

ಬೆಂಗಳೂರು: ನಗರದ ಹೊರವಲಯದ ಎಎಕ್ಸ್ಐ ಮೈದಾನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಅಂತರ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿಯ ಮೂರನೇ ಆವೃತ್ತಿಯ ವೆಂಕಿ ಕಪ್‌ನಲ್ಲಿ ಬ್ರದರ್ಸ್ 11 ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಸೂಪರ್ ರಾಯಲ್ಸ್ ತಂಡವನ್ನು ಮಣಿಸಿದ ಬ್ರದರ್ಸ್ 11, ಚಾಂಪಿಯನ್ ಟ್ರೋಫಿ ಹಾಗೂ 40 ಸಾವಿರ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ಡಿವಿ ಬ್ರದರ್ಸ್ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದ ಪಂದ್ಯಗಳನ್ನು ತಲಾ ನಾಲ್ಕು ಓವರ್‌ಗಳಿಗೆ ಹಾಗೂ ಕ್ವಾರ್ಟರ್‌ಫೈನಲ್‌ನಿಂದ ಮುಂದಿನ ಹಂತದ ಪಂದ್ಯಗಳನ್ನು ತಲಾ ಐದು ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.
ಅಂತಿಮ ಹಣಾಹಣಿಯಲ್ಲಿ ಬ್ರದರ್ಸ್ 11 ಮತ್ತು ಸೂಪರ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ ಬ್ರದರ್ಸ್ 11 ಗೆಲುವು ಸಾಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಸೂಪರ್ ರಾಯಲ್ಸ್ ತಂಡ ರನ್ನರ್‌ಅಪ್ ಸ್ಥಾನ ಪಡೆದುಕೊಂಡಿತು.
ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಪಡೆದ ಸೂಪರ್ ರಾಯಲ್ಸ್ ತಂಡಕ್ಕೆ 20 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಮೂರನೇ ಸ್ಥಾನ ಪಡೆದ ಲಾಜಿಕ್ಸ್ ತಂಡ 10 ಸಾವಿರ ರೂ. ಬಹುಮಾನ ಪಡೆದುಕೊಂಡಿತು. ನಾಲ್ಕನೇ ಸ್ಥಾನ ಗಳಿಸಿದ ಆರ್‌ಸಿಬಿ ತಂಡಕ್ಕೆ ಪದಕ ಹಾಗೂ ಟ್ರೋಫಿ ನೀಡಿ ಗೌರವಿಸಲಾಯಿತು.
ವಿಶ್ವ ಪವರ್‌ಲಿಫ್ಟರ್ ಭರತ್ ಕುಮಾರ್ ಟೂರ್ನಿಯ ನೇತೃತ್ವ ವಹಿಸಿದ್ದರು. ಎನ್‌ಒಸಿ ರಾಜ್ಯ ಮುಖ್ಯಸ್ಥ ರಾಜೇಶ್, ರಾಷ್ಟ್ರೀಯ ರೆಫರಿ ಶ್ರೀಧರ್ ಹಾಗೂ ಒಮಗೋ ಹೆಲ್ತ್‌ಕೇರ್ ಕಂಪನಿಯ ವ್ಯವಸ್ಥಾಪಕ ಜೈ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.