RCB ಅಂದ್ರೆ ಕೇವಲ ಟೀಮ್ ಅಲ್ಲ ಅದೊಂದು... ಟ್ರೋಫಿ ಗೆದ್ದ ವಾರದ ಬಳಿಕ ಕೊಹ್ಲಿ ಮಾಡಿದ ಭಾವುಕ ಪೋಸ್ಟ್​ ವೈರಲ್​! Virat Kohli

RCB ಅಂದ್ರೆ ಕೇವಲ ಟೀಮ್ ಅಲ್ಲ ಅದೊಂದು... ಟ್ರೋಫಿ ಗೆದ್ದ ವಾರದ ಬಳಿಕ ಕೊಹ್ಲಿ ಮಾಡಿದ ಭಾವುಕ ಪೋಸ್ಟ್​ ವೈರಲ್​! Virat Kohli
RCB ಅಂದ್ರೆ ಕೇವಲ ಟೀಮ್ ಅಲ್ಲ ಅದೊಂದು... ಟ್ರೋಫಿ ಗೆದ್ದ ವಾರದ ಬಳಿಕ ಕೊಹ್ಲಿ ಮಾಡಿದ ಭಾವುಕ ಪೋಸ್ಟ್​ ವೈರಲ್​! Virat Kohli
Published on

ಪ್ರಮುಖ ಮುಖ್ಯಾಂಶಗಳು

  • ಸತತ 2ನೇ ಬಾರಿಗೆ ಆರ್‌ಸಿಬಿ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಇತಿಹಾಸ ಬರೆದ ಕೊಹ್ಲಿ
  • ಕಪ್ ಗೆದ್ದ ಸಂಭ್ರಮದ ಬೆನ್ನಲ್ಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಹಂಚಿಕೊಂಡ ವಿರಾಟ್​
  • ಬೆಂಗಳೂರಿನ ಮೇಲೆ ತಮಗಿರುವ ಅಪಾರ ಪ್ರೀತಿಯನ್ನು ನೆನೆದು ಕೊಹ್ಲಿ ಮಾಡಿರುವ ಪೋಸ್ಟ್ ಜಾಲತಾಣದಲ್ಲಿ ವೈರಲ್​
  • ಎಲ್ಲವೂ ನನಗೆ ಅತ್ಯಂತ ವಿಶೇಷ ಅನಿಸಲು ಕಾರಣ ಈ ಜಾಗ ನನ್ನ ಮನೆ ಎಂದು ವಿರಾಟ್​ ಕೊಹ್ಲಿ
ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ಅಂದರೆ ಕೇವಲ ಒಂದು ತಂಡವಲ್ಲ, ಅದೊಂದು ಹಿರಿಯರು-ಕಿರಿಯರು ಎನ್ನದೆ ಕೋಟ್ಯಂತರ ಹೃದಯಗಳನ್ನು ಒಂದೆಡೆ ಬೆಸೆದ ಅಪ್ಪಟ ಭಾವನೆ! ಆ ಭಾವನೆಯ ಹೃದಯ ಬಡಿತ ಆಗಿರುವ ಕ್ರಿಕೆಟ್​ ಲೋಕದ 'ಕಿಂಗ್' ವಿರಾಟ್ ಕೊಹ್ಲಿ ( Virat Kohli ), ಮತ್ತೊಮ್ಮೆ ತಾವೇಕೆ ಬೆಂಗಳೂರಿನ ರಾಜ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸತತ ಎರಡನೇ ಬಾರಿಗೆ ಆರ್‌ಸಿಬಿ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಇತಿಹಾಸ ಬರೆದಿರುವ ರನ್ ಮಷಿನ್ ಕೊಹ್ಲಿ, ಕಪ್ ಗೆದ್ದ ಸಂಭ್ರಮದ ಬೆನ್ನಲ್ಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮೇಲೆ ತಮಗಿರುವ ಅಪಾರ ಪ್ರೀತಿಯನ್ನು ನೆನೆದು ಕೊಹ್ಲಿ ಮಾಡಿರುವ ಈ ಪೋಸ್ಟ್ ಸದ್ಯ ಇಂಟರ್ನೆಟ್ ಲೋಕದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಹೃದಯವನ್ನು ಗೆದ್ದುಕೊಂಡಿದೆ.
2026ರ ಐಪಿಎಲ್ ಟೂರ್ನಿಯ ಹೈ-ವೋಲ್ಟೇಜ್ ಫೈನಲ್ ಕದನದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಇತಿಹಾಸ ನಿರ್ಮಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಐತಿಹಾಸಿಕ ಗೆಲುವಿನ ಸುದೀರ್ಘ ಸಂಭ್ರಮಾಚರಣೆ ನಡುವೆ, ಸುಮಾರು ಒಂದು ವಾರದ ಬಳಿಕ ಆರ್‌ಸಿಬಿ ತಂಡದ ಮಾಜಿ ನಾಯಕ ಹಾಗೂ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಇಡೀ ಸೀಸನ್‌ನ ರೋಚಕ ಪಯಣವನ್ನು ನೆನಪು ಮಾಡಿಕೊಂಡಿದ್ದಾರೆ. ಟ್ರೋಫಿ ಗೆಲುವಿನ ಹಿನ್ನೆಲೆಯಲ್ಲಿ ಇಡೀ ತಂಡ ನಡೆದುಬಂದ ಹಾದಿ, ಅನುಭವಿಸಿದ ಏರಿಳಿತಗಳು ಮತ್ತು ಒತ್ತಡದ ಕ್ಷಣಗಳನ್ನು ಮೆಲುಕು ಹಾಕುತ್ತಾ ಕೊಹ್ಲಿ ಹಂಚಿಕೊಂಡಿರುವ ಈ ವಿಶೇಷ ಪೋಸ್ಟ್, ಇದೀಗ ಕ್ರಿಕೆಟ್ ವಲಯದಲ್ಲಿ ಅಕ್ಷರಶಃ ಸದ್ದು ಮಾಡುತ್ತಿದೆ.

ಇದು ನನ್ನ ಮನೆ

ನಾವು ಈ ಸೀಸನ್ ಅನ್ನು ಸಂಪೂರ್ಣ ನಂಬಿಕೆಯೊಂದಿಗೆ ಆರಂಭಿಸಿದ್ದೆವು, ಇದೀಗ ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿ ಮುಗಿಸಿದ್ದೇವೆ. ಇಡೀ ಸರಣಿಯಲ್ಲಿ ಈ ತಂಡವು ಪ್ರತಿಯೊಂದು ಭಾವನೆಯನ್ನು ಒಟ್ಟಾಗಿಯೇ ಎದುರಿಸಿದೆ. ಅದ್ಭುತ ಯಶಸ್ಸು, ಅತಿಯಾದ ಒತ್ತಡ, ಎದುರಾದ ಅಡೆತಡೆಗಳು ಮತ್ತು ಅಭಿಮಾನಿಗಳಿಂದ ಸಿಕ್ಕ ಅಚಲವಾದ ಬೆಂಬಲ... ಎಲ್ಲವನ್ನೂ ನಾವು ಜೊತೆಯಾಗಿಯೇ ಕಳೆದಿದ್ದೇವೆ. ಇದೆಲ್ಲ ನನಗೆ ಅತ್ಯಂತ ವಿಶೇಷ ಅನಿಸಲು ಕಾರಣ ಒಂದೇ ಅದೇನೆಂದರೆ, ಈ ಜಾಗ (ಬೆಂಗಳೂರು) ನನ್ನ ಮನೆ ಎಂದು ಕಿಂಗ್ ಕೊಹ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ಬೆಂಗಳೂರಿನ ಮೇಲಿರುವ ತಮ್ಮ ಅಪಾರ ಪ್ರೀತಿಯನ್ನು ಭಾವುಕವಾಗಿ ಹೊರಹಾಕಿದ್ದಾರೆ.
ಇನ್ನು ಫೈನ್​ ಪಂದ್ಯದ ವಿಚಾರಕ್ಕೆ ಬರುವುದಾದರೆ, ಗುಜರಾತಿನ ಅಹಮದಾಬಾದ್​ ಕ್ರೀಡಾಂಗಣದಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಕದನದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ತಂಡವನ್ನು ಕೇವಲ 155 ರನ್‌ಗಳಿಗೆ ನಿಯಂತ್ರಿಸಿದ ಆರ್‌ಸಿಬಿ, ಆ ಗುರಿಯನ್ನು ಇನ್ನು 2 ಓವರ್‌ಗಳು ಬಾಕಿ ಇರುವಂತೆಯೇ 18 ಓವರ್‌ಗಳಲ್ಲಿ ಅತ್ಯಂತ ಸುಲಭವಾಗಿ ಚೇಸಿಂಗ್ ಮಾಡಿ ಮುಗಿಸಿತು. ಈ ಜಯದ ಅಸಲಿ ರೂವಾರಿಯಾದ ವಿರಾಟ್ ಕೊಹ್ಲಿ ಕೇವಲ 42 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 75 ರನ್ ಚಚ್ಚಿದ್ದಲ್ಲದೆ, ವಿನ್ನಿಂಗ್ ಶಾಟ್ ಸಿಡಿಸುವ ಮೂಲಕ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.
2025ರಲ್ಲಿ ತನ್ನ ಮೊದಲ ಟ್ರೋಫಿ ಗೆದ್ದು ದಶಕಗಳ ಬರ ನೀಗಿಸಿದ್ದ ಆರ್‌ಸಿಬಿಗೆ ಇದು ಸತತ ಎರಡನೇ ಪ್ರಶಸ್ತಿಯಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ತಂಡವು ಹೆಚ್ಚು ಆತ್ಮವಿಶ್ವಾಸದಿಂದ ಕಣಕ್ಕಿಳಿದಿತ್ತು ಎಂದು ಕೊಹ್ಲಿ ತಿಳಿಸಿದ್ದಾರೆ. ಕಳೆದ ವರ್ಷದಷ್ಟು ಒತ್ತಡ ಈ ಬಾರಿ ನಮಗಿರಲಿಲ್ಲ, ನಮ್ಮ ತಂಡದ ಸಾಮರ್ಥ್ಯ ಏನೆಂಬುದು ನಮಗೆ ಚೆನ್ನಾಗಿ ಗೊತ್ತಿತ್ತು ಮತ್ತು ನಾವು ಟೇಬಲ್ ಟಾಪರ್ ಆಗಿಯೇ ಇಲ್ಲಿಗೆ ಬಂದಿದ್ದೆವು ಎಂದು ಪಂದ್ಯದ ಬಳಿಕ ಹೇಳಿದ ಕಿಂಗ್ ಕೊಹ್ಲಿ, 2008ರ ಐಪಿಎಲ್ ಆರಂಭದಿಂದಲೂ ಆರ್‌ಸಿಬಿಯನ್ನೇ ಪ್ರತಿನಿಧಿಸುತ್ತಾ ಫ್ರಾಂಚೈಸಿಯೊಂದಿಗೆ ಕೇವಲ ಒಬ್ಬ ಆಟಗಾರನಿಗಿಂತ ಮಿಗಿಲಾದ ಜನ್ಮಜನ್ಮಾಂತರದ ಭಾವನಾತ್ಮಕ ಸಂಬಂಧವನ್ನು ಹೊಂದಿರುವುದನ್ನು ಇದೀಗ ಮತ್ತೊಮ್ಮೆ ನೆನಪಿಸಿಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net