KKR​ ಫ್ರಾಂಚೈಸಿಯಿಂದ ಶಾರುಖ್​ ಖಾನ್ 1​ ವರ್ಷಕ್ಕೆ ಎಷ್ಟು ಗಳಿಸುತ್ತಾರೆ? ಆದಾಯದ ಮೂಲಗಳೇನು?

ನಟ ಶಾರುಖ್​ ಖಾನ್ ಮತ್ತು ಅವರ ಕುಟುಂಬ
ನಟ ಶಾರುಖ್​ ಖಾನ್ ಮತ್ತು ಅವರ ಕುಟುಂಬ
Published on

ಪ್ರಮುಖ ಮುಖ್ಯಾಂಶಗಳು

  • ಅಬುಧಾಬಿಯಲ್ಲಿ ನಡೆದ ಬಹುನಿರೀಕ್ಷಿತ ಐಪಿಎಲ್-2026 ಮಿನಿ ಹರಾಜು
  • ಇಡೀ ಹರಾಜಿನಲ್ಲಿ ಎಲ್ಲರ ಗಮನ ಸೆಳೆದ ತಂಡವೆಂದರೆ, ಕೋಲ್ಕತ ನೈಟ್ ರೈಡರ್ಸ್
  • ಅತ್ಯಧಿಕ ಹಣ ಖರ್ಚು ಮಾಡಿ ಬಲಿಷ್ಠ ಆಟಗಾರರನ್ನೇ ತನ್ನ ತೆಕ್ಕೆಗೆ ಹಾಕಿಕೊಂಡ ಕೆಕೆಆರ್​
ನವದೆಹಲಿ: ನಿನ್ನೆ (ಡಿ.16) ಅಬುಧಾಬಿಯಲ್ಲಿ ನಡೆದ ಬಹುನಿರೀಕ್ಷಿತ ಐಪಿಎಲ್-2026 ಮಿನಿ ಹರಾಜಿನಲ್ಲಿ ಎಲ್ಲ 10 ಐಪಿಎಲ್​ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಖರೀದಿಸುವ ಮೂಲಕ ತಮ್ಮ ತಮ್ಮ ತಂಡಗಳನ್ನು ಬಲಪಡಿಸಿಕೊಂಡಿವೆ. ಇಡೀ ಹರಾಜಿನಲ್ಲಿ ಎಲ್ಲರ ಗಮನ ಸೆಳೆದ ತಂಡವೆಂದರೆ, ಕೋಲ್ಕತ ನೈಟ್ ರೈಡರ್ಸ್ ( KKR​ ). ಏಕೆಂದರೆ, ಅತ್ಯಧಿಕ ಹಣವನ್ನು ಖರ್ಚು ಮಾಡಿ ಬಲಿಷ್ಠ ಆಟಗಾರರನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್‌ಗಾಗಿ ಕೆಕೆಆರ್ 25.20 ಕೋಟಿ ರೂ. ಖರ್ಚು ಮಾಡಿತು. ಇದರಿಂದಾಗಿ ಗ್ರೀನ್, ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ವಿದೇಶಿ ಆಟಗಾರನಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಂದಹಾಗೆ, ಇತ್ತೀಚಿನ ದಿನಗಳಲ್ಲಿ ಕೆಕೆಆರ್ ಉತ್ತಮ ಯಶಸ್ಸನ್ನು ಸಾಧಿಸಿದೆ. 2024ರ 17ನೇ ಐಪಿಎಲ್ ಆವೃತ್ತಿಯಲ್ಲಿ ವಿಜೇತರಾಗಿ ಹೊರಹೊಮ್ಮಿದರು. ಈ ಗೆಲುವು ಅವರ ಖಾತೆಗೆ ಮತ್ತೊಂದು ಪ್ರಶಸ್ತಿಯನ್ನು ಸೇರಿಸಿದ್ದಲ್ಲದೆ, ತಂಡದ ಬ್ರಾಂಡ್ ಮೌಲ್ಯವನ್ನು ಅಪಾರವಾಗಿ ಹೆಚ್ಚಿಸಿತು. ಐಪಿಎಲ್ ಆರಂಭವಾದಾಗಿನಿಂದ ಕೆಕೆಆರ್ ಅತ್ಯಧಿಕ ಜನಪ್ರಿಯತೆಯನ್ನು ಗಳಿಸಿದೆ. ಇದರೊಂದಿಗೆ, ಕೆಕೆಆರ್​ ತಂಡದ ಪ್ರಾಯೋಜಕತ್ವದ ಮೌಲ್ಯ ಮತ್ತು ವಾಣಿಜ್ಯ ಬೆಳವಣಿಗೆಯು ಸ್ಥಿರವಾಗಿ ಹೆಚ್ಚುತ್ತಿದೆ. ಬಾಲಿವುಡ್ ನಟ ಶಾರುಖ್ ಖಾನ್ ಕೋಲ್ಕತ ನೈಟ್ ರೈಡರ್ಸ್‌ನ ಸಹ-ಮಾಲೀಕರು ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಏಕೆಂದರೆ, ಕೆಕೆಆರ್​ ಪಂದ್ಯ ನಡೆದಾಗಲೆಲ್ಲ ಶಾರೂಖ್​ ಖಾನ್​ ಖುದ್ದು ಹಾಜರಿರುತ್ತಾರೆ.

ಐಪಿಎಲ್​ನಿಂದ ಶಾರುಖ್​ ಎಷ್ಟು ದುಡಿಯುತ್ತಾರೆ?

ಉತ್ತಮ ತಂಡವನ್ನು ನಿರ್ಮಿಸಲು ಶಾರುಖ್ ಖಾನ್ ಅವರು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಅದೇ ರೀತಿ ಅವರು ಪಡೆಯುವ ಆದಾಯವೂ ಕೂಡ ಹೆಚ್ಚಾಗಿಯೇ ಇದೆ. ವಿವಿಧ ವರದಿಗಳ ಪ್ರಕಾರ, ಬಿಸಿಸಿಐ ಪ್ರತಿ ಐಪಿಎಲ್ ಫ್ರಾಂಚೈಸಿಗೆ ಐಪಿಎಲ್ ಮೂಲಕ ಗಳಿಸಿದ ಆದಾಯದ ಪಾಲನ್ನು ನೀಡುತ್ತದೆ. ಇದರಲ್ಲಿ ಮುಖ್ಯವಾಗಿ ದೂರದರ್ಶನ ಪ್ರಸಾರ ಹಕ್ಕುಗಳು ಮತ್ತು ಪ್ರಾಯೋಜಕತ್ವದ ಒಪ್ಪಂದಗಳು ಸೇರಿವೆ. ಇದರೊಂದಿಗೆ, ಐಪಿಎಲ್ ತಂಡಗಳು ಬ್ರಾಂಡ್ ಎಂಡೋರ್ಸ್​ಮೆಂಟ್​, ಫ್ರಾಂಚೈಸಿ ಪ್ರಾಯೋಜಕತ್ವಗಳು, ಪಂದ್ಯದಿಂದ ಬರುವ ಆದಾಯ, ಬಹುಮಾನದ ಹಣ ಮತ್ತು ಬಿಸಿಸಿಐ ಆಯೋಜಿಸುವ ಕಾರ್ಯಕ್ರಮಗಳಿಂದ ಬರುವ ಆದಾಯವನ್ನೂ ಪಡೆಯುತ್ತವೆ.
ಶಾರುಖ್ ಖಾನ್ ಐಪಿಎಲ್ ಮೂಲಕ ವಾರ್ಷಿಕವಾಗಿ ಸುಮಾರು 250 ರಿಂದ 270 ಕೋಟಿ ರೂ. ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಈ ಮೊತ್ತದಲ್ಲಿ, ತಂಡದ ಕಾರ್ಯಾಚರಣೆಗಳು, ಆಟಗಾರರ ಸಂಬಳ ಮತ್ತು ಇತರ ಖರ್ಚುಗಳಿಗಾಗಿ ಸುಮಾರು 100 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಾರೆ. ಈ ಖರ್ಚುಗಳ ನಂತರವೂ, ಒಂದು ಐಪಿಎಲ್ ಸೀಸನ್​ನಲ್ಲಿ ಶಾರುಖ್​ ಖಾನ್​ ಅವರ ನಿವ್ವಳ ಲಾಭ 150 ರಿಂದ 170 ಕೋಟಿ ರೂ.ಗಳ ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ.
ಶಾರುಖ್ ಖಾನ್, ಜೂಹಿ ಚಾವ್ಲಾ ಮತ್ತು ಅವರ ಪತಿ ಜಯ್ ಮೆಹ್ತಾ ಅವರು ಕೆಕೆಆರ್ ತಂಡದ ಜಂಟಿ ಮಾಲೀಕರು. ಶಾರುಖ್ ಖಾನ್ ಅವರು ಕೆಕೆಆರ್​ ಫ್ರಾಂಚೈಸಿಯ 55 ಪ್ರತಿಶತವನ್ನು ಹೊಂದಿದ್ದಾರೆ. ಈ ಪಾಲಿನ ಆಧಾರದ ಮೇಲೆ, ಒಂದು ಐಪಿಎಲ್ ಸೀಸನ್​ನಲ್ಲಿ ಶಾರುಖ್​ ಖಾನ್​ ಅವರ ವೈಯಕ್ತಿಕ ಆದಾಯ ಸುಮಾರು 80 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಭಾರತದ ಶ್ರೀಮಂತ ನಟ ಶಾರುಖ್​ ಖಾನ್

ಶಾರುಖ್ ಖಾನ್ ಅವರು ಭಾರತದ ಶ್ರೀಮಂತ ನಟನೆಂಬ ಖ್ಯಾತಿ ಗಳಿಸಿದ್ದಾರೆ. ಹುರುನ್ ಇಂಡಿಯಾ ರಿಚ್ ಲಿಸ್ಟ್ 2025ರ ಪ್ರಕಾರ, ಶಾರುಖ್​ ಖಾನ್​ ಅವರ ಒಟ್ಟು ನಿವ್ವಳ ಮೌಲ್ಯ 12,490 ಕೋಟಿ ರೂಪಾಯಿ. 2024ರಲ್ಲಿ ಅವರ ನಿವ್ವಳ ಮೌಲ್ಯ ಸುಮಾರು 7,300 ಕೋಟಿ ರೂ. ಇತ್ತು. ಕೇವಲ ಒಂದು ವರ್ಷದಲ್ಲಿ ಸುಮಾರು 5000 ಕೋಟಿ ರೂ. ಹೆಚ್ಚಿದೆ. ಈ ಹೆಚ್ಚಳವು ಅವರ ಸಿನಿಮಾ ವೃತ್ತಿಜೀವನದ ಜೊತೆಗೆ ಐಪಿಎಲ್ ಅವರಿಗೆ ಹೇಗೆ ಪ್ರಮುಖ ಆದಾಯದ ಮೂಲವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net