ಆರ್​ಸಿಬಿ ಕೆಣಕಿ ಉಳಿದವರಿಲ್ಲ ಅನ್ನೋದಕ್ಕೆ ಇದೇ ಸಾಕ್ಷಿ! ಆರಂಭದಲ್ಲಿ ಅಬ್ಬರಿಸಿದವರ ಸ್ಥಿತಿ ಹೀನಾಯ​, ಶ್ರೇಯಸ್​ ಪಡೆಗೆ ಮುಖಭಂಗ

ಪಂಜಾಬ್​ ಕಿಂಗ್ಸ್​, ಆರ್​ಸಿಬಿ
ಪಂಜಾಬ್​ ಕಿಂಗ್ಸ್​, ಆರ್​ಸಿಬಿ
Published on

ಪ್ರಮುಖ ಮುಖ್ಯಾಂಶಗಳು

  • ಪಂಜಾಬ್ ಕಿಂಗ್ಸ್​ ಗ್ರಹಚಾರ ಯಾಕೋ ಸರಿಯಿಲ್ಲ
  • 19ನೇ ಆವೃತ್ತಿಯಲ್ಲಿ ಮೊದಲ 7 ಗೆಲುವು, ಅಲ್ಲಿಂದ ಸತತ ಆರನೇ ಹೀನಾಯ ಸೋಲು
  • ಇನ್ನೊಂದು ಪಂದ್ಯದಲ್ಲಿ ಗೆದ್ದರೂ ಪ್ಲೇಆಫ್ ಅನುಮಾನ
  • ಆರ್‌ಸಿಬಿ ಎದುರು ಮಂಡಿಯೂರಿದ ಬೆನ್ನಲ್ಲೇ ಪಂಜಾಬ್ ಕಿಂಗ್ಸ್ ಓನರ್​ ಪ್ರೀತಿ ಜಿಂಟಾ ಮುಂದೆ ಕೈಕಟ್ಟಿದ ಶ್ರೇಯಸ್ ಅಯ್ಯರ್
Punjab Kings: 19ನೇ ಆವೃತ್ತಿಯ ಐಪಿಎಲ್​ನ ಆರಂಭದಲ್ಲಿ ಸಿಂಹದಂತೆ ಘರ್ಜಿಸಿದ ಶ್ರೇಯಸ್​ ಅಯ್ಯರ್​ ನಾಯಕತ್ವದ ಪಂಜಾಬ್ ಕಿಂಗ್ಸ್​, ಸೀಸನ್​ನ ಮೊದಲಾರ್ಧದಲ್ಲಿ ಸತತ ಏಳು ಪಂದ್ಯಗಳಲ್ಲಿ ಗೆಲುವು ನೋಡುವ ಮೂಲಕ ನಮ್ಮಷ್ಟು ಬಲಿಷ್ಠ ತಂಡ ಮತ್ತೊಂದು ಇದೆಯಾ? ಎನ್ನುವಂತೆ ಗರ್ವದಲ್ಲಿ ಬೀಗುತ್ತಿತ್ತು. ಎದುರಾಳಿ ತಂಡಗಳಿಗೆ ಸಖತ್​ ಪೈಪೋಟಿ ಕೊಡುತ್ತಿದ್ದ ಪಂಜಾಬ್​ ಪಡೆಗೆ ಈಗ ಸರಣಿ ಸೋಲಿನ ಮುಖಭಂಗ ಬಿಟ್ಟರೆ ಬೇರೇನೂ ಉಳಿದಿಲ್ಲ. ಇಷ್ಟಕ್ಕೆಲ್ಲ ಕಾರಣ, ಅವತ್ತು ತನಗೆ ಸಂಬಂಧವಿಲ್ಲದ ಆರ್​ಸಿಬಿ ಪಂದ್ಯದಲ್ಲಿ ಮೂಗು ತೂರಿಸಿದ್ದು.
2026ರ ಲೀಗ್​ನಲ್ಲಿ ಮೊದಲ ಏಳು ಪಂದ್ಯಗಳನ್ನು ಗೆದ್ದು ಬೀಗಿದ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್​, ಸೋಲಿಲ್ಲದ ಸರದಾರನಂತೆ ಪ್ಲೇಆಫ್‌ಗೆ ಸುಲಭವಾಗಿ ಎಂಟ್ರಿ ಕೊಡಲಿರುವ ಮೊದಲ ತಂಡ ಎಂದು ಮೊದಲಾರ್ಧದಲ್ಲೇ ಕ್ರಿಕೆಟ್​ ಪ್ರಿಯರಿಂದ ವ್ಯಾಪಕ ಪ್ರಶಂಸೆ, ಭರವಸೆಗಳನ್ನು ಪಡೆದಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಸರಣಿ ಸೋಲುಗಳನ್ನು ನೋಡ್ತಿರುವ ಶ್ರೇಯಸ್​ ಪಡೆ, ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಗೆದ್ದು ಬೀಗಲು ಶತಾಯಗತಾಯ ಪ್ರಯತ್ನ ಮಾಡಿದ್ದೇ ಆದರೂ ಗೆಲುವು ನೋಡಲು ಆಗಲಿಲ್ಲ. ಸತತ ಆರನೇ ಸೋಲಿನಿಂದ ಕಂಗೆಟ್ಟ ಶ್ರೇಯಸ್​ ತಂಡವು ಫ್ರಾಂಚೈಸಿಯ ಸಹ ಓನರ್​ ಪ್ರೀತಿ ಜಿಂಟಾ ಎದುರು ಕೈಕಟ್ಟಿ ನಿಲ್ಲುವಂತ ಪರಿಸ್ಥಿತಿ ಬಂದಿತು.
ಭಾನುವಾರ (ಮೇ.17) ಧರ್ಮಶಾಲಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ 23 ರನ್‌ಗಳಿಂದ ಸೋತು ಭಾರೀ ಮುಖಭಂಗ ಅನುಭವಿಸಿತು. ಇದು ಪಂಜಾಬ್‌ನ ಪ್ಲೇಆಫ್ ಅವಕಾಶ ಬಹುತೇಕ ಅನುಮಾನ ಎನ್ನುವಂತೆ ಮಾಡಿದೆ. ಮತ್ತೊಂದೆಡೆ, ಗೆಲುವಿನ ಕುದುರೆ ಆಗಿದ್ದ ಪಂಜಾಬ್ ಕಿಂಗ್ಸ್ ತನಗೆ ಸಂಬಂಧವಿಲ್ಲದ ಆರ್​ಸಿಬಿ ಮತ್ತು ಕೆಕೆಆರ್​ ನಡುವಿನ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು 49ಕ್ಕೆ ಆಲ್​ಔಟ್​ ಆಗಿದ್ದನ್ನು ನೆನಪಿಸುವ ಮೂಲಕ ಲಾಯಲ್​ ಫ್ಯಾನ್ಸ್​ಗಳನ್ನು ಕೆಣಕಿತು. ಇಲ್ಲಿಂದ ನೋಡಿ ಆರಂಭವಾಗಿದ್ದು ಅಸಲಿ ಆಟ.
ಅದು ಏ.28ರಂದು ನಡೆದ ಆರ್​ಸಿಬಿ ಮತ್ತು ಕೆಕೆಆರ್​ ನಡುವಿನ ಪಂದ್ಯ. ಈ ಮ್ಯಾಚ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮತ್ತೊಮ್ಮೆ 49ಕ್ಕೆ ಆಲ್​ಔಟ್ ಆಗಲಿದೆ ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದ ಪಂಜಾಬ್ ಕಿಂಗ್ಸ್​, ರಜತ್ ಪಡೆಯ ಬ್ಯಾಟಿಂಗ್​ ವೇಳೆ ತಂಡವು 4.3 ಓವರ್​ನಲ್ಲಿ 49 ರನ್​ಗೆ 1 ವಿಕೆಟ್​ ಕಳೆದುಕೊಂಡ ಬೆನ್ನಲ್ಲೇ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವ್ಯಂಗ್ಯವಾಗಿ ಪೋಸ್ಟ್​ ಮಾಡಿತು. ಅಂದರೆ, 49ಕ್ಕೆ 10 ವಿಕೆಟ್​ಗಳನ್ನು ಕಳೆದುಕೊಂಡಿದ್ದ ಆರ್​ಸಿಬಿಗೆ 49 ಸಂಖ್ಯೆಯನ್ನು ನೆನಪಿಸುವ ಮೂಲಕ ಟೀಕಿಸಿತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ವಿರಾಟ್​ ಕೊಹ್ಲಿ, ಆರ್​ಸಿಬಿ ತಂಡದ ಆಟಗಾರರು ಮತ್ತು ಲಾಯಲ್​ ಫ್ಯಾನ್ಸ್​, ನಿಮಗೆ ಮುಂದಿನ ದಿನಗಳಲ್ಲಿ ಸರಿಯಾದ ಟಕ್ಕರ್​ ಕೊಡ್ತೀವಿ ಎಂದು ಮನಸಿನಲ್ಲೇ ಅಂದುಕೊಂಡಿದ್ದರು. ಅದರ ಪರಿಣಾಮವೋ ಏನೋ, ಅಲ್ಲಿಂದ ಇಲ್ಲಿಯವರೆಗೂ ಆಡಿರುವ ಆರು ಪಂದ್ಯಗಳಲ್ಲಿ ಆರು ಪಂದ್ಯವನ್ನೂ ಶ್ರೇಯಸ್​ ಪಡೆ ಸೋತಿರುವುದು ಗಮನಾರ್ಹ.
ಆರ್​ಸಿಬಿ ಎದುರಿಗಿನ ಪಂದ್ಯದಲ್ಲಿಯೂ ಕೆಲವು ಘಟನೆಗಳು ವೈರತ್ವವನ್ನು ಎತ್ತಿಹಿಡಿಯಿತು. ಪಂಜಾಬ್​ ಕಿಂಗ್ಸ್​ ಆಟಗಾರ ಬ್ರಾರ್ ವಿರಾಟ್​ ಬ್ಯಾಟಿಂಗ್​ ವೇಳೆ ಜೋರಾಗಿ ವಿಕೆಟ್​ನತ್ತ ಬಾಲ್​ ಬೀಸಲು ನೋಡಿದಾಗ, ಕೊಹ್ಲಿ ಸಖತ್​ ಚಮಕ್​ ನೀಡಿದರು. ಇನ್ನು ಪಂಜಾಬ್ ಬ್ಯಾಟಿಂಗ್​ನಲ್ಲಿ ಒಮರ್ಜೈ ಅವರ ವಿಕೆಟ್​ ಪಡೆದ ತಕ್ಷಣ ಟಿಮ್​ ಡೇವಿಡ್​ ತೊಡೆ ತಟ್ಟುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಖಡಕ್ ತಿರುಗೇಟು ನೀಡಿದರು. ಈ ಎಲ್ಲ ದೃಶ್ಯಗಳನ್ನು ಗಮನಿಸಿದ ಆರ್​ಸಿಬಿ ಅಭಿಮಾನಿಗಳು, ಅಂದು ನಮ್ಮನ್ನು ಕೆಣಕದೆ ಸುಮ್ಮನೆ ಇದ್ದಿದ್ರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಇಂಥ ಹೀನಾಯ ಸೋಲೂ ಬರುತ್ತಿರಲಿಲ್ಲ ಎಂದು ಸೋಷಿಯಲ್​ ಮೀಡಿಯಾಗಳಲ್ಲಿ ಶ್ರೇಯಸ್​ ಪಡೆಯನ್ನು ಟೀಕಿಸುತ್ತಿದ್ದಾರೆ. ಇದೊಂದು ರೀತಿ ಮುಯ್ಯಿಗೆ ಮುಯ್ಯಿ, ಸೇಡಿಗೆ ಸೇಡು ಎನ್ನುವಂತಾಗಿದೆ ಎಂಬುದರಲ್ಲಿ ಅನುಮಾನವೇ ಬೇಡ. ಒಟ್ಟಾರೆ, ಆರ್​ಸಿಬಿ ಎರಡನೇ ಬಾರಿ ಐಪಿಎಲ್​ ಟ್ರೋಫಿ ಎತ್ತಿಹಿಡಿಯವತ್ತ ಭರದಿಂದ ಸಾಗುತ್ತಿದ್ದು, ಯಾರಿಲ್ಲಿ ಸೋಲಿಲ್ಲದ ಸರದಾರ ಎಂಬ ಮಾತನ್ನು ಕ್ರಿಕೆಟ್​ ಪ್ರೇಮಿಗಳಿಗೆ ಗತ್ತಿನಲ್ಲಿ, ಗರ್ವದಿಂದ ನೆನಪಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net