ಪ್ರತಿ ರನ್​ಗೆ 14000 ರೂ. ಗಳಿಕೆ: ವೈಭವ್ ಹಣ ಗಳಿಸುವ ಶರವೇಗಕ್ಕೆ ಬ್ರೇಕ್​ ಹಾಕಿದ ಕಾನೂನು! Vaibhav Sooryavanshi

ಪ್ರತಿ ರನ್​ಗೆ 14000 ರೂ. ಗಳಿಕೆ: ವೈಭವ್ ಹಣ ಗಳಿಸುವ ಶರವೇಗಕ್ಕೆ ಬ್ರೇಕ್​ ಹಾಕಿದ ಕಾನೂನು! Vaibhav Sooryavanshi
ಪ್ರತಿ ರನ್​ಗೆ 14000 ರೂ. ಗಳಿಕೆ: ವೈಭವ್ ಹಣ ಗಳಿಸುವ ಶರವೇಗಕ್ಕೆ ಬ್ರೇಕ್​ ಹಾಕಿದ ಕಾನೂನು! Vaibhav Sooryavanshi
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿ ರನ್‌ಗೆ ವೈಭವ್​ ಸೂರ್ಯವಂಶಿಗೆ ಸಿಗುತ್ತಿದೆ ಬರೋಬ್ಬರಿ 14,000 ರೂಪಾಯಿ!
  • ಕೋಟಿ ಕೋಟಿ ಆಫರ್ ಇದ್ದರೂ ವೈಭವ್ ಜೊತೆ ಜಾಹೀರಾತು ಮಾಡಲು ಕಂಪನಿಗಳ ಹಿಂದೇಟು
  • ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಬಾಲಕನ ಬ್ರ್ಯಾಂಡ್ ವ್ಯಾಲ್ಯೂ 2 ಕೋಟಿಗೆ ಏರಿಕೆ
  • ಮಾರುಕಟ್ಟೆಯ ದೊಡ್ಡ ಬ್ರ್ಯಾಂಡ್‌ಗಳಿಗೆ ವಿಲನ್ ಆದ ಮೋಟಾರು ವಾಹನ ಕಾಯ್ದೆ
Vaibhav Sooryavanshi : ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಕೇವಲ 16 ಪಂದ್ಯಗಳಲ್ಲಿ 776 ರನ್ ಸಿಡಿಸಿ, ಆರೆಂಜ್ ಕ್ಯಾಪ್ ಹಾಗೂ 'ಮೋಸ್ಟ್ ವ್ಯಾಲ್ಯೂಬಲ್ ಪ್ಲೇಯರ್' ಪ್ರಶಸ್ತಿ ಮುಡಿಗೇರಿಸಿಕೊಂಡಿರುವ 15 ವರ್ಷದ ಯುವ ಕ್ರಿಕೆಟ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಸದ್ಯ ಜಾಗತಿಕ ಕ್ರಿಕೆಟ್​ನ ಫೇವರಿಟ್​ ಆಗಿದ್ದಾರೆ. ಐಪಿಎಲ್​ನಲ್ಲಿ ತಮ್ಮ ಅದ್ಭುತ ಪ್ರದರ್ಶನದಿಂದಾಗಿ ವೈಭವ್ ಗಳಿಕೆ ಹೆಚ್ಚಾಗಿದ್ದು, ಅವರು ಹೊಡೆಯುವ ಪ್ರತಿ ರನ್‌ಗೆ ಸುಮಾರು 14,000 ರೂಪಾಯಿ ಲಭಿಸುತ್ತಿದೆ. ಇದರ ಜೊತೆಗೆ ಅವರ ಬ್ರ್ಯಾಂಡ್ ಮೌಲ್ಯವೂ ಹೆಚ್ಚಾಗಿದ್ದು, ಜಾಹೀರಾತು ದರ ಪ್ರತಿ ಡೀಲ್‌ಗೆ 50 ಲಕ್ಷದಿಂದ ಬರೋಬ್ಬರಿ 1.5 ರಿಂದ 2 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಆದಾಗ್ಯೂ, ಮಾರುಕಟ್ಟೆಯ ದೊಡ್ಡ ಆಟೋಮೊಬೈಲ್ (ವಾಹನ) ಮತ್ತು ಲೈಫ್‌ಸ್ಟೈಲ್ ಬ್ರ್ಯಾಂಡ್‌ಗಳು ಅವರೊಂದಿಗೆ ಜಾಹೀರಾತು ಮಾಡಲು ಹಿಂದೇಟು ಹಾಕುತ್ತಿದ್ದು, ಇದಕ್ಕೆ ಅವರ ಅಪ್ರಾಪ್ತ ವಯಸ್ಸು (15 ವರ್ಷ) ಹಾಗೂ ಕಾನೂನಾತ್ಮಕ ನಿಯಮಗಳು ಸೇರಿದಂತೆ ಕೆಲವು ಆಸಕ್ತಿದಾಯಕ ಕಾರಣಗಳಿವೆ.
ವೈಭವ್ ಸೂರ್ಯವಂಶಿ ಸದ್ಯ ಕೇವಲ 15 ವರ್ಷದ ಅಪ್ರಾಪ್ತ ಬಾಲಕನಾಗಿದ್ದು, ಐಪಿಎಲ್‌ನಲ್ಲಿ 'ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್' ಪ್ರಶಸ್ತಿಯಾಗಿ ಅವರಿಗೆ ಭರ್ಜರಿ 'ಟಾಟಾ ಸಿಯೆರಾ' ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಆದಾಗ್ಯೂ, ಭಾರತೀಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ಪಡೆಯಲು ಕನಿಷ್ಠ 18 ವರ್ಷ ತುಂಬಿರಬೇಕಾಗಿರುವುದು ಕಡ್ಡಾಯವಾಗಿದೆ. ಈ ಕಾರಣದಿಂದಾಗಿ ವೈಭವ್ ಕಾನೂನಾತ್ಮಕವಾಗಿ ಆ ಕಾರನ್ನು ಓಡಿಸುವಂತಿಲ್ಲ.
ಇದೇ ಹಿನ್ನೆಲೆಯಲ್ಲಿ ಯಾವುದೇ ಪ್ರಮುಖ ಆಟೋಮೊಬೈಲ್ ಕಂಪನಿಗಳು ಕೂಡ ಅಪ್ರಾಪ್ತನಾಗಿರುವ ವೈಭವ್ ಕಾರು ಅಥವಾ ಬೈಕ್ ಚಾಲನೆ ಮಾಡುವಂತಹ ಜಾಹೀರಾತುಗಳನ್ನು ನೀಡಲು ಮುಂದೆ ಬರುತ್ತಿಲ್ಲ. ಒಂದು ವೇಳೆ ನಿಯಮ ಮೀರಿ ಇಂತಹ ಜಾಹೀರಾತು ಪ್ರದರ್ಶಿಸಿದರೆ ಅದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ, ಕಂಪನಿಗಳು ದೊಡ್ಡ ಮಟ್ಟದ ಕಾನೂನು ಸಂಘರ್ಷ ಹಾಗೂ ವಿವಾದಗಳಿಗೆ ಸಿಲುಕಬೇಕಾಗುತ್ತದೆ ಎಂಬ ಭೀತಿ ಅವುಗಳನ್ನು ಕಾಡುತ್ತಿದೆ.
ಮತ್ತೊಂದೆಡೆ, ಭಾರತೀಯ ಗ್ರಾಹಕ ಸಂರಕ್ಷಣಾ ಕಾಯ್ದೆ ಹಾಗೂ ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ ನಿಯಮಾವಳಿಗಳ ಪ್ರಕಾರ, ವಯಸ್ಕರನ್ನು ಗುರಿಯಾಗಿಸಿಕೊಂಡು ಸಿದ್ಧಪಡಿಸುವ ಲೈಫ್‌ಸ್ಟೈಲ್ ವಿಭಾಗದ ಜಾಹೀರಾತುಗಳಲ್ಲಿ 15 ವರ್ಷದ ಬಾಲಕನನ್ನು ಬಳಸಿಕೊಳ್ಳಲು ಅನುಮತಿಯಿಲ್ಲ. ಪ್ರಮುಖವಾಗಿ ಬಾಡಿ ಸ್ಪ್ರೇ (ಡಿಯೋಡರೆಂಟ್ಸ್), ಪುರುಷರ ಗಡ್ಡದ ಎಣ್ಣೆ (ಬಿಯರ್ಡ್ ಆಯಿಲ್) ಮತ್ತು ಶೇವಿಂಗ್ ಕಿಟ್‌ಗಳಂತಹ ಗ್ರೂಮಿಂಗ್ ಉತ್ಪನ್ನಗಳು, ಐಷಾರಾಮಿ ಕೈಗಡಿಯಾರಗಳು ಅಥವಾ ಫ್ಯಾಂಟಸಿ ಗೇಮಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ಇವರನ್ನು ಬಳಸುವಂತಿಲ್ಲ. ಇದರೊಂದಿಗೆ ಕ್ರೆಡಿಟ್ ಕಾರ್ಡ್ ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಗಂಭೀರ ಹಣಕಾಸು ಉತ್ಪನ್ನಗಳ ಪ್ರಚಾರ ಹಾಗೂ ಜಾಹೀರಾತುಗಳಿಂದಲೂ ಅಪ್ರಾಪ್ತ ವಯಸ್ಸಿನ ಸೆಲೆಬ್ರಿಟಿಗಳನ್ನು ಕಡ್ಡಾಯವಾಗಿ ದೂರ ಇಡಬೇಕಾಗುತ್ತದೆ.
ಹಳೆಯ ದಿನಗಳಿಗೆ ಹೋಲಿಸಿದರೆ ಪ್ರಸ್ತುತ ದಿನಗಳಲ್ಲಿ ಪ್ರಮುಖ ಬ್ರ್ಯಾಂಡ್‌ಗಳು ಜಾಹೀರಾತು ವ್ಯವಹಾರದಲ್ಲಿ ತೀವ್ರ ಜಾಗರೂಕತೆ ವಹಿಸುತ್ತಿದ್ದು, ಈ ಹಿಂದೆ ಕ್ರಿಕೆಟರ್‌ಗಳೊಂದಿಗೆ 3 ರಿಂದ 5 ವರ್ಷಗಳ ದೀರ್ಘಾವಧಿ ಒಪ್ಪಂದ ಮಾಡಿಕೊಳ್ಳುತ್ತಿದ್ದ ಕಂಪನಿಗಳು ಈಗ ವೈಭವ್ ಅವರಂತಹ ಯುವ ಆಟಗಾರರೊಂದಿಗೆ ಕೇವಲ 2 ರಿಂದ 3 ವರ್ಷಗಳ ಅಲ್ಪಾವಧಿ ಒಪ್ಪಂದಕ್ಕೆ ಮಾತ್ರ ಒಲವು ತೋರುತ್ತಿವೆ, ಅಲ್ಲದೆ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಿದ ನಂತರವಷ್ಟೇ ಪೂರ್ಣ ಪ್ರಮಾಣದ ಒಪ್ಪಂದಕ್ಕೆ ಮುಂದಾಗುವ ಯೋಜನೆ ಹೊಂದಿವೆ.
ಆದಾಗ್ಯೂ, ಸ್ಪೋರ್ಟ್ಸ್ ಡ್ರಿಂಕ್ಸ್, ಕ್ರಿಕೆಟ್ ಬ್ಯಾಟ್, ನ್ಯೂಟ್ರಿಷನ್ ಮತ್ತು ಹೈ-ಪರ್ಫಾರ್ಮೆನ್ಸ್ ಶೂ ಕಂಪನಿಗಳು ವೈಭವ್ ಅವರನ್ನು ತಮ್ಮ ಬ್ರ್ಯಾಂಡ್ ರಾಯಭಾರಿಯನ್ನಾಗಿ ಮಾಡಲು ಕ್ಯೂ ನಿಂತಿವೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ವೈಭವ್ ಅವರ ಕುಟುಂಬ ಮತ್ತು ಅವರ ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್, ಅವರನ್ನು ಅತಿಯಾದ ಗ್ಲಾಮರ್ ಪ್ರಪಂಚ ಹಾಗೂ ವಾಣಿಜ್ಯೀಕರಣದಿಂದ ದೂರ ಇಡಲು ಬಯಸಿದ್ದು, ಜಾಹೀರಾತುಗಳ ಅಬ್ಬರದಿಂದಾಗಿ ಅವರ ಮೂಲ ಆಟಕ್ಕೆ ಯಾವುದೇ ಧಕ್ಕೆ ಬರಬಾರದು ಎಂಬ ನಿಲುವನ್ನು ಹೊಂದಿವೆ. ಇದೇ ಕಾರಣಕ್ಕಾಗಿ, ವೈಭವ್ ಸದ್ಯಕ್ಕೆ ತಮ್ಮ ವಯಸ್ಸಿಗೆ ಸೂಕ್ತವಾದ ಹಾಗೂ ಸುರಕ್ಷಿತವಾಗಿರುವ 'ಕಾಂಪ್ಲಾನ್' ಮತ್ತು ಗೂಗಲ್ ಪೇಗೆ ಸಂಬಂಧಿಸಿದ 'ಪಾಕೆಟ್ ಮನಿ ಆ್ಯಪ್'ನಂತಹ ಆಯ್ದ ಬ್ರ್ಯಾಂಡ್‌ಗಳನ್ನು ಮಾತ್ರ ಪ್ರಚಾರ ಮಾಡುತ್ತಿದ್ದಾರೆ.
ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿ ಅವರ ಪ್ರಸ್ತುತ ಅಂದಾಜು ಆಸ್ತಿ ಮೌಲ್ಯ ಸುಮಾರು 3 ಕೋಟಿ ರೂಪಾಯಿಗಳಾಗಿದ್ದು, ಮುಂಬರುವ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಅವರು ಕಣಕ್ಕಿಳಿಯುವ ಸಾಧ್ಯತೆಗಳ ಬಗ್ಗೆ ಭಾರಿ ನಿರೀಕ್ಷೆಗಳಿವೆ. ಒಂದು ವೇಳೆ ಅವರು ಭಾರತೀಯ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದರೆ, ಬಿಸಿಸಿಐ (BCCI) ಒಪ್ಪಂದದ ಮೂಲಕ ಅವರ ಆದಾಯ ಮತ್ತಷ್ಟು ಹೆಚ್ಚಾಗಲಿದೆ. ಬಿಸಿಸಿಐ ಇವರನ್ನು 'ಗ್ರೇಡ್-ಸಿ' (Grade-C) ಒಪ್ಪಂದಕ್ಕೆ ಸೇರಿಸಿಕೊಂಡರೆ ವಾರ್ಷಿಕ 1 ಕೋಟಿ ರೂ., 'ಗ್ರೇಡ್-ಬಿ' (Grade-B) ಒದಗಿಸಿದರೆ 3 ಕೋಟಿ ರೂ., ಅಥವಾ ನೇರವಾಗಿ 'ಗ್ರೇಡ್-ಎ' (Grade-A) ಪಟ್ಟಿಯಲ್ಲಿ ಸ್ಥಾನ ನೀಡಿದರೆ ವಾರ್ಷಿಕವಾಗಿ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಲಭಿಸಲಿದೆ. ಇದು ಅವರ ಒಟ್ಟು ಆಸ್ತಿ ಮೌಲ್ಯವನ್ನು ಅನಿರೀಕ್ಷಿತ ಮಟ್ಟಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net