ನಂ. 1 ಸ್ಥಾನದಲ್ಲಿದ್ದ ಪಂಜಾಬ್​ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣವೇನು? ಅಚ್ಚರಿ ಸಂಗತಿ ಬಿಚ್ಚಿಟ್ಟ ಬೌಲಿಂಗ್​ ಕೋಚ್​​! Punjab Kings

ನಂ. 1 ಸ್ಥಾನದಲ್ಲಿದ್ದ ಪಂಜಾಬ್​ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣವೇನು? ಅಚ್ಚರಿ ಸಂಗತಿ ಬಿಚ್ಚಿಟ್ಟ ಬೌಲಿಂಗ್​ ಕೋಚ್​​! Punjab Kings
ನಂ. 1 ಸ್ಥಾನದಲ್ಲಿದ್ದ ಪಂಜಾಬ್​ ತಂಡದ ಇಂದಿನ ಹೀನಾಯ ಸ್ಥಿತಿಗೆ ಕಾರಣವೇನು? ಅಚ್ಚರಿ ಸಂಗತಿ ಬಿಚ್ಚಿಟ್ಟ ಬೌಲಿಂಗ್​ ಕೋಚ್​​! Punjab Kings
Published on

ಪ್ರಮುಖ ಮುಖ್ಯಾಂಶಗಳು

  • ಪಂಜಾಬ್ ವಿರುದ್ಧ 23 ರನ್‌ಗಳ ಗೆಲುವಿನೊಂದಿಗೆ ಪ್ಲೇಆಫ್‌ಗೆ ಲಗ್ಗೆ ಇಟ್ಟ ರಾಯಲ್​ ಚಾಲೆಂಜರ್ಸ್​ ಬೆಂಗಳೂರು
  • ಸತತ 6ನೇ ಸೋಲಿನಿಂದಾಗಿ ತೀವ್ರ ಬೇಸರ ವ್ಯಕ್ತಪಡಿಸಿದ ಪಂಜಾಬ್ ಕಿಂಗ್ಸ್​ ವೇಗದ ಬೌಲಿಂಗ್​ ಕೋಚ್ ಜೇಮ್ಸ್ ಹೋಪ್ಸ್
  • ಪ್ಲೇಆಫ್ ರೇಸ್‌ನಿಂದ ಹೊರಬೀಳುವ ಹಂತ ತಲುಪಿರುವುದು ನಿರಾಶೆ ತಂದಿದೆ ಎಂದ ಜೇಮ್ಸ್ ಹೋಪ್ಸ್
  • ಪಂದ್ಯದ ಪ್ರಮುಖ ಕ್ಷಣಗಳಲ್ಲಿ ಲಯ ಕಾಯ್ದುಕೊಳ್ಳಲು ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದ ಹೋಪ್ಸ್
Punjab Kings : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ಪ್ಲೇಆಫ್ ರೇಸ್‌ನಿಂದ ಹೊರಬೀಳುವ ಹಂತಕ್ಕೆ ತಲುಪಿರುವುದು ತೀವ್ರ ನಿರಾಶೆ ಮೂಡಿಸಿದೆ ಎಂದು ಪಂಜಾಬ್ ಕಿಂಗ್ಸ್ (PBKS) ತಂಡದ ವೇಗದ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾನುವಾರ (ಮೇ 17) ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಪಂಜಾಬ್ 23 ರನ್‌ಗಳ ಸೋಲನ್ನು ಅನುಭವಿಸುವ ಮೂಲಕ ಸತತ ಆರನೇ ಬಾರಿಗೆ ಮುಗ್ಗರಿಸಿತು. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಆರ್​​ಸಿಬಿ ಈ ಸೀಸನ್‌ನಲ್ಲಿ ನಾಕೌಟ್ ಹಂತಕ್ಕೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಈ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋಪ್ಸ್, ನಿಜ ಹೇಳಬೇಕೆಂದರೆ ಇದು ಅತ್ಯಂತ ನಿರಾಶಾದಾಯಕವಾಗಿದೆ. ಸದ್ಯ ನಾವು ಪ್ಲೇಆಫ್‌ನಿಂದ ಹೊರಬೀಳುವ ಸನಿಹದಲ್ಲಿದ್ದೇವೆ, ಆದರೂ ಇನ್ನೂ ಸಣ್ಣ ಆಶಾವಾದ ಉಳಿದಿದ್ದು, ನಾವು ಕಮ್‌ಬ್ಯಾಕ್ ಮಾಡಬೇಕಿದೆ. ಬೌಲಿಂಗ್‌ನಲ್ಲಿ ಆರಂಭದಲ್ಲೇ ವಿಕೆಟ್ ಪಡೆಯುವ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲು ನಾವು ವಿಫಲವಾದೆವು ಮತ್ತು ಮುಂದಿನ ಪಂದ್ಯಗಳಲ್ಲಿ ಕೆಲವು ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ನಾವು ಪವರ್-ಪ್ಲೇ ಅವಧಿಯನ್ನು ಉತ್ತಮವಾಗಿಯೇ ನಿಯಂತ್ರಿಸಿದೆವು. ಆದರೆ, ಪ್ರತಿ ಬಾರಿ ನಾವು ಪಂದ್ಯದ ಮೇಲಿನ ಹಿಡಿತವನ್ನು ಸಾಧಿಸುತ್ತಿದ್ದಾಗಲೆಲ್ಲಾ, ಅವರು ದೊಡ್ಡ ಓವರ್‌ಗಳನ್ನು ಆಡುವ ಮೂಲಕ ಮತ್ತೆ ಪಂದ್ಯದಲ್ಲಿ ಮೇಲುಗೈ ಸಾಧಿಸುತ್ತಿದ್ದರು. ಇನ್ನು ರನ್​ ಚೇಸ್​ ಮಾಡುವಾಗ ನಾವು ಉತ್ತಮ ಆರಂಭವನ್ನೇನೋ ಪಡೆದೆವು, ಆದರೆ, ನಂತರ ಲಯ ತಪ್ಪಿದೆವು. ಆರಂಭದಲ್ಲೇ ನಾವು ಅತಿ ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮಗೆ ಹಿನ್ನಡೆಯಾಯಿತು ಎಂದು ಜೇಮ್ಸ್ ಹೋಪ್ಸ್ ವಿಶ್ಲೇಷಿಸಿದ್ದಾರೆ.
ಇದೇ ವೇಳೆ, ಪಂಜಾಬ್ ಕಿಂಗ್ಸ್ ತಂಡದ ಸತತ ಪ್ರದರ್ಶನದ ಕುಸಿತಕ್ಕೂ ಮೈದಾನದ ಹೊರಗಿನ ವಿವಾದಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೋಪ್ಸ್ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಯಾವುದೇ ಆಫ್-ಫೀಲ್ಡ್ (ಮೈದಾನದ ಹೊರಗಿನ) ವಿಚಾರಗಳು ನಮ್ಮ ಐಪಿಎಲ್ ಅಭಿಯಾನವನ್ನು ಹಳಿ ತಪ್ಪಿಸಿಲ್ಲ. ಪಂದ್ಯಗಳಲ್ಲಿ ಸಿಗುತ್ತಿದ್ದ ಲಯವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗದಿದ್ದದ್ದೇ ನಮಗೆ ಮುಳುವಾಯಿತು. ಪ್ರತಿ ಬಾರಿ ನಾವು ಪಂದ್ಯದ ಮೇಲೆ ಹಿಡಿತ ಸಾಧಿಸುವ ಹಂತಕ್ಕೆ ತಲುಪಿದಾಗಲೂ, ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೆವು ಅಥವಾ ಯಾವುದಾದರೂ ತಪ್ಪು ಮಾಡಿ ಎಡವುತ್ತಿದ್ದೆವು ಎಂದು ಹೋಪ್ಸ್​ ತಿಳಿಸಿದ್ದಾರೆ.
ಪಂಜಾಬ್ ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ ಈ ಪಂದ್ಯದಲ್ಲೂ ಸಾಧಾರಣ ಪ್ರದರ್ಶನ ನೀಡಿ, 4 ಓವರ್‌ಗಳಲ್ಲಿ 43 ರನ್ ನೀಡಿ ಕೇವಲ 1 ವಿಕೆಟ್ ಪಡೆದರು. ಆದಾಗ್ಯೂ ಎಡಗೈ ವೇಗಿಯನ್ನು ಸಮರ್ಥಿಸಿಕೊಂಡ ಕೋಚ್ ಜೇಮ್ಸ್ ಹೋಪ್ಸ್, ನಿಜ ಹೇಳಬೇಕೆಂದರೆ, ಟೂರ್ನಿಯ ದ್ವಿತೀಯಾರ್ಧದಲ್ಲಿ ಅರ್ಷದೀಪ್ ಅತ್ಯಂತ ಆಕ್ರಮಣಕಾರಿಯಾಗಿ ಮತ್ತು ಚೆನ್ನಾಗಿಯೇ ಬೌಲಿಂಗ್ ಮಾಡಿದ್ದಾರೆ. ಅವರ ಬೌಲಿಂಗ್‌ನಲ್ಲಿ ಬ್ಯಾಟರ್‌ಗಳು ಎಡವಿದ ಉದಾಹರಣೆಗಳಿವೆ. ಇದರ ಜೊತೆಗೆ ಕೆಲವು ಕ್ಯಾಚ್‌ಗಳು ಫೀಲ್ಡರ್‌ಗಳ ಮುಂದೆ ಬಿದ್ದಿದ್ದರಿಂದ ವಿಕೆಟ್ ಪಡೆಯುವ ಅವಕಾಶಗಳು ಕೈತಪ್ಪಿವೆ. ಅವರು ಪ್ರತಿ ತರಬೇತಿ ಮತ್ತು ಪಂದ್ಯದಲ್ಲೂ ಪೂರ್ಣ ಸಿದ್ಧತೆಯೊಂದಿಗೆ ಕಣಕ್ಕಿಳಿಯುವ ಒಬ್ಬ ಹೋರಾಟಗಾರ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

ಭುವಿ ಹೊಗಳಿದ ಜೋಶ್​

ಮತ್ತೊಂದೆಡೆ, ಆರ್​​ಸಿಬಿ ವೇಗಿ ಜೋಶ್ ಹ್ಯಾಜಲ್‌ವುಡ್ ಅವರು ಸಹ ಆಟಗಾರ ಭುವನೇಶ್ವರ್ ಕುಮಾರ್ ಅವರೊಂದಿಗೆ ಜೊತೆಯಾಗಿ ಬೌಲಿಂಗ್ ಮಾಡುವುದನ್ನು ಆನಂದಿಸುತ್ತಿರುವುದಾಗಿ ತಿಳಿಸಿದ್ದಾರೆ. ಭುವನೇಶ್ವರ್ ಪ್ರತಿ ಪಂದ್ಯದಲ್ಲೂ ವಿಕೆಟ್ ಪಡೆಯುತ್ತಾ ರನ್ ವೇಗಕ್ಕೆ ಬ್ರೇಕ್ ಹಾಕುತ್ತಾರೆ. ಭಾರತದ ಪರಿಸ್ಥಿತಿಗಳಲ್ಲಿ ಹಾಗೂ ಇಲ್ಲಿನ ಆಟಗಾರರ ವಿರುದ್ಧ ಆಡಿ ಬೆಳೆದಿರುವ ಅವರ ಅನುಭವ ಮತ್ತು ಜ್ಞಾನ ನಮಗಿಂತ ಭಿನ್ನವಾಗಿದೆ. ಇದು ಎದುರಾಳಿ ಆಟಗಾರರು ಹಾಗೂ ಮೈದಾನಗಳ ತಂತ್ರ ರೂಪಿಸಲು ಇಡೀ ಬೌಲಿಂಗ್ ಬಳಗಕ್ಕೆ ನೆರವಾಗುತ್ತಿದೆ ಎಂದು ಹ್ಯಾಜಲ್‌ವುಡ್ ಹೇಳಿದ್ದಾರೆ. ಇನ್ನು ಒಂದು ಪಂದ್ಯ ಬಾಕಿ ಇರುವಂತೆಯೇ ಆರ್​​ಸಿಬಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದು, ನಾಕೌಟ್ ಪಂದ್ಯಗಳಿಗೂ ಮುನ್ನ ತಂಡದ ಆಟಗಾರರು ಫ್ರೆಶ್ ಆಗಲು ಸಾಕಷ್ಟು ಬಿಡುವು ಸಿಕ್ಕಿರುವುದು ಸಂತಸ ತಂದಿದೆ ಎಂದಿದ್ದಾರೆ.
ಕ್ವಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಈ ಮೈದಾನದಲ್ಲಿ ಆಡಿ ಅನುಭವ ಪಡೆದುಕೊಂಡಿದ್ದು ಒಳ್ಳೆಯದಾಯಿತು. ಮುಂದೆ ನಮಗೆ ಇಂಥದ್ದೇ ಪಿಚ್ ಪರಿಸ್ಥಿತಿಗಳು ಎದುರಾಗಲಿವೆ. ಇಂದು ರಾತ್ರಿಯ ಪಂದ್ಯದಿಂದ ನಾವು ಕಲಿತ ಪಾಠಗಳನ್ನು ಮುಂದಿನ ಪಂದ್ಯಗಳಲ್ಲಿ ಅಳವಡಿಸಿಕೊಳ್ಳಲಿದ್ದೇವೆ. ಪ್ರಸ್ತುತ ಟೂರ್ನಿಯ ಈ ಹಂತದಲ್ಲಿ ನಮಗೆ ಉತ್ತಮ ಬಿಡುವು ಸಿಕ್ಕಿದ್ದು, ಹೈದರಾಬಾದ್ ವಿರುದ್ಧದ ಪಂದ್ಯಕ್ಕೂ ಮುನ್ನ ಹಾಗೂ ಕ್ವಾಲಿಫೈಯರ್ 1 ಪಂದ್ಯಕ್ಕೂ ಮುನ್ನ ಕೆಲ ದಿನಗಳ ಗ್ಯಾಪ್ ಇರಲಿದೆ. ಇದು ತಂಡದ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಫ್ರೆಶ್ ಆಗಲು ಸೂಕ್ತ ಸಮಯವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಕಂ‌ಬ್ಯಾಕ್ ಮಾಡಲಿದ್ದೇವೆ ಎಂದು ಜೋಶ್ ಹ್ಯಾಜಲ್‌ವುಡ್‌ ಹೇಳಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net