

ಮುಂಬೈ: ಸರ್ವಾಂಗೀಣ ನಿರ್ವಹಣೆ ನೆರವಿನಿಂದ ಕೋಲ್ಕತ ನೈಟ್‌ರೈಡರ್ಸ್ ತಂಡ ಐಪಿಎಲ್-15ರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಶುಭಾರಂಭ ಕಂಡಿತು. 2021ರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅನುಭವಿಸಿದ ಸೋಲಿಗೆ ಮೊದಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡಿತು. ಸಿಎಸ್‌ಕೆ ತಂಡದ ಪರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಕೇವಲ ಆಟಗಾರನಾಗಿ ಕಣಕ್ಕಿಳಿದ ಧೋನಿ (50*ರನ್, 38 ಎಸೆತ, 7 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಧೋನಿ ಉತ್ತರಾಧಿಕಾರಿಯಾಗಿರುವ ರವೀಂದ್ರ ಜಡೇಜಾ ನಾಯಕರಾಗಿ ಶುಭಾರಂಭ ಕಾಣಲು ವಿಲರಾದರು.
ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಮಾಜಿ ನಾಯಕ ಧೋನಿ ಹಾಗೂ ಹೊಸ ನಾಯಕ ರವೀಂದ್ರ ಜಡೇಜಾ (26*ರನ್, 28 ಎಸೆತ, 1 ಸಿಕ್ಸರ್) ಜೋಡಿ ಮುರಿಯದ 6ನೇ ವಿಕೆಟ್‌ಗೆ 56 ಎಸೆತಗಳಲ್ಲಿ 70 ರನ್ ಕಲೆಹಾಕಿದ ಪರಿಣಾಮ 5 ವಿಕೆಟ್‌ಗೆ 131 ರನ್ ಪೇರಿಸಿತು. ವೇಗಿ ಉಮೇಶ್ ಯಾದವ್ (20ಕ್ಕೆ 2) ಮಾರಕ ದಾಳಿಗೆ ತತ್ತರಿಸಿದ್ದ ಸಿಎಸ್‌ಕೆ ಅಲ್ಪ ಮೊತ್ತಕ್ಕೆ ತೃಪ್ತಿಪಡುವ ಆತಂಕದಲ್ಲಿದ್ದಾಗ ಧೋನಿ-ಜಡೇಜಾ ಜೋಡಿ ಆಧಾರವಾಯಿತು. ಪ್ರತಿಯಾಗಿ ಕೆಕೆಆರ್ ತಂಡ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 133 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಸಿಎಸ್‌ಕೆ: 5 ವಿಕೆಟ್‌ಗೆ 131 (ರಾಬಿನ್ ಉತ್ತಪ್ಪ 28, ಅಂಬಟಿ ರಾಯುಡು 15, ರವೀಂದ್ರ ಜಡೇಜಾ 26*, ಎಂಎಸ್ ಧೋನಿ 50*, ಉಮೇಶ್ ಯಾದವ್ 20ಕ್ಕೆ 2, ವರುಣ್ ಚಕ್ರವರ್ತಿ 23ಕ್ಕೆ1, ಆಂಡ್ರೆ ರಸೆಲ್ 38ಕ್ಕೆ 1), ಕೆಕೆಆರ್: 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 133 (ಅಜಿಂಕ್ಯ ರಹಾನೆ 44, ವೆಂಕಟೇಶ್ ಅಯ್ಯರ್ 16, ನಿತೀಶ್ ರಾಣಾ 21, ಶ್ರೇಯಸ್ ಅಯ್ಯರ್ 20*, ಸ್ಯಾಮ್ ಬಿಲ್ಲಿಂಗ್ಸ್ 25, ಡ್ವೇನ್ ಬ್ರಾವೊ 20ಕ್ಕೆ 3).