ಕೊನೆಗೂ ವೈಭವ್​ ವೀಕ್​ನೆಸ್​ ಗೊತ್ತಾಯ್ತಾ? ಅಚ್ಚರಿ ಹೇಳಿಕೆ ನೀಡಿದ RR ತಂಡದ ಬ್ಯಾಟಿಂಗ್​ ಕೋಚ್​! Vaibhav Sooryavanshi

ಕೊನೆಗೂ ವೈಭವ್​ ವೀಕ್​ನೆಸ್​ ಗೊತ್ತಾಯ್ತಾ? ಅಚ್ಚರಿ ಹೇಳಿಕೆ ನೀಡಿದ RR ತಂಡದ ಬ್ಯಾಟಿಂಗ್​ ಕೋಚ್​! Vaibhav Sooryavanshi
ಕೊನೆಗೂ ವೈಭವ್​ ವೀಕ್​ನೆಸ್​ ಗೊತ್ತಾಯ್ತಾ? ಅಚ್ಚರಿ ಹೇಳಿಕೆ ನೀಡಿದ RR ತಂಡದ ಬ್ಯಾಟಿಂಗ್​ ಕೋಚ್​! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಡೆಲ್ಲಿ ವಿರುದ್ಧ 21 ಎಸೆತಗಳಲ್ಲಿ 46 ರನ್ ಚಚ್ಚಿದ ವೈಭವ್ ಸೂರ್ಯವಂಶಿ, ಸ್ಲೋಯರ್ ಬಾಲ್‌ಗೆ ಔಟ್​
  • ಚೆಂಡಿನ ವೇಗವನ್ನು ಕಡಿಮೆ ಮಾಡುವುದೇ ವೈಭವ್​ ವಿರುದ್ಧ ಪ್ರಮುಖ ಅಸ್ತ್ರ ಎಂದು ಜಾಲತಾಣದಲ್ಲಿ ಚರ್ಚೆ
  • ಸ್ಲೋ ಬೌಲಿಂಗ್ ವೈಭವ್ ದೌರ್ಬಲ್ಯವಲ್ಲ ದೆಹಲಿ ಪಿಚ್​ನಲ್ಲಿ ಯಾರಾದ್ರೂ ಇಂಥಾ ಎಸೆತಗಳಿಗೆ ಪರದಾಡುತ್ತಾರೆಂದ ಬ್ಯಾಟಿಂಗ್​ ಕೋಚ್​
  • ವೈಭವ್ ಸದ್ಯದಲ್ಲೇ ತಮ್ಮ ಸ್ಫೋಟಕ ಆರಂಭವನ್ನು ದೊಡ್ಡ ಮೊತ್ತದ ಇನ್ನಿಂಗ್ಸ್ ಆಗಿ ಪರಿವರ್ತಿಸಲಿದ್ದಾರೆ ಎಂದ ಕೋಚ್​ ವಿಕ್ರಮ್ ರಾಥೋಡ್​
Vaibhav Sooryavanshi : ರಾಜಸ್ಥಾನ ರಾಯಲ್ಸ್ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸ್ಫೋಟಕ ಆರಂಭ ಪಡೆದರಾದರೂ, ಹೆಚ್ಚು ಹೊತ್ತು ಕ್ರೀಸ್ ಕಾಯ್ದುಕೊಳ್ಳುವಲ್ಲಿ ಮತ್ತೆ ವಿಫಲರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ (ಮೇ 17) ನಡೆದ ಪಂದ್ಯದಲ್ಲಿ ಕೇವಲ 21 ಎಸೆತಗಳಲ್ಲಿ 46 ರನ್ ಚಚ್ಚಿದ 15 ವರ್ಷದ ಯುವ ಪ್ರತಿಭೆ, ಡೆಲ್ಲಿ ತಂಡದ ಅನ್‌ಕ್ಯಾಪ್ಡ್ ಆಲ್‌ರೌಂಡರ್ ಮಾಧವ್ ತಿವಾರಿ ಎಸೆದ ಸ್ಲೋಯರ್ ಡೆಲಿವರಿ ತಂತ್ರಕ್ಕೆ ಬಲಿಯಾಗಿ ವಿಕೆಟ್ ಒಪ್ಪಿಸಿದರು.
ಸದ್ಯ ಸೂರ್ಯವಂಶಿ ಔಟ್ ಆದ ಶೈಲಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಎಡಗೈ ಯುವ ಬ್ಯಾಟರ್ ವಿರುದ್ಧ ಬೌಲರ್‌ಗಳು ಯಶಸ್ಸು ಸಾಧಿಸಲು ಚೆಂಡಿನ ವೇಗವನ್ನು ಕಡಿಮೆ ಮಾಡುವುದೇ ಪ್ರಮುಖ ಅಸ್ತ್ರವೇ ಎಂದು ಕ್ರಿಕೆಟ್ ಅಭಿಮಾನಿಗಳು ಹಾಗೂ ತಜ್ಞರು ಪ್ರಶ್ನಿಸುವಂತೆ ಮಾಡಿದೆ.
ಇದೇ ಪ್ರಶ್ನೆಯನ್ನು ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರ ಮುಂದೆ ಇಟ್ಟಾಗ, ಅವರು ವೈಭವ್ ಸೂರ್ಯವಂಶಿ ಅವರನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಭಾನುವಾರ (ಮೇ 17) ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇದ್ದ ಪಿಚ್ ಪರಿಸ್ಥಿತಿಗೆ ತಕ್ಕಂತೆ, ಚೆಂಡಿನ ವೇಗವನ್ನು ಕಡಿಮೆ ಮಾಡಿದಾಗ (ಪೇಸ್-ಆಫ್) ಯಾವುದೇ ಬ್ಯಾಟರ್ ಆದರೂ ರನ್ ಗಳಿಸಲು ಪರದಾಡಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಥೋಡ್, "ನೋಡಿ, ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ದೌರ್ಬಲ್ಯ ಇದ್ದೇ ಇರುತ್ತದೆ. ಆದರೆ ಸ್ಲೋ ಬೌಲಿಂಗ್ ಎದುರಿಸುವುದು ವೈಭವ್ ಅವರ ದೌರ್ಬಲ್ಯ ಎಂದು ನಾನು ಭಾವಿಸುವುದಿಲ್ಲ, ಬೇಕಿದ್ದರೆ ಎದುರಾಳಿ ಬೌಲರ್‌ಗಳು ಆ ತಂತ್ರವನ್ನು ಅವರ ವಿರುದ್ಧ ಪ್ರಯೋಗಿಸಿ ನೋಡಲಿ. ಚೆಂಡು ಕೊಂಚ ಗ್ರಿಪ್ ಆಗುವ ಇಂತಹ ಪಿಚ್‌ಗಳಲ್ಲಿ ವೇಗವನ್ನು ಬದಲಾಯಿಸಿ ಬೌಲಿಂಗ್ ಮಾಡುವುದು ಕೇವಲ ವೈಭವ್ ವಿರುದ್ಧ ಮಾತ್ರವಲ್ಲ, ಯಾವುದೇ ಬ್ಯಾಟರ್‌ಗಾದರೂ ಆಟವಾಡುವುದನ್ನು ಕಷ್ಟವಾಗಿಸುತ್ತದೆ. ವೈಭವ್ ಒಬ್ಬ ಅಪ್ರತಿಮ ಆಟಗಾರ, ಅವರ ಸಾಮರ್ಥ್ಯದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ. ಈ ಪಿಚ್‌ನ ಸ್ವರೂಪವನ್ನು ಅರಿತು ಅವರು ನಮಗೆ ಮತ್ತೊಮ್ಮೆ ಉತ್ತಮ ಆರಂಭವನ್ನೇ ಒದಗಿಸಿಕೊಟ್ಟಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಇಂತಹ ಇನ್ನಿಂಗ್ಸ್‌ಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿ, ಕ್ರೀಸ್‌ನಲ್ಲಿ ದೀರ್ಘಕಾಲ ಆಡಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ರಾಥೋಡ್​ ತಿಳಿಸಿದ್ದಾರೆ.
ವೈಭವ್ ಬ್ಯಾಟಿಂಗ್ ಮಾಡುತ್ತಿರುವ ಶೈಲಿ ಮತ್ತು ಪಂದ್ಯಕ್ಕೆ ಅವರು ಸಿದ್ಧರಾಗುವ ವಿಧಾನವನ್ನು ನೋಡಿದರೆ, ಅವರು ದೊಡ್ಡ ಇನ್ನಿಂಗ್ಸ್ ಆಡುವ ದಿನ ದೂರವಿಲ್ಲ ಎಂಬ ಭರವಸೆ ನನಗಿದೆ. ಅವರು ಶೀಘ್ರದಲ್ಲೇ ಸ್ಫೋಟಕ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಿ ಆಡುವುದನ್ನು ನಾವು ನೋಡಲಿದ್ದೇವೆ. ಸದ್ಯಕ್ಕೆ ಅವರು ಬ್ಯಾಟಿಂಗ್ ಮಾಡುತ್ತಿರುವ ರೀತಿ ನಮಗೆ ತೃಪ್ತಿ ತಂದಿದೆ ಮತ್ತು ಅವರು ಇದೇ ಆಕ್ರಮಣಕಾರಿ ಶೈಲಿಯಲ್ಲಿ ಮುಂದುವರಿಯಬೇಕೆಂದು ನಾವು ಬಯಸುತ್ತೇವೆ ಎಂದು ವಿಕ್ರಮ್ ರಾಥೋಡ್ ಮಾತು ಮುಂದುವರಿಸಿದರು.
ಇದೇ ವೇಳೆ, ಸ್ಲೋಯರ್ ಎಸೆತಗಳನ್ನು ಎದುರಿಸುವಾಗ ಮತ್ತು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯುವಾಗ ವೈಭವ್ ಅವರು ಸಹ ಆಟಗಾರ ಧ್ರುವ್ ಜುರೆಲ್ ಅವರ ಬ್ಯಾಟಿಂಗ್ ಶೈಲಿಯನ್ನು ನೋಡಿ ಕಲಿಯಬೇಕಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಥೋಡ್, ಇಬ್ಬರ ಆಟದ ಶೈಲಿಯೂ ವಿಭಿನ್ನವಾಗಿದ್ದು, ಯಾರೂ ಯಾರನ್ನೂ ನಕಲು ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಭಿನ್ನ ಆಟಗಾರರು ವಿಭಿನ್ನವಾಗಿಯೇ ಬ್ಯಾಟಿಂಗ್ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಸಾಮರ್ಥ್ಯವನ್ನು ಗುರುತಿಸಿಕೊಂಡು ಯಶಸ್ಸು ಸಾಧಿಸಬಹುದು. ಧ್ರುವ್ ಅವರು ವೈಭವ್ ಅವರಂತೆ ಆಡುವ ಅಗತ್ಯವಿಲ್ಲ, ಹಾಗೆಯೇ ವೈಭವ್ ಕೂಡ ಧ್ರುವ್ ಅವರಂತೆ ಬ್ಯಾಟ್ ಮಾಡಲು ನೋಡಬಾರದು. ಇಬ್ಬರಿಗೂ ರನ್ ಗಳಿಸಲು ತಮ್ಮದೇ ಆದ ಶಕ್ತಿ ಮತ್ತು ದಾರಿಗಳಿವೆ. ಅವರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಆಡಿದರೆ ಸುಲಭವಾಗಿ ಯಶಸ್ವಿಯಾಗಬಹುದು ಎಂದು ರಾಥೋಡ್ ತಿಳಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ರವೀಂದ್ರ ಜಡೇಜಾ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿಕೊಂಡಿರಲಿಲ್ಲ. ತಂಡದ ಪ್ರಮುಖ ಆಲ್‌ರೌಂಡರ್ ಪಂದ್ಯದಿಂದ ಹೊರಗುಳಿದಿದ್ದಕ್ಕೆ 'ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್' (ಕೆಲಸದ ಒತ್ತಡ ನಿರ್ವಹಣೆ) ಕಾರಣ ಎಂದು ನಾಯಕ ರಿಯಾನ್ ಪರಾಗ್ ತಿಳಿಸಿದ್ದರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮಾತ್ರ ಜಡೇಜಾ ಸಣ್ಣ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಇರುವುದು ತಂಡದ ಹೊಂದಾಣಿಕೆಯ ಮೇಲೆ ಪ್ರಶ್ನೆ ಮೂಡುವಂತಿದೆ.
ಇನ್ನೂ ಜಡೇಜಾ ವಿಶ್ರಾಂತಿಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಥೋಡ್, ಅವರ ಮೊಣಕಾಲಿನಲ್ಲಿ ಸಣ್ಣ ಗಾಯದ ಸಮಸ್ಯೆ ಇದೆ ಎಂದು ನಾನು ಭಾವಿಸುತ್ತೇನೆ. ಮ್ಯಾನೇಜ್‌ಮೆಂಟ್ ಅದನ್ನು ಸರಿಯಾಗಿ ನಿಭಾಯಿಸಲು ಪ್ರಯತ್ನಿಸುತ್ತಿದೆ. ಈ ಪಂದ್ಯದಲ್ಲೂ ಅವರಿಗೆ ಬ್ರೇಕ್ ನೀಡಿದರೆ ಮುಂದೆ ಅನುಕೂಲವಾಗಲಿದೆ ಎಂದು ಮ್ಯಾನೇಜ್‌ಮೆಂಟ್ ನಿರ್ಧರಿಸಿದ್ದರಿಂದ ಅವರಿಗೆ ಇಂದು ವಿಶ್ರಾಂತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಐಪಿಎಲ್ ಪ್ಲೇಆಫ್ ರೇಸ್ ತೀವ್ರ ಕುತೂಹಲ ಮೂಡಿಸುತ್ತಿದ್ದು, ರಾಜಸ್ಥಾನ ರಾಯಲ್ಸ್ ತಂಡವು ಅಗ್ರ 4ರ ಹಂತದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ತನ್ನ ಬಾಕಿ ಇರುವ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net