ತಂಡ ಬಿಟ್ಟರೂ ಸ್ನೇಹ ಮುರಿದಿಲ್ಲ: ಪಂತ್​ ಜೊತೆಗಿನ ‘ಕೊನೆಯ ಮಾತುಕತೆ’ ರಹಸ್ಯ ಬಿಚ್ಚಿಟ್ಟ ಸಂಜೀವ್​ ಗೋಯೆಂಕಾ | Sanjiv Goenka

ಎಲ್‌ಎಸ್‌ಜಿ (LSG) ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕ್ರಿಕೆಟಿಗ ರಿಷಬ್ ಪಂತ್
ಎಲ್‌ಎಸ್‌ಜಿ (LSG) ಮಾಲೀಕ ಸಂಜೀವ್ ಗೋಯೆಂಕಾ ಮತ್ತು ಕ್ರಿಕೆಟಿಗ ರಿಷಬ್ ಪಂತ್
Published on
ಕ್ರಿಕೆಟ್​: ವಿಶ್ವ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾ ಒಂದು ರೀತಿಯಲ್ಲಿ ಮುಕುಟುಪ್ರಾಯವಾದರೆ, ಭಾರತದಲ್ಲಿ ಕ್ರಿಕೆಟ್​ನ ದೃಷ್ಟಿಕೋನ ಬದಲಿಸಿದ್ದೇ ಐಪಿಎಲ್​ ಎಂದು ಹೇಳಬಹುದಾಗಿದೆ.

ವರ್ಷಕ್ಕೆ ಒಮ್ಮೆ, ಎರಡು ತಿಂಗಳ ಅವಧಿಗೆ ನಡೆಯುವ ಈ ಟೂರ್ನಿ ಸರಿಸುಮಾರು 10 ಸಾವಿರ ಕೋಟಿ ವ್ಯವಹಾರ ನಡೆಸುವ ವಿಶ್ವದ ಅಗ್ರಮಾನ್ಯ ಕ್ರಿಕೆಟ್ ಟೂರ್ನಿ ಎಂಬ ಹೆಗ್ಗಳಿಕೆ ಕೂಡ ಇದರದ್ದೆ ಆಗಿದೆ.


ಐಪಿಎಲ್​ ಎನ್ನುವುದು ಕೇವಲ ಕ್ರಿಕೆಟ್​ ಟೂರ್ನಿಯಾಗಿ ಉಳಿಯದೇ, ಮೈದಾನದಲ್ಲಿರುವ ಆಟಗಾರರ, ತಂಡದ ಮಾಲೀಕರ, ಆಟಗಾರರ ಪತ್ನಿ-ಗೆಳತಿಯರ ಎಲ್ಲರ ಸುದ್ದಿಗಳು ವಿಶ್ವಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತದೆ. ಅದರಲ್ಲೂ ಆಟಗಾರರ ಹಜಾರು, ಖರೀದಿ, ಮಾರಾಟ ಹಾಗೂ ಒಪ್ಪಂದಗಳ ಸುದ್ದಿ ಸ್ವಲ್ಪ ಜೋರಾಗಿಯೇ ಇರುತ್ತದೆ.

ಪಂತ್​ ಬದಲು ಕುಲ್​ದೀಪ್​!

ಪ್ರತಿ ಸೀಸನ್‌ನಲ್ಲೂ ಆಟಗಾರರ ಟ್ರೇಡಿಂಗ್ ವಿಚಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ. ಅದರಲ್ಲೂ ಕಳೆದ ಕೆಲವು ದಿನಗಳಿಂದ ವಿಕೆಟ್-ಕೀಪರ್ ಬ್ಯಾಟರ್ ರಿಷಬ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವನ್ನು ತೊರೆದು ಡೆಲ್ಲಿ ಕ್ಯಾಪಿಟಲ್ಸ್ (DC) ಸೇರಿಕೊಂಡಿರುವುದು ಕ್ರಿಕೆಟ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿದೆ.

ಪಂತ್ ಅವರನ್ನು ಬರೋಬ್ಬರಿ 15 ಕೋಟಿ ರೂ.ಗೆ ಡೆಲ್ಲಿಗೆ ವಾಪಸ್ ಕಳುಹಿಸಲಾಯಿತು, ಇದರೊಂದಿಗೆ LSG ಜೊತೆಗಿನ ಅವರ ಎರಡು ಸೀಸನ್‌ಗಳ ಒಡನಾಟ ಅಧಿಕೃತವಾಗಿ ಅಂತ್ಯಗೊಂಡಿತು. ಬದಲಿಗೆ ಕುಲದೀಪ್ ಯಾದವ್ 13.5 ಕೋಟಿ ರೂ.ಗೆ ಲಕ್ನೋ ತಂಡದ ಪಾಳಯ ಸೇರಿಕೊಂಡಿದ್ದಾರೆ ಎನ್ನಲಾಗಿದೆ.
ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ LSG ಸೇರಿದ್ದ ಪಂತ್ ಮತ್ತು ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ನಡುವಿನ ಸಂಬಂಧದ ಬಗ್ಗೆ ಹಲವು ಗಾಸಿಪ್‌ಗಳು ಹರಿದಾಡಿದ್ದವು. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಸ್ವತಃ ಸಂಜೀವ್ ಗೋಯೆಂಕಾ ತೆರೆ ಎಳೆದಿದ್ದಾರೆ. ತಂಡ ಬಿಟ್ಟು ಹೋದರೂ ಪಂತ್ ಜೊತೆಗಿನ ತಮ್ಮ ಬಾಂಧವ್ಯ ಎಂದಿಗೂ ಮುರಿದುಬಿದ್ದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಂತ್ ಡೆಲ್ಲಿಗೆ ಮರಳುವ ಮುನ್ನ ಮಾಲೀಕರು ಹೇಳಿದ್ದೇನು?

ಪಾಡ್‌ಕಾಸ್ಟ್​ವೊಂದರಲ್ಲಿ ಮಾತನಾಡಿದ LSG ಮಾಲೀಕ ಸಂಜೀವ್ ಗೋಯೆಂಕಾ, ವಿಕೆಟ್-ಕೀಪರ್ ಬ್ಯಾಟರ್ ಡೆಲ್ಲಿಗೆ ಮರಳುವ ಮೊದಲು ಪಂತ್ ಅವರೊಂದಿಗೆ ತಾವಿಬ್ಬರೂ ನಡೆಸಿದ ಕಡೆಯ ಮಾತುಕತೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ನಮ್ಮ ಕೊನೆಯ ಸಂಭಾಷಣೆಯು ಕೇವಲ ಆಟಗಾರರ ವಿನಿಮಯದ (ಟ್ರೇಡ್) ಬಿಸಿನೆಸ್ ಬಗ್ಗೆ ಮಾತ್ರ ಇರಲಿಲ್ಲ. ಆ ಪತ್ರ ಅಥವಾ ಒಪ್ಪಂದ ಮುಗಿದ ಮೇಲೂ ನಾವು ತುಂಬಾ ಹಾಯಾಗಿ ಮಾತನಾಡಿದ್ದೇವೆ ಎಂದು ಗೋಯೆಂಕಾ ಹೇಳಿದ್ದಾರೆ.
ಪಂತ್ ಇನ್ನು ಮುಂದೆ ತಮ್ಮ ಫ್ರ್ಯಾಂಚೈಸ್‌ನ ಭಾಗವಾಗಿಲ್ಲದಿದ್ದರೂ, ಇಬ್ಬರ ನಡುವಿನ ಸ್ನೇಹಪರ ಸಂಬಂಧ ಹಾಗೆಯೇ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ನನ್ನ ಕಡೆಯಿಂದ ಎಲ್ಲ ರೀತಿಯ ಶುಭ ಹಾರೈಕೆಗಳಿವೆ. ಮುಂದೊಂದು ದಿನ ನಾವಿಬ್ಬರೂ ಒಟ್ಟಿಗೆ ಕೂತು ಊಟ ಮಾಡುವ ಪ್ಲಾನ್ ಕೂಡ ಮಾಡಿಕೊಂಡಿದ್ದೇವೆ ಎಂದು ನಗುತ್ತಾ ಹಂಚಿಕೊಂಡಿದ್ದಾರೆ.

ಎರಡು ಕಠಿಣ ಸೀಸನ್‌ಗಳ ಬಳಿಕ ಮುಗಿದ LSG ಅಧ್ಯಾಯ

2025ರ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ. ಭಾರಿ ಮೊತ್ತಕ್ಕೆ ಖರೀದಿಸಲ್ಪಟ್ಟಾಗ ರಿಷಬ್ ಪಂತ್ ಭಾರಿ ನಿರೀಕ್ಷೆಗಳೊಂದಿಗೆ ಲಕ್ನೋ ತಂಡವನ್ನು ಸೇರಿದ್ದರು. ಇದು ಆ ಸಮಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ಪಡೆದ ದಾಖಲೆಯಾಗಿತ್ತು. ಕೆ.ಎಲ್. ರಾಹುಲ್ ತೆರವಿನ ನಂತರ ಪಂತ್ ಅವರನ್ನು ತಂಡದ ನಾಯಕನನ್ನಾಗಿಯೂ ನೇಮಿಸಲಾಗಿತ್ತು.


ಆದರೆ ಕ್ರಿಕೆಟ್ ಅಂಗಳದಲ್ಲಿ ಹೂಡಿಕೆಯ ಪ್ರಮಾಣಕ್ಕೆ ತಕ್ಕಂತೆ ಅದೃಷ್ಟ ಕೈಹಿಡಿಯಲಿಲ್ಲ. LSG ತಂಡವು 2025 ಮತ್ತು 2026ರ ಸಾಲಿನಲ್ಲಿ ಸತತವಾಗಿ ಪ್ಲೇಆಫ್ ತಲುಪುವಲ್ಲಿ ವಿಫಲವಾಯಿತು. ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪಂತ್ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದರು.

ಆದರೆ, ಎಲ್ಲಾ ವಿವಾದಗಳು ಮತ್ತು ಟ್ರೇಡಿಂಗ್ ಬಳಿಕವೂ ಮಾಲೀಕರು ಮತ್ತು ಆಟಗಾರನ ನಡುವೆ ಒಳ್ಳೆಯ ಬಾಂಧವ್ಯ ಉಳಿದುಕೊಂಡಿರುವುದು ಕ್ರೀಡಾಸ್ಪೂರ್ತಿಗೆ ಉತ್ತಮ ನಿದರ್ಶನವಾಗಿದೆ. ಸದ್ಯ ಲಕ್ನೋ ಬಿಟ್ಟು ಹಳೆಯ ಗೂಡಾದ ದೆಹಲಿ ಕ್ಯಾಪಿಟಲ್ಸ್ ತಂಡದೊಂದಿಗೆ ಪಂತ್ ಈಗ ಮತ್ತೊಂದು ಹೊಸ ಕ್ರಿಕೆಟ್ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ, (ಏಜನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net