ಎಕ್ಸಿಟ್​ ಆದ ಎಲಿಸ್ ಪೆರ್ರಿ ಸ್ಥಾನಕ್ಕೆ ದೇಶಿ ಆಲ್​ರೌಂಡರ್​ ಎಂಟ್ರಿ: RCBಗೆ ಬಲ ತುಂಬ್ತಾರಾ ಮುಂಬೈ ಕುವರಿ?!

ಆಸ್ಟ್ರೇಲಿಯಾದ ಆಟಗಾರ್ತಿ ಎಲಿಸ್ ಪೆರ್ರಿ ಸ್ಥಾನಕ್ಕೆ ದೇಶೀಯ ಆಲ್‌ರೌಂಡರ್ ಸಯಾಲಿ ಸತ್ಘರೆ ಎಂಟ್ರಿ
ಆಸ್ಟ್ರೇಲಿಯಾದ ಆಟಗಾರ್ತಿ ಎಲಿಸ್ ಪೆರ್ರಿ ಸ್ಥಾನಕ್ಕೆ ದೇಶೀಯ ಆಲ್‌ರೌಂಡರ್ ಸಯಾಲಿ ಸತ್ಘರೆ ಎಂಟ್ರಿ
Published on

ಪ್ರಮುಖ ಮುಖ್ಯಾಂಶಗಳು

  • ಜನವರಿ 9 ರಂದು ಪ್ರಾರಂಭವಾಗಲಿರುವ ಮಹಿಳಾ ಪ್ರೀಮಿಯರ್​ ಲೀಗ್​
  • ಟೂರ್ನಮೆಂಟ್ ಆರಂಭಕ್ಕೂ ಮುನ್ನ​ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ಆಘಾತ
  • ಸ್ಟಾರ್ ಆಲ್‌ರೌಂಡರ್ ಮತ್ತು ಆಸ್ಟ್ರೇಲಿಯಾದ ಆಟಗಾರ್ತಿ ಎಲಿಸ್ ಪೆರ್ರಿ ಅಲಭ್ಯ
  • ವೈಯಕ್ತಿಕ ಕಾರಣಗಳಿಂದಾಗಿ ಇಡೀ ಸೀಸನ್​ನಿಂದ ಹೊರಗುಳಿಯಲಿದ್ದಾರೆ ಎಲಿಸ್​ ಪೆರ್ರಿ
ಬೆಂಗಳೂರು: ಜನವರಿ 9 ರಂದು ಪ್ರಾರಂಭವಾಗಲಿರುವ ಮಹಿಳಾ ಪ್ರೀಮಿಯರ್​ ಲೀಗ್​ (WPL) ಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡ ಭಾರಿ ಆಘಾತವನ್ನು ಅನುಭವಿಸಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಆಸ್ಟ್ರೇಲಿಯಾದ ಆಟಗಾರ್ತಿ ಎಲಿಸ್ ಪೆರ್ರಿ ವೈಯಕ್ತಿಕ ಕಾರಣಗಳಿಂದಾಗಿ ಇಡೀ ಸೀಸನ್​ನಿಂದ ಹೊರಗುಳಿಯಲಿದ್ದಾರೆ. ಆರ್‌ಸಿಬಿ ಆಡಳಿತ ಮಂಡಳಿಯು ಪೆರ್ರಿ ಬದಲಿಗೆ ದೇಶೀಯ ಆಲ್‌ರೌಂಡರ್ ಸಯಾಲಿ ಸತ್ಘರೆ ಅವರನ್ನು ನೇಮಿಸಿದೆ.
ಸತ್ಘರೆ ಅವರು ಈ ಹಿಂದೆ ಗುಜರಾತ್ ಜೈಂಟ್ಸ್ ಪರ ಆಡಿದ್ದರು. ಈ ಋತುವಿನ ಹರಾಜಿನಲ್ಲಿ (30 ಲಕ್ಷ ಮೂಲ ಬೆಲೆ) ಯಾವುದೇ ಫ್ರಾಂಚೈಸಿ, ಸತ್ಘರೆ ಅವರನ್ನು ಖರೀದಿಸಲಿಲ್ಲ. ಇತ್ತೀಚೆಗೆ, ಎಲಿಸ್ ಪೆರ್ರಿ ಅವರು ಲೀಗ್‌ನಿಂದ ಹೊರಗುಳಿಯುವುದಾಗಿ ಘೋಷಣೆ ಮಾಡಿದ ಬಳಿಕ ಸತ್ಘರೆ ಅವರಿಗೆ ಅದೃಷ್ಟ ಒಲಿದುಬಂದಿದೆ. ಎಲಿಸ್ ನಿರ್ಗಮನದ ನಂತರ, ಆರ್‌ಸಿಬಿಯಲ್ಲಿ ನಾಡಿನ್ ಡಿ ಕ್ಲರ್ಕ್ ಅವರು ಅತ್ಯುತ್ತಮ ವಿದೇಶಿ ಆಲ್‌ರೌಂಡರ್ ಆಗಿದ್ದಾರೆ.
ಅಂದಹಾಗೆ, 2024ರಲ್ಲಿ ನಡೆದ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವಲ್ಲಿ ಎಲಿಸ್ ಪೆರ್ರಿ ಪ್ರಮುಖ ಪಾತ್ರ ವಹಿಸಿದರು. ಇಡೀ ಡಬ್ಲ್ಯುಪಿಎಲ್‌ನಲ್ಲಿ ಎಲಿಸ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಈ ಲೀಗ್‌ನಲ್ಲಿ 6 ವಿಕೆಟ್ ಪ್ರದರ್ಶನ ನೀಡಿದ ಮೊದಲ ಬೌಲರ್ ಎಲಿಸ್ ಆಗಿದ್ದಾರೆ. ಈ ಲೀಗ್‌ನಲ್ಲಿ ಇದುವರೆಗೆ 25 ಪಂದ್ಯಗಳನ್ನು ಆಡಿರುವ ಈ ಅನುಭವಿ ಆಲ್‌ರೌಂಡರ್ 8 ಅರ್ಧಶತಕಗಳ ಸಹಾಯದಿಂದ 972 ರನ್ ಗಳಿಸಿದ್ದಾರೆ ಮತ್ತು 8.25 ರ ಎಕಾನಮಿಯೊಂದಿಗೆ 14 ವಿಕೆಟ್‌ಗಳನ್ನು ಪಡೆದಿದ್ದಾರೆ.

ಯಾರು ಈ ಸಯಾಲಿ ಸತ್ಘಾರೆ?

ಸಯಾಲಿ ಸತ್ಘರೆ ಟೀಮ್​ ಇಂಡಿಯಾ ಮಹಿಳಾ ಕ್ರಿಕೆಟರ್​. 2000, ಜುಲೈ 2ರಂದು ಮುಂಬೈನಲ್ಲಿ ಜನಿಸಿದರು. ರೈಟ್-ಹ್ಯಾಂಡೆಡ್ ಬ್ಯಾಟರ್ ಮತ್ತು ರೈಟ್-ಆರ್ಮ್ ಮೀಡಿಯಂ ಫಾಸ್ಟ್ ಬೌಲರ್ ಆಗಿರುವ ಈ ಆಲ್-ರೌಂಡರ್, ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಾರೆ. 2015ರಲ್ಲಿ ಲಿಸ್ಟ್ ಎ ಡೆಬ್ಯೂ ಮಾಡಿದ ಇವರು, 2025ರ ಜನವರಿಯಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಅಂತಾರಾಷ್ಟ್ರೀಯ ಡೆಬ್ಯೂ ಮಾಡಿ ತಮ್ಮ ಮೊದಲ ವಿಕೆಟ್ ಪಡೆದರು. ಇದರಿಂದ ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಉದಯೋನ್ಮುಖ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್‌ಗೂ ಆಘಾತ!
2026ರ ಡಬ್ಲ್ಯುಪಿಎಲ್ ಆರಂಭಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಆಘಾತ ಎದುರಾಗಿದೆ. ಸ್ಟಾರ್ ಆಲ್‌ರೌಂಡರ್ ಮತ್ತು ಆಸೀಸ್ ಆಟಗಾರ್ತಿ ಅನ್ನಾಬೆಲ್ ಸದರ್ಲ್ಯಾಂಡ್ ಕೂಡ ವೈಯಕ್ತಿಕ ಕಾರಣಗಳಿಂದಾಗಿ ಇಡೀ ಸೀಸನ್​ನಿಂದ ಹೊರಗುಳಿಯಲಿದ್ದಾರೆ. ಡೆಲ್ಲಿ ತಂಡದ ಆಡಳಿತ ಮಂಡಳಿಯು ಸದರ್ಲ್ಯಾಂಡ್ ಸ್ಥಾನಕ್ಕೆ ಅಲಾನಾ ಕಿಂಗ್ ಅವರನ್ನು ಕರೆತಂದಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net