RCB ಕ್ಯಾಪ್ಟನ್​​ ಪಾಟಿದಾರ್‌ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಿ: ಬಿಸಿಸಿಐಗೆ ಮೈಕಲ್ ಕ್ಲಾರ್ಕ್ ಖಡಕ್ ಒತ್ತಾಯ!

RCB
RCB
Published on
ಬೆಂಗಳೂರು: ಸತತ ಎರಡು ಬಾರಿಯ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ರಜತ್ ಪಾಟಿದಾರ್ ಅವರ ಐತಿಹಾಸಿಕ ಸಾಧನೆಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿ ಅವರಂತಹ ದಿಗ್ಗಜ ಆಟಗಾರ ತಂಡದಲ್ಲಿ ಇರುವುದರಿಂದ, ಆರ್‌ಸಿಬಿಗೆ ಬ್ಯಾಕ್-ಟು-ಬ್ಯಾಕ್ ಟ್ರೋಫಿ ಗೆದ್ದುಕೊಟ್ಟ ಪಾಟಿದಾರ್ ಅವರ ನಾಯಕತ್ವ ಮತ್ತು ಬ್ಯಾಟಿಂಗ್ ಸಾಧನೆಗೆ ಸಿಗಬೇಕಾದ ಸೂಕ್ತ ಪ್ರಶಂಸೆ ಹಾಗೂ ಗಮನ ಸಿಗುತ್ತಿಲ್ಲ ಎಂದು ಕ್ಲಾರ್ಕ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಇತಿಹಾಸ ಬದಲಿಸಿದ ನಾಯಕ

ಹಲವು ವರ್ಷಗಳಿಂದ ಚಾಂಪಿಯನ್ ಪಟ್ಟಕ್ಕಾಗಿ ಕಾಯುತ್ತಿದ್ದ ಆರ್‌ಸಿಬಿ ತಂಡಕ್ಕೆ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಡುವಲ್ಲಿ ರಜತ್ ಪಾಟಿದಾರ್ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ. ಕೇವಲ ನಾಯಕತ್ವ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲೂ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಅವರು, ಪ್ರಸಕ್ತ ಸೀಸನ್‌ನಲ್ಲಿ 192.69ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ ಬರೋಬ್ಬರಿ 501 ರನ್ ಚಚ್ಚಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡ ಒತ್ತಡದಲ್ಲಿದ್ದಾಗಲೆಲ್ಲಾ ಜವಾಬ್ದಾರಿಯುತ ಹಾಗೂ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಆರ್‌ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಅವರು ಪ್ರಮುಖ ಕಪ್ತಾನನಾಗಿ ಹೊರಹೊಮ್ಮಿದ್ದಾರೆ.

ಕೊಹ್ಲಿ ಇರುವುದರಿಂದ ಪಾಟಿದಾರ್ ಮರೆಯಾಗುತ್ತಿದ್ದಾರೆ!

'ಬಿಯಾಂಡ್23 ಕ್ರಿಕೆಟ್ ಪಾಡ್‌ಕಾಸ್ಟ್'ನಲ್ಲಿ ಮಾತನಾಡಿರುವ ಮೈಕಲ್ ಕ್ಲಾರ್ಕ್, "ವಿರಾಟ್ ಕೊಹ್ಲಿ ತಂಡದಲ್ಲಿ ಇರುವುದರಿಂದ ಸಹಜವಾಗಿಯೇ ಇಡೀ ಜಗತ್ತು ಅವರ ಬಗ್ಗೆಯೇ ಮಾತನಾಡುತ್ತದೆ. ಆದರೆ ನನ್ನ ಪ್ರಕಾರ, ಈ ಟೂರ್ನಿಯಲ್ಲಿ ಎಲ್ಲರ ಕಣ್ಣಿಗೆ ಬೀಳದೆ ಅದ್ಭುತ ಸಾಧನೆ ಮಾಡಿದ (Under the radar) ಆಟಗಾರ ಎಂದರೆ ಅದು ರಜತ್ ಪಾಟಿದಾರ್. ಅವರು ತಂಡವನ್ನು ಮುನ್ನಡೆಸಿದ ರೀತಿ ಮತ್ತು ಆಟಗಾರರಿಂದ ಅತ್ಯುತ್ತಮ ಪ್ರದರ್ಶನ ಹೊರತೆಗೆದ ಶೈಲಿ ನಿಜಕ್ಕೂ ಅದ್ಭುತ. ಕಠಿಣವಾದ ಮಧ್ಯಮ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಪ್ರದರ್ಶನ ಅಪ್ರತಿಮವಾದದ್ದು," ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾಗೆ ನಾಯಕನಾಗುತ್ತಾರಾ ಪಾಟಿದಾರ್?

ಸದ್ಯ 31 ವರ್ಷ ವಯಸ್ಸಾಗಿರುವ ಪಾಟಿದಾರ್ ಅವರನ್ನು ಭಾರತೀಯ ಟಿ20 ತಂಡಕ್ಕೆ ಆಯ್ಕೆ ಮಾಡುವ ಬಗ್ಗೆ ಬಿಸಿಸಿಐ ಗಂಭೀರವಾಗಿ ಯೋಚಿಸಬೇಕು ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ. "ಅವರು ಭಾರತ ತಂಡಕ್ಕೆ ನಾಯಕರಾಗುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ, ಆದರೆ ಅವರಲ್ಲಿ ಅತ್ಯುತ್ತಮ ನಾಯಕತ್ವದ ಗುಣಗಳಿವೆ. ಟಿ20 ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಅತ್ಯಂತ ಕಠಿಣ ಕೆಲಸ. ಆದರೆ ಪಾಟಿದಾರ್ ಆ ಸ್ಥಾನದಲ್ಲಿ ಕ್ರೀಸ್‌ಗೆ ಬಂದು ಅಬ್ಬರಿಸುತ್ತಾರೆ. ಸತತ ಎರಡು ಐಪಿಎಲ್ ಟ್ರೋಫಿ ಗೆದ್ದ ನಾಯಕನನ್ನು ಬಿಸಿಸಿಐ ಮತ್ತು ಭಾರತೀಯ ಆಯ್ಕೆಗಾರರು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ. ಟಿ20 ಮಾತ್ರವಲ್ಲದೆ, ಅವರನ್ನು ಏಕದಿನ (ODI) ಕ್ರಿಕೆಟ್‌ ತಂಡದ ಆಯ್ಕೆಗೂ ಪರಿಗಣಿಸಬೇಕು," ಎಂದು ಕ್ಲಾರ್ಕ್ ಬಲವಾಗಿ ಪ್ರತಿಪಾದಿಸಿದ್ದಾರೆ.
ಭಾರತದಲ್ಲಿ ಸದ್ಯ ಸಾಕಷ್ಟು ಯುವ ಪ್ರತಿಭೆಗಳು ಟೀಮ್ ಇಂಡಿಯಾ ಜರ್ಸಿ ಧರಿಸಲು ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಬ್ಯಾಕ್-ಟು-ಬ್ಯಾಕ್ ಐಪಿಎಲ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿರುವ ರಜತ್ ಪಾಟಿದಾರ್ ಹೆಸರು ಸದ್ಯ ಆಯ್ಕೆಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇರಬೇಕಿರುವುದು ಅನಿವಾರ್ಯವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net