ಬೆಂಗಳೂರಿನಲ್ಲಿ IPL ಆಡಲು​ ಆರ್​ಸಿಬಿಗೂ ಇಷ್ಟವಿಲ್ಲ... ಕಾಲ್ತುಳಿತದ ಬಳಿಕ ನಡೆದ ಬೆಳವಣಿಗೆಯೇ ಇದಕ್ಕೆ ಕಾರಣ! RCB

ಆರ್​ಸಿಬಿ ಆಟಗಾರ ವಿರಾಟ್​ ಕೊಹ್ಲಿ
ಆರ್​ಸಿಬಿ ಆಟಗಾರ ವಿರಾಟ್​ ಕೊಹ್ಲಿ
Published on

ಪ್ರಮುಖ ಮುಖ್ಯಾಂಶಗಳು

  • ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆ
  • 19ನೇ ಐಪಿಎಲ್​ ಆವೃತ್ತಿ ಬೆಂಗಳೂರಿನಲ್ಲಿ ನಡೆಯುವುದು ಬಹುತೇಕ ಅನುಮಾನವಾಗಿದೆ
  • ತವರು ಮೈದಾನದಲ್ಲಿ ಆಡಲು ಆರ್​ಸಿಬಿಗೂ ಇಷ್ಟವಿಲ್ಲ ಎಂದು ತಿಳಿದುಬಂದಿದೆ
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ವರ್ಷ ಐಪಿಎಲ್​ ಪಂದ್ಯಗಳಿಗಾಗಿ ಎದುರು ನೋಡುತ್ತಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ಅಭಿಮಾನಿಗಳಿಗೆ ಭಾರಿ ನಿರಾಸೆ ಆಗುವಂತಹ ಸುದ್ದಿಯೊಂದು ಹೊರಬಿದ್ದಿದೆ. 19ನೇ ಐಪಿಎಲ್​ ಆವೃತ್ತಿ ಬೆಂಗಳೂರಿನಲ್ಲಿ ನಡೆಯುವುದು ಬಹುತೇಕ ಅನುಮಾನವಾಗಿದೆ. ತಮ್ಮ ತವರು ಮೈದಾನದಲ್ಲಿ ಆಡಲು ಆರ್​ಸಿಬಿಗೂ ಇಷ್ಟವಿಲ್ಲ ಎಂದು ತಿಳಿದುಬಂದಿದೆ. 11 ಮಂದಿಯನ್ನು ಬಲಿ ಪಡೆದ ಕಾಲ್ತುಳಿತದ ದುರಂತದ ಬಳಿಕ ಫ್ರಾಂಚೈಸಿ ವಿರುದ್ಧ ನಡೆದ ಅಪಪ್ರಚಾರವೇ ಇಂಥದ್ದೊಂದು ನಿರ್ಧಾರಕ್ಕೆ ಕಾರಣವಾಗಿ ಎಂದು ಆರ್​ಸಿಬಿ ಮೂಲಗಳು ತಿಳಿಸಿವೆ. 
ಮೂಲಗಳ ಪ್ರಕಾರ, ಆರ್‌ಸಿಬಿ ತನ್ನ ಐಪಿಎಲ್ ಪಂದ್ಯಗಳನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘವನ್ನು (ಕೆಎಸ್‌ಸಿಎ) ಈವರೆಗೂ ಸಂಪರ್ಕಿಸಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಐಪಿಎಲ್​ ಪಂದ್ಯ ನಡೆಯೋದು ಅನುಮಾನವಾಗಿದೆ. ಛತ್ತೀಸ್‌ಗಢದ ರಾಯ್‌ಪುರ ಅಥವಾ ಮಧ್ಯಪ್ರದೇಶದ ಇಂದೋರ್​ ಆರ್‌ಸಿಬಿಯ ಹೊಸ 'ತವರು' ಮೈದಾನವಾಗಲಿದೆ ಎಂಬ ವರದಿ ಇದೆ. ಇವರೆಡರಲ್ಲಿ ರಾಯ್​ಪುರ ಮುಂಚೂಣಿಯಲ್ಲಿದೆ.
19ನೇ ಐಪಿಎಲ್ ಸೀಸನ್​ ಮಾರ್ಚ್ 21 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ. ಇದರಿಂದಾಗಿ ವೆಂಕಟೇಶ್ ಪ್ರಸಾದ್ ನೇತೃತ್ವದ ಕೆಎಸ್‌ಸಿಎ ಇದೀಗ ಸಂಕಷ್ಟದ ಸ್ಥಿತಿಗೆ ಸಿಲುಕಿದೆ. ಹೇಗಾದರೂ ಮಾಡಿ ಚಿನ್ನಸ್ವಾಮಿಯಲ್ಲೇ ಐಪಿಎಲ್​ ಪಂದ್ಯಗಳನ್ನು ಆಡಿಸಬೇಕೆಂದು ಕೆಎಸ್​ಸಿಎ ಪ್ರಯತ್ನಿಸುತ್ತಿದೆ. ಕಾಲ್ತುಳಿತದ ಘಟನೆಯ ಬಳಿಕ ಕರ್ನಾಟಕದ ಗೃಹ ಇಲಾಖೆ ಸೂಚಿಸಿರುವ ಮಾನದಂಡಗಳನ್ನು ಪೂರೈಸಲು ಕ್ರೀಡಾಂಗಣದಲ್ಲಿ ಕೆಎಸ್​ಸಿಎ ಪುನರ್​ನಿರ್ಮಾಣದ ಕೆಲವನ್ನು ಕೈಗೆತ್ತಿಕೊಂಡಿದೆ. ಆದರೆ, ಎಲ್ಲ ಮಾನದಂಡಗಳನ್ನು ಪೂರೈಸುವುದು ಸವಾಲಾಗಿದೆ. ಇದರ ನಡುವೆ ಆರ್​ಸಿಬಿ ಫ್ರಾಂಚೈಸಿಗು ಕೂಡ ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಡಲು ಇಷ್ಟವಿಲ್ಲ. ಹೀಗಾಗಿ ಕೆಎಸ್​ಸಿಎಗೆ ಇದೊಂದು ಸವಾಲಿನ ಸಮಯವಾಗಿದೆ. 
ವಿಶೇಷವೆಂದರೆ, 2025, ಡಿಸೆಂಬರ್ 24ರಂದು ಆಂಧ್ರಪ್ರದೇಶ ಹಾಗೂ ದೆಹಲಿ ವಿರುದ್ಧ ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಕೊನೆಯ ಕ್ಷಣದಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು. ಇದರಿಂದ ಕೊಹ್ಲಿ ಅಭಿಮಾನಿಗಳಿಗೆ ಭಾರಿ ನಿರಾಸೆ ಆಯಿತು. ಕೊಹ್ಲಿ ದೆಹಲಿ ಪರ ಕಣ್ಣಕ್ಕಿಳಿದಿದ್ದರು. 

ಕಾಲ್ತುಳಿತ ದುರಂತ 

ಕ್ರಿಕೆಟ್ ಮೇಲಿನ ಉತ್ಸಾಹ ಜೀವಗಳನ್ನು ಬಲಿ ತೆಗೆದುಕೊಂಡಿತು. ಹೌದು, ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. 18 ವರ್ಷಗಳ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸಿತು. ಇದೇ ಖುಷಿಯಲ್ಲಿ ವಿಜಯೋತ್ಸವ ಆಚರಿಸಲು ಆರ್​ಸಿಬಿ ತಂಡವು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಮುಂಚೆಯೇ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು. ಕ್ರೀಡಾಂಗಣಕ್ಕೆ ಆಟಗಾರರು ಬರುತ್ತಾರೆ ಅನ್ನೋ ಸುದ್ದಿ ಕೇಳಿದ ಕ್ರೀಡಾಭಿಮಾನಿಗಳು ಒಮ್ಮೆಲ್ಲೆ ಸ್ಟೇಡಿಂಯಂನತ್ತ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿ 11 ಜನ ಮೃತಪಟ್ಟರು. ಅಲ್ಲದೆ, 47 ಮಂದಿ ಗಾಯಗೊಂಡರು. ಜನರು ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಉಚಿತ ಪಾಸ್‌ಗಳು ದೊರೆಯುತ್ತದೆ ಎಂಬ ವದಂತಿ ಹಾಗೂ ದೊಡ್ಡ ಜನಸಂದಣಿ ಮತ್ತು ಸರಿಯಾದ ನಿರ್ವಹಣೆಯ ಕೊರತೆಯಿಂದ ಕಾಲ್ತುಳಿತ ಸಂಭವಿಸಿತು.
ಇನ್ನು ಪುಣೆಯಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಕ್ರೀಡಾಂಗಣವು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಜಸ್ಥಾನ ರಾಯಲ್ಸ್ (ಆರ್‌ಆರ್) ನ ತವರು ಪಂದ್ಯಗಳನ್ನು ಆಯೋಜಿಸಲಿದೆ ಎಂದು ಮೂಲಗಳು ತಿಳಿಸಿವೆ. ರಾಜಸ್ಥಾನ ಕ್ರಿಕೆಟ್ ಅಸೋಸಿಯೇಷನ್ ​​(RCA) ಜೊತೆಗಿನ ನಿರಂತರ ಭಿನ್ನಾಭಿಪ್ರಾಯಗಳಿಂದಾಗಿ, ಆರ್​ಆರ್​ ತನ್ನ ತವರು ಪಂದ್ಯಗಳನ್ನು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಿಂದ ಬೇರೆಡೆಗೆ ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net