ಅಯ್ಯೋ ನನ್ನ ಹೆಸರನ್ನೂ ಹೇಳ್ರಪ್ಪಾ... ಕೃಣಾಲ್​ ಪಾಂಡ್ಯ ಮಾತಿಗೆ ನಗೆಗಡಲಲ್ಲಿ ತೇಲಿದ ಆರ್​ಸಿಬಿ ಕ್ಯಾಂಪ್​! RCB

ಅಯ್ಯೋ ನನ್ನ ಹೆಸರನ್ನೂ ಹೇಳ್ರಪ್ಪಾ... ಕೃಣಾಲ್​ ಪಾಂಡ್ಯ ಮಾತಿಗೆ ನಗೆಗಡಲಲ್ಲಿ ತೇಲಿದ ಆರ್​ಸಿಬಿ ಕ್ಯಾಂಪ್​! RCB
ಅಯ್ಯೋ ನನ್ನ ಹೆಸರನ್ನೂ ಹೇಳ್ರಪ್ಪಾ... ಕೃಣಾಲ್​ ಪಾಂಡ್ಯ ಮಾತಿಗೆ ನಗೆಗಡಲಲ್ಲಿ ತೇಲಿದ ಆರ್​ಸಿಬಿ ಕ್ಯಾಂಪ್​! RCB
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ ಗುಜರಾತ್ ಟೈಟನ್ಸ್ ವಿರುದ್ಧ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಐಪಿಎಲ್​ ಐಪಿಎಲ್ ಫೈನಲ್ ತಲುಪಿದ ಆರ್​ಸಿಬಿ
  • ತಂಡದ ಆಟಗಾರರ ಬದ್ಧತೆ ಮತ್ತು ಸಂಘಟಿತ ಪ್ರದರ್ಶನವನ್ನು ಕೊಂಡಾಡಿದ ಮೆಂಟರ್ ದಿನೇಶ್ ಕಾರ್ತಿಕ್
  • ನಿನ್ನೆ ನಾವು ಚಾಂಪಿಯನ್ನರಂತೆ ಆಡಿದ್ದೇವೆ ಫೈನಲ್​ನಲ್ಲೂ ಇದೇ ರೀತಿಯ ಪ್ರದರ್ಶನ ಬರಲಿ ಎಂದರು ಕಾರ್ತಿಕ್​
ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಭರ್ಜರಿ ಜಯ ಸಾಧಿಸಿ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB ) ತಂಡದ ಆಟಗಾರರ ಬದ್ಧತೆ ಮತ್ತು ಸಂಘಟಿತ ಪ್ರದರ್ಶನವನ್ನು ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 1 ಪಂದ್ಯದ ಗೆಲುವಿನ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತನಾಡಿದ ಕಾರ್ತಿಕ್, ತಂಡವು ಇಡೀ ಪಂದ್ಯದುದ್ದಕ್ಕೂ ನಿಜವಾದ "ಚಾಂಪಿಯನ್ನರಂತೆ ಆಡಿದೆ" ಎಂದು ಪ್ರಶಂಸಿಸಿದರು. ಈ ವೇಳೆ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಭಾಷಣದಲ್ಲಿ ಭಾಗಿಯಾಗಿದ್ದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಪಂದ್ಯದ ಅತ್ಯುತ್ತಮ ಪ್ರದರ್ಶನಕಾರರನ್ನು ಶ್ಲಾಘಿಸುವ ಉತ್ಸಾಹದಲ್ಲಿ ಕೃಣಾಲ್ ಪಾಂಡ್ಯ ಅವರ ಹೆಸರನ್ನು ಪ್ರಸ್ತಾಪಿಸುವುದನ್ನೇ ಬಹುತೇಕ ಮರೆತುಬಿಟ್ಟಿದ್ದರು! ಈ ವೇಳೆ ಕೃಣಾಲ್​ ಪಾಂಡ್ಯ ಆಡಿದ ಮಾತು ಎಲ್ಲರನ್ನು ಒಮ್ಮೆ ನಗೆಗಡಲಲ್ಲಿ ತೇಲಿಸಿತು.
ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ, ಐಪಿಎಲ್ ಪ್ಲೇ-ಆಫ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತವಾದ 254/5 ರನ್‌ಗಳ ದಾಖಲೆಯ ಬೃಹತ್ ಸ್ಕೋರ್ ಕಲೆಹಾಕಿತು. ಬಳಿಕ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದ ಗುಜರಾತ್ ಟೈಟನ್ಸ್ ತಂಡವನ್ನು ಕೇವಲ 162 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ ಆರ್‌ಸಿಬಿ ಸುಲಭ ಹಾಗೂ ಐತಿಹಾಸಿಕ ಜಯ ದಾಖಲಿಸಿತು. ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಕಾರ್ತಿಕ್, "ಇದು ಅತ್ಯಂತ ಶಿಸ್ತುಬದ್ಧ ಹಾಗೂ ವೃತ್ತಿಪರ ಆಟವಾಗಿತ್ತು. ನಂಬರ್ 1 ಮತ್ತು ನಂಬರ್ 2 ತಂಡಗಳ ನಡುವಿನ ಪ್ಲೇ-ಆಫ್ ಪಂದ್ಯ ಯಾವಾಗಲೂ ದೊಡ್ಡ ಮಟ್ಟದ ಒತ್ತಡದಿಂದ ಕೂಡಿರುತ್ತದೆ, ಆದರೆ ನಾವು ನಿಜವಾದ ಚಾಂಪಿಯನ್ನರಂತೆ ಆಡಿದ್ದೇವೆ. ಇದೇ ಪ್ರದರ್ಶನವನ್ನು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ 2026ರ ಫೈನಲ್ ಪಂದ್ಯದಲ್ಲೂ ಪುನರಾವರ್ತಿಸಿ ಟ್ರೋಫಿ ಗೆಲ್ಲಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನಿಂಗ್ಸ್‌ನ ಆರಂಭದಿಂದಲೇ ಆರ್‌ಸಿಬಿ ಬ್ಯಾಟರ್‌ಗಳು ತೋರಿದ ಆಕ್ರಮಣಕಾರಿ ಆಟವನ್ನು ಪ್ರತ್ಯೇಕವಾಗಿ ಉಲ್ಲೇಖಿಸಿದ ಕಾರ್ತಿಕ್, ತಂಡವು ಯಾವುದೇ ಹಂತದಲ್ಲೂ ಗುಜರಾತ್ ಟೈಟನ್ಸ್ ಬೌಲರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸಲು ಅವಕಾಶ ನೀಡಲೇ ಇಲ್ಲ ಎಂದು ಹೆಮ್ಮೆಯಿಂದ ಹೇಳಿದರು. ಆರಂಭದಿಂದಲೇ ಹುಡುಗರು ಮೈದಾನದಲ್ಲಿ ತೋರಿದ ರಣೋತ್ಸಾಹ ಮತ್ತು ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಅದ್ಭುತವಾಗಿತ್ತು. ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಪಂದ್ಯಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಇಡೀ ತಂಡವಾಗಿ ನಾವೆಲ್ಲರೂ ಕೊನೆಯವರೆಗೂ ಅದೇ ವೇಗ ಹಾಗೂ ರನ್‌ರೇಟ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದೆವು ಎಂದು ಇಡೀ ಬ್ಯಾಟಿಂಗ್ ಪಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ದೊಡ್ಡ ಪಂದ್ಯಗಳಲ್ಲಿ ಸಾಮಾನ್ಯವಾಗಿ ತಂಡಗಳು ಒತ್ತಡಕ್ಕೆ ಮಣಿದು ಹಿನ್ನಡೆ ಅನುಭವಿಸುತ್ತವೆ, ಆದರೆ ನಾವು ಮಾತ್ರ ಯಾವುದೇ ಹಂತದಲ್ಲೂ ಧೃತಿಗೆಡದೆ ನಿರಂತರವಾಗಿ ಮುನ್ನುಗ್ಗಿದೆವು ಎಂದು ದಿನೇಶ್ ಕಾರ್ತಿಕ್ ಹೆಮ್ಮೆಯಿಂದ ಹೇಳಿದ್ದಾರೆ. ಕೇವಲ 39 ಎಸೆತಗಳಲ್ಲಿ ಅಜೇಯ 93 ರನ್‌ ಸಿಡಿಸಿ ಆರ್‌ಸಿಬಿ ತಂಡದ ಸ್ಕೋರ್‌ ಅನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ದ ನಾಯಕ ರಜತ್ ಪಾಟೀದಾರ್ ಅವರ ರಣರೋಚಕ ಬ್ಯಾಟಿಂಗ್ ಅನ್ನು ಡ್ರೆಸ್ಸಿಂಗ್ ರೂಮ್ ಭಾಷಣದಲ್ಲಿ ಪ್ರತ್ಯೇಕವಾಗಿ ಕೊಂಡಾಡಿದ ಕಾರ್ತಿಕ್, ರಜತ್ ಆಡಿದ ಇನ್ನಿಂಗ್ಸ್ ನಿಜಕ್ಕೂ ನಂಬಲಾಗದ್ದು, ಇಂತಹ ಅತಿ ಒತ್ತಡದ ಪಂದ್ಯದಲ್ಲಿ ನಾಯಕನಾಗಿ ಮುಂಚೂಣಿಯಲ್ಲಿ ನಿಂತು ಎದುರಾಳಿ ಬೌಲರ್‌ಗಳನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದಾರೆ ಎಂದು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಇನ್ನೂ ಪಂದ್ಯಕ್ಕೂ ಮುನ್ನವೇ ಆಟಗಾರರ ರಣೋತ್ಸಾಹಕ್ಕೆ ಹೆಚ್ಚಿನ ಒತ್ತು ನೀಡಿ ತಂಡದಲ್ಲಿ ಹೊಸ ಚೈತನ್ಯ ತುಂಬಿದ್ದ ವಿರಾಟ್ ಕೊಹ್ಲಿ ಅವರ ಪಾತ್ರವನ್ನು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಪ್ರಶಂಸಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಕಾರ್ತಿಕ್, ಪಂದ್ಯ ಆರಂಭವಾಗುವ ಮುನ್ನವೇ ವಿರಾಟ್ ಕೊಹ್ಲಿ ನಮ್ಮ ಬಾಡಿ ಲ್ಯಾಂಗ್ವೇಜ್ ಬಲಿಷ್ಠವಾಗಿರಬೇಕು ಎಂದು ಹೇಳಿದ್ದರು, ಅದರಂತೆ ಕಳೆದ ಕೆಲವು ವಾರಗಳಿಗೆ ಹೋಲಿಸಿದರೆ ಈ ಪಂದ್ಯದಲ್ಲಿ ಹುಡುಗರ ಆಟಿಟ್ಯೂಡ್ ಅದ್ಭುತವಾಗಿತ್ತು. ಎದುರಾಳಿಗಳನ್ನು ಆಲೌಟ್ ಮಾಡಲೇಬೇಕು ಎಂಬ ನಮ್ಮ ಹಠ ಹಾಗೂ ರಣತಂತ್ರದ ಫಲವಾಗಿ ಪವರ್‌ಪ್ಲೇನಲ್ಲೇ ನಾವು ಪಂದ್ಯವನ್ನು ಬಹುತೇಕ ನಮ್ಮದಾಗಿಸಿಕೊಂಡಿದ್ದೆವು ಎಂದಿದ್ದಾರೆ. ಕಾರ್ತಿಕ್ ಹೇಳಿದಂತೆಯೇ, 255 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವನ್ನು ಮೊದಲ 6 ಓವರ್‌ಗಳಲ್ಲೇ ಕೇವಲ 51 ರನ್‌ಗಳಿಗೆ 5 ವಿಕೆಟ್ ಉರುಳಿಸಿ ಆರ್‌ಸಿಬಿ ಬೌಲರ್‌ಗಳು ಬೆನ್ನುಲುಬು ಮುರಿದರು. ಇದರ ಪರಿಣಾಮವಾಗಿ ರಾಹುಲ್ ತೆವಾಟಿಯಾ (68 ರನ್) ಒಂಟಿ ಹೋರಾಟ ನಡೆಸಿದರೂ ಗುಜರಾತ್ ಚೇತರಿಸಿಕೊಳ್ಳಲು ಸಾಧ್ಯವಾಗದೇ ಶರಣಾಯಿತು.
ಅಂದಹಾಗೆ, ಆರ್‌ಸಿಬಿ ಹಂಚಿಕೊಂಡಿರುವ ವಿಶೇಷ ವಿಡಿಯೋದಲ್ಲಿ, ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ತಂಡದ ಸಹ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಮುಂಬರುವ ಫೈನಲ್ ಪಂದ್ಯದ ಮೇಲೆಯೇ ನಮ್ಮ ಸಂಪೂರ್ಣ ಗಮನ ಇರಬೇಕು ಎಂದು ಮನವಿ ಮಾಡಿದರು. ಆದರೆ, ಅವರು ತಮ್ಮ ಭಾಷಣವನ್ನು ಮುಗಿಸಲು ಹೊರಟ ತಕ್ಷಣವೇ ಮಧ್ಯಪ್ರವೇಶಿಸಿದ ಕೃಣಾಲ್ ಪಾಂಡ್ಯ, "ನನ್ನ ಹೆಸರನ್ನು ಪ್ರಸ್ತಾಪಿಸುವುದನ್ನೇ ಮರೆತುಬಿಟ್ಟೆಯಲ್ಲ ಸಹೋದರ (ಮೇರಾ ನಾಮ್ ಭೂಲ್ ಗಯಾ ಭಾಯಿ)" ಎಂದು ತಮಾಷೆಯಾಗಿ ಕಾಲೆಳೆದರು. ತಕ್ಷಣವೇ ಎಚ್ಚೆತ್ತ ದಿನೇಶ್ ಕಾರ್ತಿಕ್, "ಕೃಣಾಲ್, ನಿಜಕ್ಕೂ ಅದ್ಭುತ ಪ್ರದರ್ಶನ" ಎಂದು ಹೇಳುತ್ತಾ ತಮ್ಮ ಭಾಷಣಕ್ಕೆ ಕೆಲವು ಪ್ರಮುಖ ಮಾತುಗಳನ್ನು ಸೇರಿಸಿದರು.
ಮುಂದುವರಿದು ಮಾತನಾಡಿದ ಕಾರ್ತಿಕ್, "ಇನ್ನು ನಾಲ್ಕೇ ದಿನಗಳಲ್ಲಿ ನಾವು ಅತಿ ದೊಡ್ಡ ಪಂದ್ಯವನ್ನು (ಫೈನಲ್) ಆಡಲಿದ್ದೇವೆ ಮತ್ತು ನೀವೆಲ್ಲರೂ ಅದಕ್ಕೆ ಸಜ್ಜಾಗಿದ್ದೀರಿ ಎಂಬ ನಂಬಿಕೆ ನನಗಿದೆ. ಆದರೆ, ಮುಂದಿನ ಒಂದೆರಡು ದಿನಗಳನ್ನು ನಾವೆಲ್ಲರೂ ಜಂಟಿಯಾಗಿ ಎಂಜಾಯ್ ಮಾಡೋಣ ಮತ್ತು ಆನಂದಿಸೋಣ. ಒಮ್ಮೆ ನಾವು ಅಹಮದಾಬಾದ್ ತಲುಪಿದ ತಕ್ಷಣ ನಮ್ಮ ಸಂಪೂರ್ಣ ಗಮನವನ್ನು ಪಂದ್ಯದತ್ತ ಕೇಂದ್ರೀಕರಿಸೋಣ. ಸದ್ಯಕ್ಕಂತೂ ಹುಡುಗರು ಅದ್ಭುತ ಆಟವಾಡಿದ್ದೀರಿ. ಕ್ವಾಲಿಫೈಯರ್‌ನಂತಹ ದೊಡ್ಡ ಪಂದ್ಯದಲ್ಲಿ ನಾವಿಂದು ಚಾಂಪಿಯನ್ನರಂತೆ ಆಡಿದ್ದೇವೆ. ಮೇ 31 ರಂದು ನಡೆಯಲಿರುವ ಫೈನಲ್‌ನಲ್ಲೂ ಇದೇ ರೀತಿಯ ಆಕ್ರಮಣಕಾರಿ ಕ್ರಿಕೆಟ್ ಆಡಿ ಇತಿಹಾಸ ಸೃಷ್ಟಿಸೋಣ" ಎಂದು ಆಟಗಾರರಲ್ಲಿ ಜೋಶ್ ತುಂಬಿದರು.
ಇದೇ ವೇಳೆ ಭಾಷಣದ ಕೊನೆಯಲ್ಲಿ ಕೃಣಾಲ್ ಪಾಂಡ್ಯ ಅವರನ್ನು ಮತ್ತೊಮ್ಮೆ ನೆನೆದ ದಿನೇಶ್ ಕಾರ್ತಿಕ್, "ವೆಲ್ ಡನ್ ಕೃಣಾಲ್, ಬ್ಯಾಟಿಂಗ್‌ನಲ್ಲಿ ನಿನ್ನ ಶ್ರಮ ಅದ್ಭುತವಾಗಿತ್ತು" ಎಂದು ಮಗದೊಮ್ಮೆ ತಮಾಷೆಯಾಗಿ ಬೆನ್ನು ತಟ್ಟಿದರು. ಕಾರ್ತಿಕ್ ಅವರ ಈ ಸಮಯಪ್ರಜ್ಞೆಯ ಮಾತುಗಳನ್ನು ಕೇಳಿ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ವಿರಾಟ್ ಕೊಹ್ಲಿ ಸೇರಿದಂತೆ ಇಡೀ ಆರ್‌ಸಿಬಿ ತಂಡದ ಆಟಗಾರರು ಹಾಗೂ ಸಿಬ್ಬಂದಿ ಒಮ್ಮೆಲೇ ನಗೆಗಡಲಲ್ಲಿ ತೇಲಿದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net