯಾಗಿದ್ದರು.
*ಸಿಎಸ್‌ಕೆಗೆ ಮೊಯಿನ್ ಅಲಿ ಬಲ
ಮೊದಲ ಪಂದ್ಯದಲ್ಲಿ ಕೆಕೆಆರ್ ಎದುರು ನೀರಸ ನಿರ್ವಹಣೆಯಿಂದ ಸೋಲನುಭವಿಸಿದ್ದ ಸಿಎಸ್‌ಕೆಗೆ ಮೊಯಿನ್ ಅಲಿ ಆಗಮನ ಬಲ ತುಂಬಿದೆ. ಕೆಕೆಆರ್ ಎದುರು ಧೋನಿ ಹೊರತುಪಡಿಸಿ ಅನುಭವಿ ಬ್ಯಾಟರ್‌ಗಳಾದ ರಾಬಿನ್ ಉತ್ತಪ್ಪ, ಡೆವೊನ್ ಕಾನ್‌ವೇ, ಅಂಬಟಿ ರಾಯುಡು, ಋತುರಾಜ್ ಗಾಕ್ವಾಡ್ ವೈಫಲ್ಯ ಅನುಭವಿಸಿದ್ದರೆ, ಆಲ್ರೌಂಡರ್ ಕೋಟಾದಡಿ ಶಿವಂ ದುಬೆ ಮಿಂಚಲು ವಿಲರಾಗಿದ್ದರು. ಡ್ವೇನ್ ಬ್ರಾವೊ 3 ವಿಕೆಟ್ ಕಬಳಿಸಿ ಸೋಲಿನಲ್ಲೂ ಗಮನಸೆಳೆದಿದ್ದರು.
ಟೀಮ್ ನ್ಯೂಸ್:
ಸಿಎಸ್‌ಕೆ: ತಂಡದಲ್ಲಿ ಒಂದು ಬದಲಾವಣೆ ನಿಶ್ಚಿತ. ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದ ಆಲ್ರೌಂಡರ್ ಮೊಯಿನ್ ಅಲಿ ವಾಪಸಾದ ಹಿನ್ನೆಲೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಅಥವಾ ಡೆವೊನ್ ಕಾನ್‌ವೇ ಹೊರಗುಳಿಯಲಿದ್ದಾರೆ.
ಎಲ್‌ಎಸ್‌ಜಿ: ಪ್ರಮುಖ ವಿದೇಶಿ ಆಟಗಾರರ ಗೈರು ಮುಂದುವರಿದಿದೆ. ಜೇಸನ್ ಹೋಲ್ಡರ್ ಅಲಭ್ಯರಾದರೆ, ಆಂಡ್ರ್ಯೋ ಟೈ ಈ ಪಂದ್ಯದಲ್ಲೂ ಆಡುವುದು ಖಾತ್ರಿಯಾಗಿಲ್ಲ. ಟೈ ಅಲಭ್ಯರಾದರೆ ಮೊಹ್ಸಿನ್ ಖಾನ್ ಮತ್ತೊಂದು ಅವಕಾಶ ಪಡೆಯಲಿದ್ದಾರೆ. ಕಳೆದ ಪಂದ್ಯದಲ್ಲಿ ಮೂವರು ವಿದೇಶಿ ಆಟಗಾರರು ಮಾತ್ರ ಹನ್ನೊಂದರ ಬಳಗದಲ್ಲಿದ್ದರು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್