ಕಿಂಗ್ ಕೊಹ್ಲಿ ಆರಿಸಿದ ಆಲ್ ಟೈಮ್ ಬೆಸ್ಟ್ ಆರ್.ಸಿ.ಬಿ ತಂಡ ಹೇಗಿದೆ? ಈ ಟೀಮ್​ ಆಡಿದ್ದರೆ ಪ್ರತಿ ಬಾರಿ ಕಪ್ ನಮ್ದೇ ಎಂದ ಫ್ಯಾನ್ಸ್! Virat Kohli All Time RCB XI

ವಿರಾಟ್​ ಕೊಹ್ಲಿ ಪ್ರಕಟಿಸಿರುವ ಪ್ಲೇಯಿಂಗ್​ ಇಲೆವನ್
ವಿರಾಟ್​ ಕೊಹ್ಲಿ ಪ್ರಕಟಿಸಿರುವ ಪ್ಲೇಯಿಂಗ್​ ಇಲೆವನ್
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ 28 ರಿಂದ ಐಪಿಎಲ್​ ಆರಂಭ
  • ಮೊದಲ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ತೊಡೆತಟ್ಟಲಿರುವ ಸನ್​ರೈಸರ್ಸ್​
  • ವಿರಾಟ್​ ಕೊಹ್ಲಿ ಪ್ರಕಟಿಸಿರುವ ಪ್ಲೇಯಿಂಗ್​ ಇಲೆವನ್​ನಲ್ಲಿ ಯಾರ್ಯಾರಿದ್ದಾರೆ ಗೊತ್ತಾ?
ಐಪಿಎಲ್​ 2026: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಜ್ವರ ಭಾರತದಾದ್ಯಂತ ಆವರಿಸಲಿದ್ದು, ಟಿ-20 ವಿಶ್ವಕಪ್​ ಮುಗಿದ ಹಿನ್ನಲೆ ಪ್ರಪಂಚದ ಆಟಗಾರರು ಈಗ ಭಾರತದತ್ತ ಮುಖ ಮಾಡಲಿದ್ದಾರೆ. ಮಾರ್ಚ್​ 28 ರಿಂದ ಆರಂಭವಾಗಲಿರುವ ಈ ಕ್ರಿಕೆಟ್​ ಹಬ್ಬವನ್ನು ಕಣ್ಣುಂಬಿಕೊಳ್ಳಲು ಪ್ರತಿ ಕ್ರಿಕೆಟ್​ ಪ್ರೇಮಿ ತುದಿಗಾಲಿನಲ್ಲಿ ನಿಂತಿದ್ದಾನೆ ಎಂದರೆ ತಪ್ಪಾಗಲಾರದು.
ಮಾರ್ಚ್​ 28 ರಂದು ಟೂರ್ನಿಯ ಮೊದಲ ಪಂದ್ಯದಲ್ಲಿ 2025 ರ ಚಾಂಪಿಯನ್ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದಾಡಲಿವೆ.
ಈ ಹಿನ್ನಲೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್​ಮನ್​ ಹಾಗೂ ಬಹುಕಾಲ ಈ ತಂಡವನ್ನು ಮುನ್ನಡೆಸಿದ್ದ ನಾಯಕ ವಿರಾಟ್​ ಕೊಹ್ಲಿ, ತಮ್ಮ ಆಲ್​ ಟೈಮ್​ ಬೆಸ್ಟ್​​ ಆರ್​.ಸಿ.ಬಿ ಪ್ಲೇಯಿಂಗ್​ ಇಲೆವನ್​(Virat Kohli All Time RCB XI) ನ್ನು ಹಂಚಿಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿರಾಟ್​ ಟೀಮ್​ನಲ್ಲಿ ಯಾರ್ಯಾರಿದ್ದಾರೆ?

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ರಾಂಚೈಸಿ ತಮ್ಮ ಅಧಿಕೃತ ಎಕ್ಸ್​(ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋನಲ್ಲಿ ವಿರಾಟ್​ ಕೊಹ್ಲಿ ಅವರಿಗೆ ತಮ್ಮ ಸರ್ವ ಕಾಲಿಕ ಬೆಸ್ಟ್​ ಪ್ಲೇಯಿಂಗ್​ ಇಲೆವನ್​ ತಂಡವನ್ನು ತಿಳಿಸುವಂತೆ ನಿರೂಪಕರು ಕೇಳುತ್ತಾರೆ.
ಈ ಪ್ರಶ್ನೆಗೆ ಉತ್ತರಿಸಿದ ಕಿಂಗ್​ ಕೊಹ್ಲಿ, ತಮ್ಮ ತಂಡದ ಓಪನಿಂಗ್​ ಬ್ಯಾಟ್ಸ್​ಮನ್​ಗಳಾಗಿ ವೆಸ್ಟ್​ ಇಂಡೀಸ್​ನ ದೈತ್ಯ ಆಟಗಾರ ಕ್ರಿಸ್ ಗೇಲ್ ಮತ್ತು ದಕ್ಷಿಣಾ ಆಫ್ರಿಕಾ ತಂಡದ ಸರ್ವಕಾಲಿಕ ಆಲ್​ರೌಂಡರ್​ ಎಬಿ ಡಿವಿಲಿಯರ್ಸ್ ಅವರನ್ನು ಆರಿಸಿಕೊಂಡಿದ್ದಾರೆ.
ಮೂರನೇ ಕ್ರಮಾಂಕದಲ್ಲಿ ತಮ್ಮನ್ನೇ ಆಯ್ಕೆ ಮಾಡಿಕೊಂಡಿರುವ ವಿರಾಟ್​ ಕೊಹ್ಲಿ, ನಾಲ್ಕನೇ ಸ್ಥಾನಕ್ಕೆ ಕನ್ನಡಿಗ ಕೆ. ಎಲ್​. ರಾಹುಲ್​ನ್ನು ಆಯ್ಕೆಮಾಡಿದ್ದಾರೆ. ಐದು ಮತ್ತು ಆರನೇ ಕ್ರಮಾಂಕದಲ್ಲಿ ವಿಕೆಟ್​ ಕೀಪರ್​- ಬ್ಯಾಟ್ಸ್​ಮನ್​ಗಳಾದ ರಜತ್​ ಪಟಿದಾರ್​ ಮತ್ತು ದಿನೇಶ್​ ಕಾರ್ತಿಕ್​ರನ್ನು ಆರಿಸಿಕೊಂಡಿದ್ದಾರೆ.
ತಂಡದ ಬೌಲರ್​ಗಳಾಗಿ ಹರ್ಷಲ್​ ಪಟೇಲ್​, ಅನಿಲ್​ ಕುಂಬ್ಳೆ, ಮಿಚೆಲ್ ಸ್ಟಾರ್ಕ್, ಡೇಲ್ ಸ್ಟೇನ್ ಮತ್ತು ಯುಜುವೇಂದ್ರ ಚಾಹಲ್ ಅವರನ್ನು ವಿರಾಟ್​ ಆರಿಸಿಕೊಂಡಿದ್ದಾರೆ.

ನೆಟ್ಟಿಗರು ಏನಂತಿದ್ದಾರೆ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಕಮೆಂಟ್​ಗಳ ಸುರಿಮಳೆಯೇ ಹರಿದುಬಂದಿದ್ದು, ಅಭಿಮಾನಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕೊಹ್ಲಿ ಹೇಳಿದ ತಂಡವೇನಾದರೂ ಮೈದಾನಕ್ಕೆ ಇಳಿದ್ದಿದ್ದರೆ, ಕೇವಲ ಒಂದು ಬಾರಿಯಲ್ಲ ಪ್ರತಿ ಬಾರಿ ಕಪ್​ ಅರ್​ಸಿಬಿಯದ್ದೇ ಆಗುತ್ತಿತ್ತು ಎಂದು ಒಬ್ಬರು ಹೇಳಿದರೆ, ಇವರು ಹೇಳಿದ ತಂಡ ಒಮ್ಮೆಯಾದರೂ ಕಣಕ್ಕೀಳಿದು ಕನಿಷ್ಟ ಒಂದು ಪಂದ್ಯವನ್ನಾದರೂ ಆಡಬೇಕು ಎಂದು ಮತ್ತೊಬ್ಬರು ತಮ್ಮ ಆಸೆಯನ್ನು ಹೇಳಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net