ಹೀನಾಯವಾಗಿ ಸೋಲುಂಡರು ವೈಭವ್​ ಬಗ್ಗೆ ಪ್ಯಾಟ್​ ಕಮ್ಮಿನ್ಸ್​ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Pat Cummins

ಹೀನಾಯವಾಗಿ ಸೋಲುಂಡರು ವೈಭವ್​ ಬಗ್ಗೆ ಪ್ಯಾಟ್​ ಕಮ್ಮಿನ್ಸ್​ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Pat Cummins
ಹೀನಾಯವಾಗಿ ಸೋಲುಂಡರು ವೈಭವ್​ ಬಗ್ಗೆ ಪ್ಯಾಟ್​ ಕಮ್ಮಿನ್ಸ್​ ಆಡಿದ ಮಾತಿಗೆ ತಲೆಬಾಗಿದ ಕ್ರೀಡಾ ಜಗತ್ತು! Pat Cummins
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ
  • ನಿನ್ನೆ ನಡೆದ ಎಲಿಮಿನೇಟರ್​ 1ರ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಹೈದರಾಬಾದ್​ ಹೀನಾಯ ಸೋಲುಂಡಿತು
  • ನಿರ್ಣಾಯಕ ಪಂದ್ಯದಲ್ಲಿ ಸೋಲುಂಡು ಪ್ರಸಕ್ತ ಐಪಿಎಲ್​ ಟೂರ್ನಿಯಿಂದಲೇ ಹೊರಬಿದ್ದ ಸನ್​ ರೈಸರ್ಸ್​ ಹೈದರಾಬಾದ್​
  • ನಿರ್ಣಾಯಕ ಸಮಯದಲ್ಲಿ ವಿಕೆಟ್ ಕಳೆದುಕೊಂಡಿದ್ದೇ ನಮ್ಮ ಸೋಲಿಗೆ ಕಾರಣ ಎಂದ ನಾಯಕ ಪ್ಯಾಟ್ ಕಮ್ಮಿನ್ಸ್
Pat Cummins : ಪ್ರಸ್ತುತ ನಡೆಯುತ್ತಿರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ನಿನ್ನೆ ನಡೆದ ಎಲಿಮಿನೇಟರ್​ 1ರ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಎದುರು ಹೀನಾಯವಾಗಿ ಸೋಲುಂಡ ಸನ್‌ರೈಸರ್ಸ್ ಹೈದರಾಬಾದ್‌ ಟೂರ್ನಿಯಿಂದಲೇ ಹೊರಬಿದ್ದಿದೆ. ನಿರ್ಣಾಯಕ ಸಮಯದಲ್ಲಿ ವಿಕೆಟ್ ಕಳೆದುಕೊಂಡಿದ್ದೇ ನಮ್ಮ ಸೋಲಿಗೆ ಕಾರಣ ಎಂದು ಸನ್‌ರೈಸರ್ಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.
ನಿನ್ನೆ (ಮೇ 27) ನ್ಯೂ ಚಂಡೀಗಢದ ಮುಲ್ಲನ್ಪುರ್ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್, ವೈಭವ್ ಸೂರ್ಯವಂಶಿ ಅವರ ಬಿರುಗಾಳಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್‌ಗಳ ನೆರವಿನಿಂದ 97 ರನ್ ಸಿಡಿಸಿದ ಸೂರ್ಯವಂಶಿ ಶತಕದ ಅಂಚಿನಲ್ಲಿ ಎಡವಿದರೆ, ಧ್ರುವ್ ಜುರೆಲ್ (50 ರನ್, 21 ಎಸೆತ) ಆಕರ್ಷಕ ಅರ್ಧಶತಕದ ಕೊಡುಗೆ ನೀಡಿದರು. ಹೈದರಾಬಾದ್ ಪರ ಪ್ರಫುಲ್ ಹಿಂಗೆ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು.
244 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ರಾಜಸ್ಥಾನ ಬೌಲರ್‌ಗಳ ಸಂಘಟಿತ ದಾಳಿಗೆ ತತ್ತರಿಸಿ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ಪರ ನಿತೀಶ್ ಕುಮಾರ್ ರೆಡ್ಡಿ (38), ಸಲೀಲ್ ಅರೋರಾ (35) ಮತ್ತು ಇಶಾನ್ ಕಿಶನ್ (33) ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ರಾಜಸ್ಥಾನ ರಾಯಲ್ಸ್ ಪರ ಮಾರಕ ದಾಳಿ ನಡೆಸಿದ ಜೋಫ್ರಾ ಆರ್ಚರ್ 3 ವಿಕೆಟ್ ಕಬಳಿಸಿದರೆ, ನಾಂದ್ರೆ ಬರ್ಗರ್, ಸುಶಾಂತ್ ಮಿಶ್ರಾ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಪಡೆದು ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.
ರಾಜಸ್ಥಾನ ರಾಯಲ್ಸ್ ವಿರುದ್ಧದ ಸೋಲಿನ ಬಳಿಕ ಮಾತನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್, ಈ ಸೋಲು ತಮಗೆ ತೀವ್ರ ನಿರಾಶೆ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಪಂದ್ಯ ನಡೆದ ಪಿಚ್ ಬ್ಯಾಟಿಂಗ್‌ಗೆ ಅತ್ಯಂತ ಪೂರಕವಾಗಿತ್ತು ಮತ್ತು 244 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಲು ಸಾಧ್ಯವಿತ್ತು. ಆದರೆ, ಪಂದ್ಯದ ಪ್ರಮುಖ ಘಟ್ಟಗಳಲ್ಲಿ ಸರಣಿ ವಿಕೆಟ್‌ಗಳನ್ನು ಕಳೆದುಕೊಂಡಿದ್ದು ನಮ್ಮ ಗೆಲುವಿನ ಅವಕಾಶವನ್ನು ಕೈತಪ್ಪಿಸಿತು ಎಂದು ಅವರು ಪಂದ್ಯದ ಬಳಿಕ ವಿಶ್ಲೇಷಿಸಿದರು.
ಇದೇ ವೇಳೆ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ ಅವರ ಬಿರುಗಾಳಿ ಬ್ಯಾಟಿಂಗ್‌ ಅನ್ನು ಕಮಿನ್ಸ್ ಮುಕ್ತಕಂಠದಿಂದ ಶ್ಲಾಘಿಸಿದರು. ಸೂರ್ಯವಂಶಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಆತ ಆ ಶೈಲಿಯಲ್ಲಿ ಬ್ಯಾಟ್ ಬೀಸುತ್ತಿರುವಾಗ ಬೌಲರ್‌ಗಳು ಏನೂ ಮಾಡಲು ಸಾಧ್ಯವಿಲ್ಲ. ಪಿಚ್ ಬ್ಯಾಟಿಂಗ್‌ಗೆ ಚೆನ್ನಾಗಿತ್ತು ನಿಜ, ಆದರೆ ಯಾರ್ಕರ್ ಎಸೆತಗಳು ಕೊಂಚ ಮಿಸ್ ಆದರೂ ಸಹ ಆತ ಅವುಗಳನ್ನು ಸ್ಟ್ಯಾಂಡ್ಸ್‌ಗೆ ಅಟ್ಟುತ್ತಿದ್ದ ರೀತಿ ಅದ್ಭುತವಾಗಿತ್ತು ಎಂದು ಯುವ ಆಟಗಾರನ ಆಟಕ್ಕೆ ಮೆಚ್ಚುಗೆ ಸೂಚಿಸಿದರು.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಕಮಿನ್ಸ್, "ಟಾಸ್ ಗೆದ್ದು ಚೇಸಿಂಗ್ ಆಯ್ದುಕೊಂಡ ನನ್ನ ನಿರ್ಧಾರಕ್ಕೆ ನಾನು ಈಗಲೂ ಬದ್ಧನಾಗಿದ್ದೇನೆ, ಏಕೆಂದರೆ ಪಿಚ್ ಕೊನೆಯವರೆಗೂ ಒಂದೇ ರೀತಿಯಾಗಿತ್ತು ಎಂದರು. ಅಲ್ಲದೆ, ತಮ್ಮ ಯುವ ಪಡೆಯ ಪ್ರದರ್ಶನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಪ್ರಫುಲ್ ಮತ್ತು ಶಾಕಿಬ್ ಹುಸೇನ್ ಅತ್ಯುತ್ತಮವಾಗಿ ಆಡಿದ್ದಾರೆ. ನಮ್ಮ ಹುಡುಗರಿಗೆ ಹೆಚ್ಚಿನ ಪಂದ್ಯಗಳನ್ನಾಡಿದ ಅನುಭವವಿಲ್ಲದಿದ್ದರೂ, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಆಟಗಾರರನ್ನು ಹೊಂದಿರುವ ನಮ್ಮ ತಂಡ ಈ ಬಾರಿ ಪ್ಲೇಆಫ್ ತಲುಪಿದೆ. ಇವರ ಒಟ್ಟಾರೆ ಪ್ರದರ್ಶನದ ಬಗ್ಗೆ ನನಗೆ ತುಂಬಾನೇ ಸಂತೋಷವಿದೆ ಎಂದು ಹೇಳಿದರು.
ನಾನು ಮೊದಲೇ ಹೇಳಿದಂತೆ ಇದು ಬ್ಯಾಟಿಂಗ್‌ಗೆ ಅತ್ಯಂತ ಸೂಕ್ತವಾದ ಪಿಚ್ ಆಗಿದ್ದು, ಇದಕ್ಕಿಂತ ಉತ್ತಮ ಪಿಚ್ ಸಿಗಲು ಸಾಧ್ಯವಿಲ್ಲ, ಪಂದ್ಯದ ಬಹುಪಾಲು ಸಮಯ ನಾವು ಅಗತ್ಯವಿದ್ದ ರನ್ ರೇಟ್ ಕಾಯ್ದುಕೊಂಡಿದ್ದೆವು, ಆದರೆ ಪ್ರಮುಖ ಘಟ್ಟಗಳಲ್ಲಿ ವಿಕೆಟ್ ಕಳೆದುಕೊಂಡಿದ್ದು ನಮ್ಮ ಗೆಲುವಿನ ಅವಕಾಶವನ್ನು ಕಸಿದುಕೊಂಡಿತು ಎಂದು ಪ್ಯಾಟ್ ಕಮಿನ್ಸ್ ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಮೂರು ವರ್ಷಗಳಲ್ಲಿ ಎರಡು ಬಾರಿ ಪ್ಲೇಆಫ್ ತಲುಪಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಈ ಬಾರಿ ಕೂದಲೆಳೆ ಅಂತರದಲ್ಲಿ ಟಾಪ್-2 ಸ್ಥಾನಕ್ಕೇರುವ ಅವಕಾಶ ಕೈತಪ್ಪಿತು, ಆದರೂ ನಮ್ಮ ಹುಡುಗರು ಈ ಸೀಸನ್‌ನಲ್ಲಿ ಅದ್ಭುತವಾಗಿ ಪ್ರದರ್ಶನ ನೀಡಿದ್ದಾರೆ ಮತ್ತು ಅವರಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಂಡದ ಆಟಗಾರರನ್ನು ಶ್ಲಾಘಿಸಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net